ಪ. ಬಂಗಾಳದ 42 ಕ್ಷೇತ್ರದಲ್ಲೂ ಕಮಲ ಅರಳಿಸಿ: ಮೋದಿ ಕರೆ

| Published : Mar 03 2024, 01:31 AM IST

ಸಾರಾಂಶ

ಪ. ಬಂಗಾಳದ 42 ಕ್ಷೇತ್ರದಲ್ಲೂ ಕಮಲ ಅರಳಿಸಿ ಎಂದು ಪ್ರಧಾನಿ ಮೋದಿ ಕರೆ ನೀಡಿದ್ದಾರೆ. ಟಿಎಂಸಿಯಿಂದ ಸ್ಕೀಂಗಳು ಸ್ಕ್ಯಾಂಗಳಾಗಿ ಮಾರ್ಪಾಡು ಆಗುತ್ತಿವೆ. ಟಿಎಂಸಿ ನಂಬಿಕೆದ್ರೋಹದ ಪ್ರತಿಬಿಂಬ ಎಂದು ಕಿಡಿಕಾರಿದ್ದು, ಟಿಎಂಸಿ ಎಂದರೆ ತೂ ಮೈ ಔರ್‌ ಕರಪ್ಷನ್‌ ಎಂದು ಜರಿದಿದ್ದಾರೆ.

ಕೃಷ್ಣಾನಗರ: ಪಶ್ಚಿಮ ಬಂಗಾಳದಲ್ಲಿ ವಿಶ್ವಾಸದ್ರೋಹದ ಪ್ರತಿಬಿಂಬದಂತಿರುವ ಟಿಎಂಸಿ ಸರ್ಕಾರವನ್ನು ಕಿತ್ತೊಗೆದು ಎಲ್ಲ 42 ಕ್ಷೇತ್ರಗಳಲ್ಲೂ ಬಿಜೆಪಿಯನ್ನು ಗೆಲ್ಲಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದರು.ಬಂಗಾಳದ ಕೃಷ್ಣಾ ನಗರದಲ್ಲಿ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಅವರು, ‘ಟಿಎಂಸಿ ಸರ್ಕಾರವು ನಿರಾಶಾವಾದ, ಸ್ವಜನಪಕ್ಷಪಾತ, ವಿಶ್ವಾಸದ್ರೋಹ ಮತ್ತು ಭ್ರಷ್ಟಾಚಾರದಿಂದ ಮುಳುಗಿದೆ. ಅವರು ಕೇಂದ್ರ ಸರ್ಕಾರದ ಯೋಜನೆಗೆ ತಮ್ಮ ಸರ್ಕಾರದ ಸ್ಟಿಕ್ಕರ್‌ ಅಂಟಿಸಿ ಅದನ್ನು ತಮ್ಮದೇ ಯೋಜನೆಯೆಂದು ಬಿಂಬಿಸಿ ಹಗರಣವಾಗಿ ಪರಿವರ್ತಿಸುವ ‘ಸ್ಕೀಂಗಳನ್ನು ಸ್ಕ್ಯಾಂಗಳಾಗಿ ಮಾರ್ಪಾಡಿಸುವ) ಕಲೆ ಕರಗತ ಮಾಡಿಕೊಂಡಿದ್ದಾರೆ. ಇಂತಹ ಸರ್ಕಾರವನ್ನು ಕಿತ್ತೊಗೆದು ರಾಜ್ಯದ ಎಲ್ಲ 42 ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಕಮಲ ಅರಳುವಂತೆ ಮಾಡಬೇಕು’ ಎಂದು ಕರೆ ನೀಡಿದರು. ಶಾಜಹಾನ್‌ ವಿರುದ್ಧ ಆಕ್ರೋಶ:

ಸಂದೇಶ್‌ಖಾಲಿಯಲ್ಲಿ ನಡೆದ ದೌರ್ಜನ್ಯದ ಕುರಿತು ಆಕ್ರೋಶ ವ್ಯಕ್ತಪಡಿಸಿದ ಅವರು, ‘ಸಂದೇಶ್‌ಖಾಲಿಯಲ್ಲಿ ಸಂತ್ರಸ್ತ ಹೆಣ್ಣುಮಕ್ಕಳ ಬದಲಾಗಿ ಅತ್ಯಾಚಾರಿಗಳಿಗೆ ಸರ್ಕಾರ ಬೆಂಬಲ ನೀಡುತ್ತಿದೆ. ಈ ರಾಜ್ಯದಲ್ಲಿ ಆರೋಪಿಯನ್ನು ಬಂಧಿಸಲು ಪೊಲೀಸರ ಬದಲಾಗಿ ಆರೋಪಿಗಳೇ ಸಮಯ ನಿರ್ಧರಿಸುವ ಪರಿಸ್ಥಿತಿ ಇದೆ’ ಎಂದು ಪರೋಕ್ಷವಾಗಿ ಶಾಜಹಾನ್‌ ಬಂಧನಕ್ಕೆ ವಿಳಂಬ ಧೋರಣೆ ಅನುಸರಿಸಿದ ಸರ್ಕಾರದ ನಡೆಯನ್ನು ಟೀಕಿಸಿದರು. ಟಿಎಂಸಿ ಎಂದರೆ ತೂ ಮೈ ಔರ್‌ ಕರಪ್ಷನ್‌: ಮೋದಿಮಮತಾ ಬ್ಯಾನರ್ಜಿ ಅಬವರ ಟಿಎಂಸಿ ಎಂದರೆ ‘ತೂ ಮೈ ಔರ್‌ ಕರಪ್ಷನ್‌’ (ನೀನು, ನಾನು ಮತ್ತು ಭ್ರಷ್ಟಾಚಾರ) ಎಂಬಂತಾಗಿದೆ. ಅವರು ತಮ್ಮ ಸ್ವಜನ ಹಿತಾಸಕ್ತಿಗಾಗಿ ಬಡವರನ್ನು ಮತ್ತಷ್ಟು ಬಡವರನ್ನಾಗಿ ಮಾಡುತ್ತಿದ್ದಾರೆ ಎಂದೂ ಸಹ ಮೋದಿ ಕಿಡಿಕಾರಿದರು.