ಜಾರ್ಜ್‌ ಫರ್ನಾಂಡೀಸ್‌ಗೆ ಕೈಕೋಳ, ಸರಪಳಿ ಮರೆತುಹೋಯ್ತೇ... ತಿರುಗೇಟು ನೀಡಿದ ಪ್ರಧಾನಿ ಮೋದಿ

| N/A | Published : Feb 06 2025, 11:46 PM IST / Updated: Feb 07 2025, 05:30 AM IST

ಸಾರಾಂಶ

 ಸಂವಿಧಾನ ರದ್ದುಪಡಿಸಲು ಬಿಜೆಪಿ ಯತ್ನಿಸುತ್ತಿದೆ, ಅಂಬೇಡ್ಕರ್‌ ಅವರಿಗೆ ಅವಮಾನ ಮಾಡಿದೆ ಎಂಬ ಕಾಂಗ್ರೆಸ್‌ ನಾಯಕರ ಇತ್ತೀಚಿನ ಸರಣಿ ಟೀಕೆಗೆ ಗುರುವಾರ ಎಳೆಎಳೆಯಾಗಿ ತಿರುಗೇಟು ನೀಡಿದ್ದಾರೆ ಪ್ರಧಾನಿ  ಮೋದಿ

ನವದೆಹಲಿ:ಸಂವಿಧಾನ ರದ್ದುಪಡಿಸಲು ಬಿಜೆಪಿ ಯತ್ನಿಸುತ್ತಿದೆ, ಅಂಬೇಡ್ಕರ್‌ ಅವರಿಗೆ ಅವಮಾನ ಮಾಡಿದೆ ಎಂಬ ಕಾಂಗ್ರೆಸ್‌ ನಾಯಕರ ಇತ್ತೀಚಿನ ಸರಣಿ ಟೀಕೆಗೆ ಗುರುವಾರ ಎಳೆಎಳೆಯಾಗಿ ತಿರುಗೇಟು ನೀಡಿರುವ ಪ್ರಧಾನಿ ನರೇಂದ್ರ ಮೋದಿ, ‘ಸಂವಿಧಾನ ಎಂಬ ಪದ ಕಾಂಗ್ರೆಸ್‌ಗೆ ಹೊಂದಿಬರುವುದಿಲ್ಲ. ಸಂವಿಧಾನಕ್ಕೆ ತಿದ್ದುಪಡಿ ತಂದು ಸ್ವಾತಂತ್ರ್ಯವನ್ನು ಹತ್ತಿಕ್ಕಲು ಕಾಂಗ್ರೆಸ್‌ ನಡೆಸಿದ ಸಂಚನ್ನು ದೇಶ ಮರೆತಿಲ್ಲ. ಅಂಬೇಡ್ಕರ್‌ ಅವರನ್ನು ಕಾಂಗ್ರೆಸ್‌ ನಾಯಕರು ಹೇಗೆ ನಡೆಸಿಕೊಂಡರು ಎಂಬುದಕ್ಕೆ, ಜಾರ್ಜ್‌ ಫರ್ನಾಂಡೀಸ್‌ಗೆ ಸರಪಳಿ ಹಾಕಿ ಹೇಗೆ ಬಂಧಿಸಿದರು ಎಂಬುದಕ್ಕೆ ದೇಶದ ಇತಿಹಾಸವೇ ಸಾಕ್ಷಿ ಎಂದು ತಿರುಗೇಟು ನೀಡಿದ್ದಾರೆ.

ರಾಷ್ಟ್ರಪತಿಗಳ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯದ ಮೇಲೆ ಗುರುವಾರ ರಾಜ್ಯಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ‘ಸಂವಿಧಾನ ಶಿಲ್ಪಿ ಡಾ।ಬಿ.ಆರ್‌.ಅಂಬೇಡ್ಕರ್‌ ಅವರನ್ನು ಕಾಂಗ್ರೆಸ್‌ ಹೇಗೆ ನಡೆಸಿಕೊಂಡಿತು ಎಂಬುದನ್ನು ಇಡೀ ದೇಶವೇ ನೋಡಿದೆ. ಅಂಬೇಡ್ಕರ್‌ ಬಗ್ಗೆ ಈ ಹಿಂದೆ ಕಾಂಗ್ರೆಸ್‌ ದ್ವೇಷ ಹೊಂದಿತ್ತು. ಅವರಿಗೆ ಭಾರತ ರತ್ನ ನೀಡದ ಕಾಂಗ್ರೆಸ್‌, ಇಂದು ಜೈ ಭೀಮ್‌ ಘೋಷಣೆ ಕೂಗುವಂತೆ ಒತ್ತಾಯಿಸುತ್ತದೆ’ ಎಂದು ತಿವಿದರು. ಜೊತೆಗೆ, ದೇಶದ ಮೊದಲ ಪ್ರಧಾನಿ ಜವಾಹರ್‌ ಲಾಲ್‌ ನೆಹರು ಅವರ ಹಂಗಾಮಿ ಸರ್ಕಾರವು ಚುನಾವಣೆ ನಡೆಯುವುದಕ್ಕೂ ಮುನ್ನವೇ ಸಂವಿಧಾನಕ್ಕೆ ತಿದ್ದುಪಡಿ ತಂದು ಸ್ವಾತಂತ್ರ್ಯವನ್ನು ಹತ್ತಿಕ್ಕಲು ಯತ್ನಿಸಿದ್ದನ್ನು ದೇಶ ಮರೆತಿಲ್ಲ ಎಂದು ಕಾಂಗ್ರೆಸ್‌ಗೆ ತಿರುಗೇಟು ನೀಡಿದರು.

ಸಂವಿಧಾನ ಎಂಬ ಪದವು ಕಾಂಗ್ರೆಸ್‌ಗೆ ಸರಿ ಹೊಂದುವುದಿಲ್ಲ. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಅವಧಿಯಲ್ಲಿ ತುರ್ತು ಪರಿಸ್ಥಿತಿ ಹೇರಲಾಗಿತ್ತು. ಈ ವೇಳೆ ನಿಷ್ಕಾರುಣ್ಯವಾಗಿ ಜಾರ್ಜ್‌ ಫರ್ನಾಂಡಿಸ್‌ ಅವರಿಗೆ ಕೋಳ, ಸರಪಳಿಯನ್ನು ಹಾಕಿ ಅಮಾನವೀಯವಾಗಿ ಬಂಧಿಸಲಾಗಿತ್ತು. ಕಾಂಗ್ರೆಸ್‌ ಪರವಾಗಿ ಹಾಡುವುದಿಲ್ಲ ಎಂದ ಮಾತ್ರಕ್ಕೆ ಖ್ಯಾತ ಗಾಯಕ ಕಿಶೋರ್‌ ಕುಮಾರ್‌ ಅವರ ಮೇಲೆ ನಿಷೇಧ ಹೇರಲಾಗಿತ್ತು. ಜೊತೆಗೆ ತುರ್ತು ಪರಿಸ್ಥಿತಿ ಪರ ಬೆಂಬಲ ನೀಡದ ಕಾರಣಕ್ಕೆ ದೂರದರ್ಶನವು ದೇವ್‌ ಆನಂದ್‌ ಅವರ ಚಿತ್ರದ ಮೇಲೆ ನಿಷೇಧ ಹೇರಿತ್ತು. ಕವಿಗಳು ಸಾಹಿತಿಗಳ ಮೇಲೆ ಕಾಂಗ್ರೆಸ್‌ ಪ್ರಹಾರ ನಡೆಸಿತ್ತು ಎಂದು ಗುಡುಗಿದರು.

ಕಾಂಗ್ರೆಸ್‌ ಜಾತಿವಾದದ ಬಗ್ಗೆ ಮಾತಾಡಿದ ಮೋದಿ, ಮೊದಲು ಹಿಂದುಳಿದ ವರ್ಗಗಳ ಸಂಸದರು ಒಬಿಸಿ ಆಯೋಗಕ್ಕೆ ಬೇಡಿಕೆ ಇಟ್ಟಿದ್ದರು. ಆದರೆ ಅದು ತಮ್ಮ ರಾಜಕೀಯಕ್ಕೆ ಹೊಂದುವುದಿಲ್ಲ ಎನ್ನುವ ಕಾರಣಕ್ಕೆ ಕಾಂಗ್ರೆಸ್‌ ಆಯೋಗ ರಚಿಸಲಿಲ್ಲ. ಆದರೆ ಆದರೆ ನಾವು ಒಬಿಸಿ ಸಮಿತಿಗೆ ಸಾಂವಿಧಾನಿಕ ಸ್ಥಾನಮಾನ ನೀಡಿದ್ದೇವೆ ಎಂದರು.