ಮುಸ್ಲಿಂ ಮೀಸಲಿನ ಬಗ್ಗೆ ರಾಹುಲ್‌ ವಿಡಿಯೋ ಹಾಕಿ ಮೋದಿ ವಾಗ್ದಾಳಿ

| Published : May 22 2024, 12:54 AM IST

ಮುಸ್ಲಿಂ ಮೀಸಲಿನ ಬಗ್ಗೆ ರಾಹುಲ್‌ ವಿಡಿಯೋ ಹಾಕಿ ಮೋದಿ ವಾಗ್ದಾಳಿ
Share this Article
  • FB
  • TW
  • Linkdin
  • Email

ಸಾರಾಂಶ

ಮುಸ್ಲಿಂ ಸೋದರರಿಗೆ ಮೀಸಲು ನೀಡ್ತೇವೆ ಎಂದಿದ್ದ ರಾಹುಲ್‌ ಗಾಂಧಿ ಹೇಳಿಕೆಯನ್ನು ಉಲ್ಲೇಖಿಸಿ ‘ಕಾಂಗ್ರೆಸ್‌ ಎಸ್ಸಿ-ಎಸ್ಟಿ, ಒಬಿಸಿಗಳ ಹಕ್ಕು ಕಸಿಯಲಿದೆ’ ಎಂಬುದಾಗಿ ದಶಕದ ಹಿಂದಿನ ವಿಡಿಯೋ ಶೇರ್‌ ಮಾಡಿದ ಪ್ರಧಾನಿ ಕಿಡಿ ಕಾರಿದ್ದಾರೆ.

ನವದೆಹಲಿ: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಯವರ ಮುಸ್ಲಿಂ ಮೀಸಲು ಕುರಿತ ಹಳೆಯ ವಿಡಿಯೋ ಒಂದನ್ನು ಶೇರ್‌ ಮಾಡಿ ಪ್ರಧಾನಿ ನರೇಂದ್ರ ಮೋದಿ ‘ಇದು ಕಾಂಗ್ರೆಸ್‌ ಪಕ್ಷದ ನಿಜವಾದ ಮುಖವನ್ನು ತೋರಿಸುತ್ತದೆ’ ಎಂದು ವಾಗ್ದಾಳಿ ನಡೆಸಿದ್ದಾರೆ. ವಿಡಿಯೋದಲ್ಲಿ ರಾಹುಲ್‌ ಗಾಂಧಿ ಮುಸ್ಲಿಮರಿಗೆ ಮೀಸಲಾತಿಯ ಭರವಸೆ ನೀಡಿ, ‘ನಾವು ಮುಸ್ಲಿಂ ಸೋದರರಿಗೆ ಮೀಸಲು ನೀಡುತ್ತೇವೆ. ಅವರನ್ನು ನಮ್ಮೊಳಗೆ ಸೇರಿಸಿಕೊಳ್ಳುತ್ತೇವೆ’ ಎಂದಿರುವುದು ಕಾಣುತ್ತದೆ.

‘ನಾನಿಂದು ಕಾಂಗ್ರೆಸ್‌ ಪಕ್ಷದ ಶೆಹಜಾದೆಯ 11-12 ವರ್ಷದ ಹಳೆಯ ವಿಡಿಯೋವೊಂದನ್ನು ನೋಡಿದೆ. ಅದರಲ್ಲಿ ಅವರು ಮುಸ್ಲಿಮರಿಗೆ ಮೀಸಲು ನೀಡುವುದಾಗಿ ಬಹಿರಂಗವಾಗಿಯೇ ಹೇಳುತ್ತಾರೆ. ಇದು ಕಾಂಗ್ರೆಸ್‌ನ ನಿಜವಾದ ಮುಖ. ಬಹಳ ವರ್ಷಗಳ ಕಾಲ ಈ ಮುಖವನ್ನು ದೇಶದ ಕಣ್ಣಿನಿಂದ ಬಚ್ಚಿಡುವಲ್ಲಿ ಕಾಂಗ್ರೆಸ್‌ ಯಶಸ್ವಿಯಾಗಿತ್ತು’ ಎಂದು ಎಕ್ಸ್‌ನಲ್ಲಿ ವಿಡಿಯೋ ಪೋಸ್ಟ್‌ ಮಾಡಿ ಮೋದಿ ಕಿಡಿಕಾರಿದ್ದಾರೆ.

‘ಅವರ ಮಾತು ಮತ್ತು ಭರವಸೆಯನ್ನು ಎಲ್ಲರೂ ಕೇಳಿಸಿಕೊಳ್ಳಬಹುದು. ಎಸ್‌ಸಿ, ಎಸ್‌ಟಿ ಮತ್ತು ಒಬಿಸಿಗೆ ಅವರು ಮೀಸಲಾತಿ ನೀಡದಿರಲು ಹಾಗೂ ಮುಸ್ಲಿಮರಿಗೆ ಅಸಾಂವಿಧಾನಿಕವಾಗಿ ಮೀಸಲಾತಿ ನೀಡಲು ಬಯಸುತ್ತಾರೆ. ಪೂಜ್ಯ ಬಾಬಾಸಾಹೇಬ್‌ ಅವರ ಸಂವಿಧಾನವನ್ನು ಅವರು ಹೊಸಕಿಹಾಕಲು ಈ ಮೋದಿ ಬಿಡುವುದಿಲ್ಲ’ ಎಂದೂ ಹೇಳಿದ್ದಾರೆ.

ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌ ಕೂಡ ಮೋದಿ ಪೋಸ್ಟ್‌ ಶೇರ್‌ ಮಾಡಿ, ‘ಮುಸ್ಲಿಮರಿಗೆ ಧರ್ಮಾಧಾರಿತವಾಗಿ ಮೀಸಲು ನೀಡುವ ಕಾಂಗ್ರೆಸ್‌ ಪಕ್ಷದ ಉದ್ದೇಶವನ್ನು ರಾಹುಲ್‌ ಗಾಂಧಿ ಇಲ್ಲಿ ತೆರೆದಿಟ್ಟಿದ್ದಾರೆ. ಇದು ಹೊಗೆಯಾಡುತ್ತಿರುವ ಬಂದೂಕು’ ಎಂದಿದ್ದಾರೆ.