ಕುವೈತ್‌ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಲ್ಲಿನ ಅತ್ಯುನ್ನತ ಗೌರವವಾದ ‘ದಿ ಆರ್ಡರ್‌ ಆಫ್‌ ಮುಬಾರಕ್‌ ಅಲ್‌ ಕಬೀರ್‌’ ಅನ್ನು ಭಾನುವಾರ ಪ್ರದಾನ ಮಾಡಲಾಯಿತು.

ಕುವೈತ್‌ ಸಿಟಿ: ಕುವೈತ್‌ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಲ್ಲಿನ ಅತ್ಯುನ್ನತ ಗೌರವವಾದ ‘ದಿ ಆರ್ಡರ್‌ ಆಫ್‌ ಮುಬಾರಕ್‌ ಅಲ್‌ ಕಬೀರ್‌’ ಅನ್ನು ಭಾನುವಾರ ಪ್ರದಾನ ಮಾಡಲಾಯಿತು. ಉಭಯ ದೇಶಗಳ ನಡುವಿನ ಸಂಬಂಧವನ್ನು ಬಲಗೊಳಿಸಿದ ಕಾರಣಕ್ಕೆ ಮೋದಿ ಅವರಿಗೆ ಕುವೈತ್‌ ದೊರೆ ಶೇಖ್‌ ಮಿಶಲ್‌ ಅಲ್‌- ಅಹ್ಮದ್‌ ಅಲ್‌-ಜಬೆರ್‌ ಅಲ್‌-ಸಭಾ ಅವರು ಈ ಗೌರವವನ್ನು ನೀಡಿದ್ದಾರೆ ಎಂದು ಅಲ್ಲಿನ ಸರ್ಕಾರಿ ಮಾಧ್ಯಮ ಕುನಾ ವರದಿ ಮಾಡಿದೆ. ಇದು ಪ್ರಧಾನಿ ಮೋದಿಯವರಿಗೆ ದೊರಕಿದ 20ನೇ ಅಂತಾರಾಷ್ಟ್ರೀಯ ಗೌರವವಾಗಿದೆ.

ಭಾರತ-ಕುವೈತ್‌ ಸಂಬಂಧ ಈಗ ಮತ್ತಷ್ಟು ಎತ್ತರಕ್ಕೆ

ಕುವೈತ್‌ ಸಿಟಿ: ಅಧ್ಯಕ್ಷರ ಆಹ್ವಾನದ ಮೇರೆಗೆ 2 ದಿನಗಳ ಕುವೈತ್‌ ಪ್ರವಾಸ ಕೈಗೊಂಡಿರುವ ಪ್ರಧಾನಿ ಮೋದಿ ಅಲ್ಲಿನ ದೊರೆ ಶೇಖ್‌ ಮಿಶಲ್‌ ಅಲ್‌-ಅಹ್ಮದ್‌ ಅಲ್‌-ಜಬರ್‌ ಅಲ್‌-ಸಭಾ ಅವರೊಂದಿಗೆ ಮಾತುಕತೆ ನಡೆಸಿದ್ದು, ಈ ಮೂಲಕ ಉಭಯ ದೇಶಗಳ ಸಂಬಂಧವನ್ನು ವ್ಯೂಹಾತ್ಮಕ ಪಾಲುದಾರಿಕೆ ಮಟ್ಟಕ್ಕೆ ಕೊಂಡೊಯ್ಯಲಾಗಿದೆ ಎಂದು ಹೇಳಿದ್ದಾರೆ.

ಈ ಭೇಟಿಯನ್ನು ಅದ್ಭುತ ಎಂದು ವರ್ಣಿಸಿರುವ ಮೋದಿ, ‘ಮಾಹಿತಿ ತಂತ್ರಜ್ಞಾನ, ಔಷಧ, ಫಿನ್‌ಟೆಕ್‌, ಮೂಲಸೌಕರ್ಯ ಹಾಗೂ ಭದ್ರತೆ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಮಾತುಕತೆ ನಡೆಸಿದೆವು. ಈ ಮೂಲಕ ಉಭಯ ದೇಶಗಳ ಸಂಬಂಧವನ್ನು ವ್ಯೂಹಾತ್ಮಕ ಪಾಲುದಾರಿಕೆ ಮಟ್ಟಕ್ಕೆ ಎತ್ತರಿಸಿದ್ದು, ಮುಂದಿನ ದಿನಗಳಲ್ಲಿ ಇದು ಹೀಗೆಯೇ ಮುಂದುವರೆಯುತ್ತದೆ ಎಂಬ ಭರವಸೆ ಇದೆ’ ಎಂದು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಜತೆಗೆ, ಕುವೈತ್‌ನಲ್ಲಿರುವ ಭಾರತೀಯ ಸಮುದಾಯದವರ ಕ್ಷೇಮಕ್ಕಾಗಿ ಅಲ್ಲಿನ ದೊರೆಗೆ ಕೃತಜ್ಞತೆ ಸಲ್ಲಿಸಿದ್ದಾರೆ.