ರಾಮನನ್ನು ಟೆಂಟ್‌ಗೆ ಕಳಿಸಲು ಕಾಂಗ್ರೆಸ್ ಸಂಚು: ಮೋದಿ

| Published : May 15 2024, 01:34 AM IST

ಸಾರಾಂಶ

ಮಂದಿರಕ್ಕೆ ಬೀಗ ಹಾಕಿ ರಾಮನನ್ನು ಟೆಂಟ್‌ಗೆ ಕಳಿಸಲು ಸಂಚು ರೂಪಿಸಿರುವ ಶಕ್ತಿಗಳ ಸೋಲಿಸಿ ಎಂದು ಪ್ರಧಾನಿ ಮೋದಿ ಕರೆ ನೀಡಿದ್ದಾರೆ.

ಪಿಟಿಐ ಗಿರಿಡೀಹ್ (ಜಾರ್ಖಂಡ್)

ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದು, ಕಾಂಗ್ರೆಸ್ ‘ನಾಚಿಕೆಗೇಡಿನ’ ರಾಜಕೀಯದಲ್ಲಿ ತೊಡಗಿದೆ ಮತ್ತು ‘ಅಯೋಧ್ಯೆಯ ರಾಮಲಲ್ಲಾನನ್ನು ಮತ್ತೆ ಡೇರೆಗೆ ಕಳಿಸಲು ಸಂಚು ರೂಪಿಸುತ್ತಿದೆ’ ಎಂದು ಆರೋಪಿಸಿದ್ದಾರೆ.ಜಾರ್ಖಂಡ್‌ನ ಗಿರಿಡೀಹ್‌ ಮಂಗಳವಾರ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ‘ಕಾಂಗ್ರೆಸ್ ನಾಯಕರು ರಾಮಮಂದಿರದ ಬಗ್ಗೆ ನಾಚಿಕೆಗೇಡಿನ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅವರ ನಾಯಕರು ಮತ್ತೊಮ್ಮೆ ರಾಮಲಲ್ಲಾನನ್ನು ಟೆಂಟ್‌ಗೆ ಕಳುಹಿಸಲು ಮತ್ತು ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧ ಮಾತನಾಡಲು ಸಂಚು ಮಾಡುತ್ತಿದ್ದಾರೆ’ ಎಂದು ಕಿಡಿಕಾರಿದರು.

ಅಲ್ಲದೆ, ಕಾಂಗ್ರೆಸ್‌ನವರು ಮತ್ತೆ ಮಂದಿರ ಆವರಣಕ್ಕೆ ಬೀಗ ಹಾಕಲು ಬಯಸುತ್ತಾರೆ, ಅಂತಹ ‘ಭ್ರಷ್ಟ’ ಶಕ್ತಿಗಳನ್ನು ಹೊರಹಾಕಬೇಕು ಎಂದು ಜನತೆಗೆ ಮನವಿ ಮಾಡಿದರು.

ಬಾಬ್ರಿ ಮಸೀದಿ ಧ್ವಂಸಗೊಂಡ ನಂತರ ರಾಮಲಲ್ಲಾನ ಅವರ ಹಳೆಯ ವಿಗ್ರಹವನ್ನು ಡೇರೆಯಲ್ಲಿ ಇರಿಸಲಾಗಿತ್ತು. ಮಂದಿರ ರಚನೆ ಆಗಿದ್ದರಿಂದ ಆ ವಿಗ್ರಹವನ್ನು ಈಗ ಹೊಸ ಮಂದಿರದಲ್ಲಿ ಇರಿಸಲಾಗಿದೆ.