ದೇಶದ ಮೊದಲ ನದಿ ಜೋಡಣೆಗೆ ಇಂದು ಮೋದಿ ಶಂಕು

| Published : Dec 25 2024, 12:48 AM IST

ಸಾರಾಂಶ

ಕೇಂದ್ರದ ಎನ್‌ಡಿಎ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳ ಪೈಕಿ ಒಂದಾದ ನದಿ ಜೋಡಣೆ ಯೋಜನೆಯ ಪೈಕಿ ಮೊದಲ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಬುಧವಾರ ಮಧ್ಯಪ್ರದೇಶದ ಖುಜುರಾಹೋದಲ್ಲಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ಭೋಪಾಲ್‌: ಕೇಂದ್ರದ ಎನ್‌ಡಿಎ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳ ಪೈಕಿ ಒಂದಾದ ನದಿ ಜೋಡಣೆ ಯೋಜನೆಯ ಪೈಕಿ ಮೊದಲ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಬುಧವಾರ ಮಧ್ಯಪ್ರದೇಶದ ಖುಜುರಾಹೋದಲ್ಲಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ಮಧ್ಯಪ್ರದೇಶದಲ್ಲಿ ಹುಟ್ಟುವ ಕೆನ್‌ ಮತ್ತು ಬೆಟ್ವಾ ನದಿಗಳನ್ನು ಜೋಡಿಸಿ, ಮಧ್ಯಪ್ರದೇಶ ಮತ್ತು ಉತ್ತರಪ್ರದೇಶ ಬರಪೀಡಿತ ಪ್ರದೇಶವಾದ ಬುಂದೇಲ್‌ಖಂಡ್‌ಗೆ ನೀರಾವರಿ ಸೌಲಭ್ಯ ಒದಗಿಸುವ ಉದ್ದೇಶವನ್ನು ಯೋಜನೆ ಹೊಂದಿದೆ.

ಯೋಜನೆ ಜಾರಿ ಹೇಗೆ?:

- ಕೆನ್‌ ನದಿಗೆ ಅಡ್ಡಲಾಗಿ ಪನ್ನಾ ಹುಲಿ ರಕ್ಷಿತಾರಣ್ಯದಲ್ಲಿ 77 ಮೀಟರ್‌ ಎತ್ತರ, 2.13ಕಿ.ಮೀ ಉದ್ದದ ದೌಧನ್‌ ಡ್ಯಾಂ ಮತ್ತು 221 ಕಿ.ಮೀ ಉದ್ದದ ಕಾಲುವೆ ನಿರ್ಮಿಸಲಾಗುವುದು. ಈ ಕಾಲುವೆ ಮೂಲಕ ಉತ್ತರಪ್ರದೇಶದಲ್ಲಿ ಹರಿಯುವ ಬೆಟ್ವಾ ನದಿಗೆ ನೀರು ಹರಿಸಲಾಗುತ್ತದೆ.

- ಮಧ್ಯಪ್ರದೇಶದ 8.11 ಲಕ್ಷ ಹೆಕ್ಟೇರ್‌ ಹಾಗೂ ಉತ್ತರ ಪ್ರದೇಶದ 59000 ಹೆಕ್ಟೇರ್‌ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಸಿಗಲಿದೆ. ಮಧ್ಯಪ್ರದೇಶದ 10 ಜಿಲ್ಲೆಗಳ 44 ಲಕ್ಷ ಮಂದಿ ಹಾಗೂ ಉತ್ತರ ಪ್ರದೇಶದ 21 ಲಕ್ಷ ಮಂದಿಗೆ ಕುಡಿವ ನೀರು ಒದಗಿಸಲಿದೆ

- 103ಮೆ.ವ್ಯಾ. ಜಲ ವಿದ್ಯುತ್‌ ಮತ್ತು 27 ಮೆ.ವ್ಯಾ. ಸೌರ ವಿದ್ಯುತ್‌ ಕೂಡ ಈ ಯೋಜನೆಯಡಿ ಉತ್ಪಾದಿಸಲಾಗುವುದು.

- ಯೋಜನೆಗೆ 44, 605 ಕೋಟಿ ವೆಚ್ಚ ಅಂದಾಜಿಸಲಾಗಿದೆ. ಈ ಪೈಕಿ ಶೇ.90 ಕೇಂದ್ರ, ಶೇ.10 ರಾಜ್ಯಗಳು ಭರಿಸಲಿವೆ.

- ಯೋಜನೆಯಿಂದ ಈ ಭಾಗದ ಆರ್ಥಿಕ, ಸಾಮಾಜಿಕ ಅಭಿವೃದ್ಧಿ, ಪ್ರವಾಸೋದ್ಯಮಕ್ಕೆ ನೆರವು. ಹೊಸ ಉದ್ಯೋಗ ಸೃಷ್ಟಿ.