ಉಕ್ರೇನ್‌ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಮೈತ್ರಿ ಹೆಲ್ತ್‌ ಕಿಟ್‌ (ಭೀಷ್ಮ ಕ್ಯೂಬ್‌)ಗಳನ್ನು ವೊಲೋದಿಮಿರ್‌ ಜೆಲೆನ್ಸ್ಕಿ ಅವರಿಗೆ ಉಡುಗೊರೆಯಾಗಿ ನೀಡಿದರು.

ಕೀವ್‌: ಉಕ್ರೇನ್‌ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಮೈತ್ರಿ ಹೆಲ್ತ್‌ ಕಿಟ್‌ (ಭೀಷ್ಮ ಕ್ಯೂಬ್‌)ಗಳನ್ನು ವೊಲೋದಿಮಿರ್‌ ಜೆಲೆನ್ಸ್ಕಿ ಅವರಿಗೆ ಉಡುಗೊರೆಯಾಗಿ ನೀಡಿದರು. ಇದು ಕೇಂದ್ರ ಸರ್ಕಾರದ ಆರೋಗ್ಯ ಮೈತ್ರಿ ಹೆಲ್ತ್‌ ಕ್ಯೂಬ್‌ ಯೋಜನೆ ಅಡಿಯಲ್ಲಿ ತಯಾರಿಸಲಾಗಿದ್ದು, ಕಳೆದ ವಾರವಷ್ಟೇ ಇದನ್ನು ಭಾರತದ ರಕ್ಷಣಾ ಇಲಾಖೆ ದುರ್ಗಮ ಸ್ಥಳದಲ್ಲಿ ಏರ್‌ಡ್ರಾಪ್‌ ಮಾಡಿ, ಯಶಸ್ವಿ ಪರೀಕ್ಷೆ ನಡೆಸಿದೆ.ಏನಿದು ‘ಭೀಷ್ಮ ಕ್ಯೂಬ್‌’ ?

ಭಾರತ್‌ ಹೆಲ್ತ್‌ ಇನಿಷಿಯೇಟಿವ್‌ ಫಾರ್‌ ಸಹಯೋಗ್‌ ಹಿತಾ ಮತ್ತು ಮೈತ್ರಿ (ಭೀಷ್ಮ) ಭಾಗವಾಗಿದ್ದು, ಇದನ್ನು ದುರ್ಗಮ ಸ್ಥಳಗಳಲ್ಲಿ ಏರ್‌ ಡ್ರಾಪ್‌ ಮಾಡುವ ಮೂಲಕ ಮಿನಿ ಆಸ್ಪತ್ರೆಯನ್ನು ತೆರೆಯಬಹುದಾಗಿದೆ. ಒಂದು ಕ್ಯೂಬ್‌ನಲ್ಲಿ 200 ಜನರಿಗೆ ಚಿಕಿತ್ಸೆ ಕೊಡುವ ಸಾಮರ್ಥ್ಯ ಹೊಂದಿದ್ದು, ಸಣ್ಣ ಪ್ರಮಾಣದ ಶಸ್ತ್ರ ಚಿಕಿತ್ಸೆಯೂ ಇದರಲ್ಲಿ ನಡೆಸಬಹುದಾಗಿದೆ. ತನ್ನ ಸ್ವಂತವಾಗಿ ವಿದ್ಯುತ್‌ ಹಾಗೂ ಆಕ್ಸಿಜನ್‌ ತಯಾರಿಸಿಕೊಳ್ಳುವ ಸಾಮರ್ಥ್ಯ ಹೊಂದಿದೆ. ಕ್ಯೂಬ್‌ನ ತೂಕ 20 ಕೇಜಿ ಇದ್ದು, ಓರ್ವ ವ್ಯಕ್ತಿ ಸಹ ಇದನ್ನು ಹೊತ್ತೊಯ್ಯಬಹುದಾಗಿದೆ. ಯುದ್ಧ ಮತ್ತು ಪ್ರಾಕೃತಿಕ ವಿಕೋಪಗಳಲ್ಲಿ ಇದನ್ನು ಬಳಸಬಹುದಾಗಿದೆ.

==

ಮೋದಿ- ಜೆಲೆನ್ಸ್ಕಿ ಫೋಟೋಗೆ ಗಂಟೆಯಲ್ಲೇ 10 ಲಕ್ಷ ಮೆಚ್ಚುಗೆ

ನವದೆಹಲಿ: ಯುದ್ಧಪೀಡಿತ ಉಕ್ರೇನ್‌ಗೆ ಭೇಟಿ ನೀಡಿದ ಭಾರತದ ಪ್ರಧಾನಿ ನರೇಂದ್ರ ಮೋದಿ ಜೊತೆಗಿರುವ ಫೋಟೋವೊಂದನ್ನು ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಜೆಲೆನ್ಸ್ಕಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ಪೋಸ್ಟ್ ಅಪ್ಲೋಡ್‌ ಒಂದು ಗಂಟೆಯಲ್ಲಿ 10 ಲಕ್ಷಕ್ಕೂ ಹೆಚ್ಚು ಜನರು ಲೈಕ್ ನೀಡಿದ್ದಾರೆ. ಉಕ್ರೇನ್ ಅಧ್ಯಕ್ಷರು ಇದುವರೆಗೆ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಅಪ್ಲೋಡ್‌ ಮಾಡಿರುವ ಫೋಟೋಗಳಲ್ಲಿ ಈ ಫೋಟೋ ಅತಿ ಹೆಚ್ಚಿನ ಬಳಕೆದಾರನ್ನು ತಲುಪಿದೆ.