2002ರಲ್ಲಿ ಗುಜರಾತಿನ ಗೋಧ್ರಾ ಗಲಭೆ ಸತ್ಯ ತಿಳಿಸುವ ಸಾಬರಮತಿ ಚಿತ್ರ ವೀಕ್ಷಿಸಿದ ಮೋದಿ

| Published : Dec 03 2024, 12:33 AM IST / Updated: Dec 03 2024, 06:50 AM IST

ಸಾರಾಂಶ

2002ರಲ್ಲಿ ಗುಜರಾತಿನ ಗೋಧ್ರಾದಲ್ಲಿ ನಡೆದ ಗಲಭೆಯ ಕುರಿತಾದ ನೈಜ ಅಂಶಗಳನ್ನು ಆಧರಿಸಿದ ‘ಸಾಬರಮತಿ ರಿಪೋರ್ಟ್‌’ ಸಿನಿಮಾವನ್ನು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಸಂಜೆ ವೀಕ್ಷಿಸಿದರು.

ನವದೆಹಲಿ: 2002ರಲ್ಲಿ ಗುಜರಾತಿನ ಗೋಧ್ರಾದಲ್ಲಿ ನಡೆದ ಗಲಭೆಯ ಕುರಿತಾದ ನೈಜ ಅಂಶಗಳನ್ನು ಆಧರಿಸಿದ ‘ಸಾಬರಮತಿ ರಿಪೋರ್ಟ್‌’ ಸಿನಿಮಾವನ್ನು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಸಂಜೆ ವೀಕ್ಷಿಸಿದರು.ಸಂಸತ್‌ನ ಬಾಲಯೋಗಿ ಸಭಾಂಗಣದಲ್ಲಿ ಆಯೋಜಿಸಿದ್ದ ಚಿತ್ರದ ವಿಶೇಷ ಪ್ರದರ್ಶನದಲ್ಲಿ ಕೇಂದ್ರ ಸಚಿವರಾದ ರಾಜನಾಥ ಸಿಂಗ್‌, ಅಮಿತ್‌ ಶಾ, ಜೆ.ಪಿ. ನಡ್ಡಾ, ಸಂಸದೀಯ ಖಾತೆ ಪ್ರಹ್ಲಾದ್ ಜೋಶಿ ಸೇರಿದಂತೆ ಕೇಂದ್ರ ಸಚಿವರು, ಸಂಸದರು ಮೋದಿಗೆ ಸಾಥ್‌ ನೀಡಿದರು.

 ಚಿತ್ರ ವೀಕ್ಷಣೆಯ ಬಳಿಕ ಈ ಕುರಿತು ಮೋದಿ ಟ್ವೀಟ್ ಮಾಡಿ, ‘ಎನ್‌ಡಿಎ ನಾಯಕರ ಜತೆ ಸಿನಿಮಾ ವೀಕ್ಷಿಸಿದೆ. ಚಿತ್ರದ ನಿರ್ಮಾಪಕರ ಪ್ರಯತ್ನಕ್ಕಾಗಿ ನಾನು ಅವರನ್ನು ಶ್ಲಾಘಿಸುತ್ತೇನೆ’ ಎಂದಿದ್ದಾರೆ.ಧೀರಜ್‌ ಸರ್ನಾ ನಿರ್ದೇಶನದ ಈ ಚಿತ್ರದಲ್ಲಿ ವಿಕ್ರಾಂತ್‌ ಮೈಸಿ, ರಿಧಿ ದೋಗ್ರಾ, ರಾಶಿ ಖನ್ನಾ ಮೊದಲಾದವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಬಿಜೆಪಿ ಆಡಳಿತದ ಹಲವು ರಾಜ್ಯಗಳು ಈಗಾಗಲೇ ಚಿತ್ರಕ್ಕೆ ತೆರಿಗೆ ವಿನಾಯ್ತಿ ಘೋಷಿಸಿವೆ

ಸಿನಿಮಾದಲ್ಲೇನಿದೆ?:

2002 ಫೆ.27 ರಂದು ಅಯೋಧ್ಯೆಯಿಂದ ಹಿಂತಿರುಗುತ್ತಿದ್ದ ಹಾಗೂ ಕರಸೇವಕರಿದ್ದ ಸಾಬರಮತಿ ಎಕ್ಸ್‌ಪ್ರೆಸ್‌ ರೈಲಿಗೆ ಗೋಧ್ರಾದಲ್ಲಿ ಬೆಂಕಿ ಹಚ್ಚಲಾಗಿತ್ತು. ಈ ಘಟನೆಯಲ್ಲಿ 59 ಕರಸೇವಕರು ಮೃತಪಟ್ಟಿದ್ದರು. ಬಳಿಕ ರಾಜ್ಯದಲ್ಲಿ ಸಂಭವಿಸಿದ ಕೋಮಗಲಭೆಯಲ್ಲಿ 1200 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು. ಈ ನೈಜ ಘಟನೆಯ ಕಥಾಹಂದರವನ್ನಾಗಿ ಇಟ್ಟುಕೊಂಡು ನಿರ್ಮಿಸಿದ ಈ ಚಿತ್ರ ನ.15ರಂದು ಬಿಡುಗಡೆಯಾಗಿತ್ತು. ಈ ಚಿತ್ರಕ್ಕೆ ನ.17ರಂದು ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದು, ಸತ್ಯ ಹೊರಬರಲಿದೆ ಎಂದು ಪ್ರಶಂಸಿಸಿದ್ದರು.

ಸತ್ಯ ಹೊರಬಂದಿದೆ: ಮೋದಿ

ಸತ್ಯ ಹೊರಬರುತ್ತಿರುವುದು ಒಳ್ಳೆಯದೇ, ಅದೂ ಕೂಡ ಒಂದು ರೀತಿಯಲ್ಲಿ ಜನಸಾಮಾನ್ಯರು ನೋಡುವಂತಾಗಿದೆ. ಒಂದು ನಕಲಿ ನಿರೂಪಣೆಯು ಸೀಮಿತ ಅವಧಿಯವರೆಗೆ ಮಾತ್ರ ಇರುತ್ತದೆ. ಅಂತಿಮವಾಗಿ, ಸತ್ಯಗಳು ಯಾವಾಗಲೂ ಹೊರಬರುತ್ತವೆ.

ನರೇಂದ್ರ ಮೋದಿ, ಪ್ರಧಾನ ಮಂತ್ರಿ