ಸಾರಾಂಶ
ಕನ್ಯಾಕುಮಾರಿ : ಭಾರತದ ದಕ್ಷಿಣ ತುತ್ತತುದಿ ಕನ್ಯಾಕುಮಾರಿಯ ವಿವೇಕಾನಂದರ ಧ್ಯಾನ ಮಂಟಪದಲ್ಲಿ ಪ್ರಧಾನಿ ನರೇಂದ್ರ ಮೋದಿ ತಮ್ಮ 2 ದಿನದ ಜಪ-ತಪ-ಧ್ಯಾನ ಮುಂದುವರೆಸಿದ್ದಾರೆ. ಶುಕ್ರವಾರ ಮುಂಜಾನೆ ತಮ್ಮ ಅನುಷ್ಠಾನದ ಅಂಗವಾಗಿ ಸೂರ್ಯನಿಗೆ ಅರ್ಘ್ಯ ಅರ್ಪಿಸಿದರು. ಬಳಿಕ ಇಡೀ ದಿನ ವಿವೇಕಾನಂದರ ಪ್ರತಿಮೆ ಮುಂದೆ ಕುಳಿತು ಧ್ಯಾನಮಂಟಪದಲ್ಲಿ ಜಪತಪಾದಿಗಳನ್ನು ನೆರವೇರಿಸಿದರು.
ಅಪ್ಪಟ ಕೇಸರಿ ವಸ್ತ್ರ ಧರಿಸಿ ಸನ್ಯಾಸಿಯಂತೆ ಕಂಗೊಳಿಸುತ್ತಿರುವ ಪ್ರಧಾನಿ ಮೋದಿಯ ಚಿತ್ರಗಳನ್ನು ಬಿಜೆಪಿ ಟ್ವೀಟ್ ಮಾಡಿದೆ. ಸೂರ್ಯೋದಯದ ಸಂದರ್ಭದಲ್ಲಿ ಪವಿತ್ರ ಜಲವನ್ನು ಒಳಗೊಂಡಿದ್ದ ಪಂಚಪಾತ್ರೆಯನ್ನು ಹಿಡಿದು ಆದಿತ್ಯದೇವನಿಗೆ ನಮಿಸುತ್ತಾ ಹಿಂದೂಮಹಾಸಾಗರಕ್ಕೆ ಅರ್ಪಿಸಿದರು. ಬಳಿಕ ಸೂರ್ಯನಿಗೆ ಅಭಿಮುಖವಾಗಿ ಹಿಂದೂಮಹಾಸಾಗರದ ಎದುರಿಗೆ ಕುಳಿತು ಕೆಲಕಾಲ ಧ್ಯಾನ ಮಾಡಿದರು. ಅರ್ಘ್ಯ ಬಿಟ್ಟರು.
ಇಷ್ಟೇ ಅಲ್ಲದೆ ಧ್ಯಾನಮಂಟಪದ ಪ್ರಶಾಂತ ವಾತಾವರಣದಲ್ಲಿ ಭಸ್ಮಧಾರಿ ಮೋದಿ ‘ಓಂ’ ಎಂದು ಮುದ್ರಿಸಿರುವ ಚಿಹ್ನೆಯ ಮುಂದೆ ಜಪಮಾಲೆ ಹಿಡಿದು ಮತ್ತೊಂದು ಹಸ್ತದ ಬೆರಳುಗಳಲ್ಲಿ ವಿವಿಧ ಮುದ್ರಾ ಚಿಹ್ನೆಗಳನ್ನು ವಿನ್ಯಾಸಗೊಳಿಸಿ ಧ್ಯಾನಿಸುತ್ತಿರುವ ದೃಶ್ಯ ವೈರಲ್ ಆಗಿದೆ.
ಜೊತೆಗೆ ವಿವೇಕಾನಂದರ ಪ್ರತಿಮೆಯ ಸುತ್ತ ಜಪಮಾಲೆಯನ್ನು ಹಿಡಿದು ಮಂತ್ರಗಳನ್ನು ಪಠಿಸುತ್ತಾ ಪ್ರದಕ್ಷಿಣೆ ಹಾಕಿರುವುದೂ ಕಂಡುಬಂದಿದೆ. ಈ ಸಮಯದಲ್ಲಿ ಅವರ ಮುಂದೆ ಭಕ್ತಿಯ ಪ್ರತೀಕವಾಗಿ ಊದುಕಡ್ಡಿ ಹಚ್ಚಿಟ್ಟಿರುವುದನ್ನೂ ಕಾಣಬಹುದಾಗಿದೆ.
ಮೋದಿ ವಿವೇಕಾನಂದರು ಧ್ಯಾನಿಸಿದ್ದ ಸ್ಥಳದಲ್ಲೇ ತಮ್ಮ ಧ್ಯಾನವನ್ನು ಕೈಗೊಂಡಿದ್ದು, ಜೂ.1ರ ಮಧ್ಯಾಹ್ನ3 ಗಂಟೆವರೆಗೂ ಮುಂದುವರೆಸಲಿದ್ದಾರೆ. ಬಳಿಕ ದಿಲ್ಲಿಗೆ ನಿರ್ಗಮಿಸಲಿದ್ದಾರೆ.
ವಿವೇಕಾನಂದರೇ ಸೈಲೆಂಟ್-ಕಾಂಗ್ರೆಸ್ ವ್ಯಂಗ್ಯ
ತಮಿಳುನಾಡು ಕಾಂಗ್ರೆಸ್ ಅಧ್ಯಕ್ಷ ಸೆಲ್ವಪೆರುಂತಗಾಯ್ ಟ್ವೀಟ್ ಮಾಡಿ, ‘ಪ್ರಧಾನಿ ಮೋದಿ ಧ್ಯಾನಿಸುತ್ತಿರುವ ದೃಶ್ಯಗಳನ್ನು ನಾನಾ ಆಯಾಮಗಳಲ್ಲಿ ನಾನಾ ಭಂಗಿಯಲ್ಲಿ ಚಿತ್ರೀಕರಿಸಲಾಗಿದೆ. ಇದನ್ನೆಲ್ಲ ಕಂಡು ಸ್ವಾಮಿ ವಿವೇಕಾನಂದರೇ ಮೌನವ್ರತಕ್ಕೆ ಜಾರಿದ್ದಾರೆ’ ಎಂದು ವ್ಯಂಗ್ಯವಾಡಿದ್ದಾರೆ.