ಸಾರಾಂಶ
ನವದೆಹಲಿ : 70 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಉಚಿತ ಆರೋಗ್ಯ ವಿಮೆ ಒದಗಿಸುವ ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಗೆ (ಎಬಿಇ-ಪಿಎಂಜೆವೈ) ಪ್ರಧಾನಿ ನರೇಂದ್ರ ಮೋದಿ ಅವರು ಅ.29ರಂದು ಚಾಲನೆ ನೀಡುವ ಸಾಧ್ಯತೆಯಿದೆ.
ಇದೇ ವೇಳೆ, ಎಲ್ಲ ಲಸಿಕಾಕರಣಗಳನ್ನು ಒಂದೇ ವೆಬ್‌ಸೈಟ್‌ನಲ್ಲಿ ನೋಂದಣಿ ಮಾಡಬಲ್ಲ ಯು-ವಿನ್ ಪೋರ್ಟಲ್‌ಗೂ ಅವರು ಚಾಲನೆ ನೀಡಲಿದ್ದಾರೆ. ಯು-ವಿನ್ ಪೋರ್ಟಲ್ ಸದ್ಯ ಪ್ರಯೋಗಿಕ ಪರೀಕ್ಷೆಯಲ್ಲಿದೆ. ಇದು ಕೋವಿಡ್ ವೇಳೆ ರಚನೆಯಾಗಿದ್ದ ಕೋ-ವಿನ್ ಪೋರ್ಟಲ್‌ನಿಂದ ಪ್ರೇರಣೆ ಪಡೆದಿದೆ. ಕೋ-ವಿನ್ ಕೇವಲ ಕೋವಿಡ್‌ಗೆ ಸೀಮಿತವಾದರೆ ಯು-ವಿನ್ ಎಲ್ಲ ಲಸಿಕಾಕರಣಕ್ಕೂ ಸಂಬಂಧಪಡಲಿದೆ.
ಕಳೆದ ತಿಂಗಳು, ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ವಿಶ್ವದ ಅತಿದೊಡ್ಡ ಸಾರ್ವಜನಿಕ ಆರೋಗ್ಯ ವಿಮೆಯ ಪ್ರಮುಖ ವಿಸ್ತರಣೆಯನ್ನು ಅನುಮೋದಿಸಿತ್ತು. ಇದು 70 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಎಲ್ಲಾ ಹಿರಿಯ ನಾಗರಿಕರಿಗೆ ಅವರ ಸಾಮಾಜಿಕ ಸ್ಥಾನಮಾನ ಲೆಕ್ಕಿಸದೆ 5 ಲಕ್ಷ ರು.ವರೆಗೆ ನಗದು ರಹಿತ ಆರೋಗ್ಯ ವಿಮಾ ಸೌಲಭ್ಯ ಒದಗಿಸುತ್ತದೆ. ಕುಟುಂಬದ ಸಮೂಹ ಆರೋಗ್ಯ ವಿಮೆ ಹೊರತಾಗಿ 6 ಕೋಟಿ ಹಿರಿಯ ನಾಗರಿಕರಿಗೆ ಪ್ರತ್ಯೇಕ 5 ಲಕ್ಷ ರು. ವಿಮಾ ಸೌಲಭ್ಯ ಇದರಿಂದ ಸಿಗಲಿದೆ.