ಮುಸ್ಲಿಮರಿಗೆ ಪೂರ್ಣ ಮೀಸಲು ನೀಡಲು ಇಂಡಿಯಾ ಕೂಟ ಚಿಂತನೆ: ಮೋದಿ

| Published : May 27 2024, 04:55 AM IST

Narendra modi

ಸಾರಾಂಶ

ಇಂಡಿಯಾ ಕೂಟ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಲ್ಲಿ ರಾಷ್ಟ್ರದ ಬಹುಸಂಖ್ಯಾತರನ್ನು ದ್ವಿತೀಯ ದರ್ಜೆ ಪ್ರಜೆಗಳನ್ನಾಗಿ ಮಾಡುವಂತಹ ವಾತಾವರಣ ಸೃಷ್ಟಿಸಲಿದೆ. ಜೊತೆಗೆ ಧರ್ಮಾಧಾರಿತ ಮೀಸಲು ನೀಡಲು ಅದು ಚಿಂತಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದರು

ಘೋಸಿ : ಇಂಡಿಯಾ ಕೂಟ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಲ್ಲಿ ರಾಷ್ಟ್ರದ ಬಹುಸಂಖ್ಯಾತರನ್ನು ದ್ವಿತೀಯ ದರ್ಜೆ ಪ್ರಜೆಗಳನ್ನಾಗಿ ಮಾಡುವಂತಹ ವಾತಾವರಣ ಸೃಷ್ಟಿಸಲಿದೆ. ಜೊತೆಗೆ ಧರ್ಮಾಧಾರಿತ ಮೀಸಲು ನೀಡಲು ಅದು ಚಿಂತಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದರು.

ಭಾನುವಾರ ಜಿಲ್ಲೆಯ ಘೋಸಿ ಪಟ್ಟಣದಲ್ಲಿ ಬಿಜೆಪಿ ಚುನಾವಣಾ ಪ್ರಚಾರ ರ್‍ಯಾಲಿ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ‘ವಿಪಕ್ಷಗಳ ಇಂಡಿಯಾ ಮೈತ್ರಿ ಕೂಟ ಅಧಿಕಾರಕ್ಕೆ ಬಂದರೆ ಮೊದಲಿಗೆ ಧರ್ಮಾಧಾರಿತವಾಗಿ ಮೀಸಲು ನೀಡಲು ಸಂವಿಧಾನಕ್ಕೆ ತಿದ್ದುಪಡಿ ತರಲಿದೆ. ಬಳಿಕ ಎಸ್‌ಸಿ, ಎಸ್ಟಿ ಮತ್ತು ಒಬಿಸಿಗಳಿಗೆ ನೀಡಿರುವ ಮೀಸಲು ರದ್ದುಪಡಿಸಲಿದೆ. ಮೂರನೇಯದಾಗಿ ಎಲ್ಲಾ ಮೀಸಲನ್ನೂ ಧರ್ಮದ ಆಧಾರದಲ್ಲಿ ಮುಸ್ಲಿಮರಿಗೆ ನೀಡಲಿದೆ’ ಎಂದು ಆರೋಪಿಸಿದರು.

ಇದೇ ವೇಳೆ ಸಮಾಜವಾದಿ ಪಕ್ಷದ ವಿರುದ್ಧವೂ ಹರಿಹಾಯ್ದ ಪ್ರಧಾನಿ ಮೋದಿ, ‘ಈ ಹಿಂದೆ ಸಮಾಜವಾದಿ ಪಕ್ಷ ಉತ್ತರ ಪ್ರದೇಶದಲ್ಲಿನ ಶಾಲೆಗಳನ್ನು ಅಲ್ಪಸಂಖ್ಯಾತ ಶಾಲೆಗಳೆಂದು ಘೋಷಣೆ ಮಾಡಿತ್ತು. ಅದೇ ರೀತಿ ಇಂಡಿಯಾ ಕೂಟ ದೇಶಾದ್ಯಂತ ಎಲ್ಲ ಶಾಲೆಗಳನ್ನು ಅಲ್ಪಸಂಖ್ಯಾತ ಶಾಲೆಗಳೆಂದು ಪ್ರಕಟಿಸಿ ಮುಸ್ಲಿಮರಿಗೆ ಸಂಪೂರ್ಣ ಮೀಸಲಾತಿ ಕಲ್ಪಿಸಿ ರಾಷ್ಟ್ರದ ಬಹುಸಂಖ್ಯಾತ ಜನರನ್ನು ಬಡತನದ ಕೂಪಕ್ಕೆ ತಳ್ಳಿ ಎಲ್ಲ ಹಕ್ಕುಗಳನ್ನು ಕಸಿದು ದ್ವಿತೀಯ ದರ್ಜೆ ಪ್ರಜೆಗಳನ್ನಾಗಿ ಮಾಡುವ ಹುನ್ನಾರ ನಡೆಸಿದೆ. ಹಾಗಾಗಿ ಕಾಂಗ್ರೆಸ್‌ ನಾಯಕರು ವೋಟ್‌ ಜಿಹಾದ್‌ ಮಾಡುವಮತೆ ಫತ್ವಾ ಹೊರಡಿಸಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.

ಮುಸ್ಲಿಮರೂ ಒಬಿಸಿ ಪಟ್ಟಿಗೆ:

ಇದೇ ವೇಳೆ ಕಲ್ಕತ್ತಾ ಹೈಕೋರ್ಟ್‌ ನೀಡಿದ ತೀರ್ಪು ಸ್ಮರಿಸುತ್ತಾ, ‘ಪ್ರತಿಪಕ್ಷಗಳು ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿ ಜಾತಿ ಜಾತಿಗಳ ನಡುವೆ ಒಡಕನ್ನುಂಟು ಮಾಡಲು ಯತ್ನಿಸಿದೆ. ಆದರೆ ಕಲ್ಕತ್ತಾ ಹೈಕೋರ್ಟ್‌ ಪಶ್ಚಿಮ ಬಂಗಾಳದಲ್ಲಿ 77 ಮುಸ್ಲಿಂ ಜಾತಿಗಳಿಗೆ ನೀಡಲಾಗಿದ್ದ ಒಬಿಸಿ ಮೀಸಲನ್ನು ಅಮಾನ್ಯಗೊಳಿಸುವ ಮೂಲಕ ಅನ್ಯಾಯವನ್ನು ತಡೆದಿದೆ’ ಎಂದು ತಿಳಿಸಿದರು.

ಶಾ ಬಾನೋ ರೀತಿ ರಾಮಮಂದಿರಕ್ಕೆ ಅನ್ಯಾಯ: ರಾಮಮಂದಿರಕ್ಕೆ ಬೀಗ ಹಾಕುವ ಕುರಿತು ತಿಳಿಸಿದ ಮೋದಿ, ‘ಶಾಬಾನೋ ಅತ್ಯಾಚಾರದ ಬಳಿಕ ಆತನ ಪತಿ ಜೀವನಾಂಶ ನೀಡಬೇಕು ಎಂದು ನ್ಯಾಯಾಲಯ ತೀರ್ಪು ನೀಡಿದ್ದರೂ ರಾಜೀವ್‌ ಗಾಂಧಿ ಆ ತೀರ್ಪನ್ನು ಬುಡಮೇಲು ಮಾಡುವಂತಹ ಕಾನೂನು ತಂದರು. ಅದೇ ರೀತಿ ಅಯೋಧ್ಯೆಯಲ್ಲಿ ರಾಮಮಂದಿರವನ್ನು ನಿರ್ಮಿಸಲು ಅಡ್ಡಿ ಇಲ್ಲ ಎಂಬುದಾಗಿ ನ್ಯಾಯಾಲಯ ತೀರ್ಪು ನೀಡಿದ್ದರೂ ಅಲ್ಲಿ ಮತ್ತೆ ಮಸೀದಿ ನಿರ್ಮಿಸಲು ಹುನ್ನಾರ ನಡೆಸಿದೆ’ ಎಂದು ಆರೋಪಿಸಿದರು.