ಸಾರಾಂಶ
ರೋಮ್: ಉಸಿರಾಟ ಸಂಬಂಧಿ ವ್ಯಾಧಿಯಾದ ನ್ಯುಮೋನಿಯಾದಿಂದ ಬಳಲುತ್ತಿರುವ ಕ್ರೈಸ್ತ ಧರ್ಮಗುರು ಪೋಪ್ ಫ್ರಾನ್ಸಿಸ್, ತಾವಿನ್ನು ಹೆಚ್ಚು ದಿನ ಬದುಕುವುದಿಲ್ಲ ಎಂದು ತಮ್ಮ ಆಪ್ತ ಸಹಾಯಕರಿಗೆ ಹೇಳಿರುವುದಾಗಿ ವರದಿಯಾಗಿದೆ.
88 ವರ್ಷದ ಇವರನ್ನು ಶುಕ್ರವಾರ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಎರಡೂ ಶ್ವಾಶಕೋಶಗಳಲ್ಲಿ ನ್ಯುಮೋನಿಯಾ ಇರುವುದು ಪತ್ತೆಯಾಗಿತ್ತು. ಬಳಿಕ ಸೋಮವಾರ ಅವರ ಆರೋಗ್ಯ ಸ್ಥಿರವಾಗಿರುವುದಾಗಿ ವ್ಯಾಟಿಕನ್ ತಿಳಿಸಿತ್ತು. ಬುಧವಾರ ಕೂಡ ಅವರು ಸುಖನಿದ್ರೆಯ ಬಳಿಕ ಬೆಳಗಿನ ಉಪಹಾರ ಸೇವಿಸಿದ್ದರು ಎನ್ನಲಾಗಿತ್ತು. ಇದರ ಬೆನ್ನಲ್ಲೇ ತಮ್ಮ ಚೇತರಿಕೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಪೋಪ್, ತಮ್ಮ ಉತ್ತರಾಧಿಕಾರಿಯ ಆಯ್ಕೆಯತ್ತ ಗಮನ ಹರಿಸಿದ್ದಾರೆ.
ಮೊದಲೇ ಬ್ರಾಂಕೈಟಿಸ್‌ನಿಂದ ಬಳಲುತ್ತಿದ್ದ ಪೋಪ್ ಯುವಕರಾಗಿದ್ದಾಗ ಅವರ ಬಲ ಶ್ವಾಸಕೋಶದ ಒಂದು ಭಾಗವನ್ನು ತೆಗೆಯಲಾಗಿತ್ತು. ಬಳಿಕ ನಿಯಮಿತ ಪರೀಕ್ಷೆಗಳಿಗೆ ಅವರು ಒಳಗಾಗುತ್ತಿದ್ದರು.
ಮುಖ್ಯ ಚುನಾವಣಾ ಆಯುಕ್ತರಾಗಿ ಜ್ಞಾನೇಶ್ ಅಧಿಕಾರ ಸ್ವೀಕಾರ
ನವದೆಹಲಿ: ಭಾರತೀಯ ಚುನಾವಣಾ ಆಯೋಗದ 26ನೇ ಮುಖ್ಯ ಚುನಾವಣಾ ಆಯುಕ್ತರಾಗಿ (ಸಿಇಸಿ) ಜ್ಞಾನೇಶ್ ಕುಮಾರ್ ಬುಧವಾರ ಅಧಿಕಾರ ಸ್ವೀಕರಿಸಿದರು.ಅಧಿಕಾರ ಸ್ವೀಕರಿಸಿದ ಬಳಿಕ ಮಾತನಾಡಿದ ಅವರು, ‘ರಾಷ್ಟ್ರನಿರ್ಮಾಣದ ಮೊದಲ ಹೆಜ್ಜೆ ಮತದಾನ. ಆದ್ದರಿಂದ 18 ವರ್ಷ ಪೂರೈಸಿದ ಪ್ರತಿಯೊಬ್ಬ ನಾಗರಿಕನು ಮತದಾರನಾಗಬೇಕು ಮತ್ತು ಮತ ಚಲಾಯಿಸಬೇಕು. ಚುನಾವಣಾ ಆಯೋಗ ಅಂದೂ ಇಂದೂ ಮುಂದೂ ಮತದಾರರ ಜೊತೆಗಿರಲಿದೆ’ ಎಂದರು.
ಇದೇ ವೇಳೆ ಹರಿಯಾಣ ಕೇಡರ್‌ನ ಮಾಜಿ ಐಎಎಸ್ ಅಧಿಕಾರಿಯಾಗಿರುವ ವಿವೇಕ್ ಜೋಶಿ ಅವರು ಚುನಾವಣಾ ಆಯಕ್ತರಾಗಿ ಅಧಿಕಾರ ಸ್ವೀಕರಿಸಿದರು.ಜ್ಞಾನೇಶ್ ನೇಮಕ ನಿಯಮಾನುಸಾರ ಆಗಿಲ್ಲ ಎಂದು ಇತ್ತೀಚೆಗೆ ಕಾಂಗ್ರೆಸ್ ಆಕ್ಷೇಪಿಸಿತ್ತು.
ಅದಾನಿ ವಿರುದ್ಧ ತನಿಖೆಗೆ ಸಹಾಯ: ಭಾರತಕ್ಕೆ ಅಮೆರಿಕ ಕೋರಿಕೆ
ಪಿಟಿಐ ನ್ಯೂಯಾರ್ಕ್‌ಅದಾನಿ ಸಮೂಹದ ಉದ್ಯಮಿಗಳಾದ ಗೌತಮ್ ಅದಾನಿ ಹಾಗೂ ಸಾಗರ್ ಅದಾನಿ ಅವರ ಮೇಲಿನ ಸೌರ ವಿದ್ಯುತ್ ಗುತ್ತಿಗೆ ಅಕ್ರಮಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಅಮೆರಿಕ ಷೇರುಪೇಟೆ ಆಯೋಗ, ‘ನಾವು ಹಾಕಿರುವ ಕೇಸಿನ ವಿಷಯವನ್ನು ಅದಾನಿ ಜತೆ ಹಂಚಿಕೊಳ್ಳುವ ಪ್ರಕ್ರಿಯೆ ಮುಂದುವರಿದಿದೆ’ ಎಂದು ಹೇಳಿದೆ. ಅಲ್ಲದೆ, ಇದಕ್ಕೆ ಸಹಕಾರ ಬೇಕು ಎಂದು ಭಾರತ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದಿದೆ.
ಅಮೆರಿಕದ ನ್ಯೂಯಾರ್ಕ್ ಕೋರ್ಟ್‌ಗೆ ಸಲ್ಲಿಸಲಾದ ವಸ್ತುಸ್ಥಿತಿ ವರದಿಯಲ್ಲಿ ಅದು ಈ ಮಾಹಿತಿ ನೀಡಿದೆ.
ಕಾಂಗ್ರೆಸ್ ಟಾಂಗ್:
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್, ‘ಅದಾನಿ ವಿರುದ್ಧದ ಅಮೆರಿಕದಲ್ಲಿನ ಕೇಸನ್ನು ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ವೈಯಕ್ತಿಕ ವಿಚಾರ ಎಂದು ಕರೆದರು. ಈಗ ಅಮೆರಿಕ ಷೇರುಪೇಟೆ ಆಯೋಗವು ಭಾರತ ಸರ್ಕಾರದಿಂದ ತನಿಖೆಗೆ ಸಹಾಯ ಬಯಸಿದೆ. ಇದಕ್ಕಾದರೂ ಮೋದಿ ಒಪ್ಪುತ್ತಾರಾ?’ ಎಂದು ಪ್ರಶ್ನಿಸಿದೆ.ಅದಾನಿ ಭಾರತದಲ್ಲಿ ಸೌರ ವಿದ್ಯುತ್ ಗುತ್ತಿಗೆ ಪಡೆಯಲು ಲಂಚ ನೀಡಿದ್ದರು. ಆದರೆ ಈ ವಿಷಯ ಮುಚ್ಚಿಟ್ಟು ಅಮೆರಿಕ ಬ್ಯಾಂಕ್‌ಗಳಲ್ಲಿ ಸಾಲ ಪಡೆದಿದ್ದರು ಎಂಬ ತನಿಖೆಯನ್ನು ಅಮೆರಿಕ ಷೇರುಪೇಟೆ ಆಯೋಗ ನಡೆಸುತ್ತಿದೆ.
ವಾಪಸ್ ಬರುವೆ, ಸೇಡು ತೀರಿಸಿಕೊಳ್ಳುವೆ : ಹಸೀನಾ
ಢಾಕಾ: ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯಸ್ಥ ಮುಹಮ್ಮದ್ ಯೂನುಸ್ ವಿರುದ್ಧ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಮತ್ತೊಮ್ಮೆ ವಾಗ್ದಾಳಿ ನಡೆಸಿದ್ದಾರೆ. ಯೂನಸ್ ಅವರೊಬ್ಬ ದರೋಡೆಕೋರ, ಆತಂಕವಾದಿ, ದೇಶದಲ್ಲಿ ಅವರು ಅರಾಜಕತೆಯನ್ನು ಪ್ರೋತ್ಸಾಹಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಜತೆಗೆ, ನಾನು ದೇಶಕ್ಕೆ ವಾಪಸ್ ಬರುತ್ತೇನೆ ಮತ್ತು ವಿದ್ಯಾರ್ಥಿ ದಂಗೆಯಲ್ಲಿ ಮೃತಪಟ್ಟ ನಮ್ಮ ಪೊಲೀಸರ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳುತ್ತೇನೆ ಎಂದು ಘೋಷಿಸಿದ್ದಾರೆ.
ವಿದ್ಯಾರ್ಥಿಗಳ ದಂಗೆಯಲ್ಲಿ ಮೃತಪಟ್ಟ ನಾಲ್ವರು ಪೊಲೀಸರ ಪತ್ನಿಯರ ಜತೆಗೆ ಝೂಮ್ ಕರೆ ಮಾಡಿ ಮಾತನಾಡಿ ಸಂತಾಪ ಸೂಚಿಸಿದ ಅವರು, ದೇಶಕ್ಕೆ ವಾಪಸಾದ ಬಳಿಕ ಪರಿಹಾರ ನೀಡುವುದಾಗಿ ತಿಳಿಸಿದರು.ಬಾಂಗ್ಲಾದೇಶವನ್ನು ನಾಶ ಮಾಡಲಾಗುತ್ತಿದೆ. ದೇವರ ದಯೆಯಿಂದ ನಾನು ಏನೋ ಒಳ್ಳೆಯದನ್ನು ಮಾಡಲೆಂದೇ ಜೀವಂತವಾಗಿ ಉಳಿದಿದ್ದೇನೆ. ನಾನು ವಾಪಸ್ ಬಂದು ಎಲ್ಲರಿಗೂ ನ್ಯಾಯ ಒದಗಿಸುವ ಕೆಲಸ ಮಾಡುತ್ತೇನೆ ಎಂದರು.
ಯೂನಸ್ ಸರ್ಕಾರಕ್ಕೆ ಆಡಳಿತದ ಅನುಭವ ಇಲ್ಲ. ಉಗ್ರರನ್ನು ಬಿಡುಗಡೆ ಮಾಡುವ ಮೂಲಕ ಮತ್ತು ವಿಚಾರಣಾ ಸಮಿತಿಗಳನ್ನು ರದ್ದುಮಾಡುವ ಮೂಲಕ ಅವರು ಜನರನ್ನು ಹತ್ಯೆ ಮಾಡಲು ಭಯೋತ್ಪಾದಕರನ್ನು ಛೂಬಿಡುತ್ತಿದ್ದಾರೆ. ಪೊಲೀಸರ ಹತ್ಯೆಗಳು ನನ್ನನ್ನು ಅಧಿಕಾರದಿಂದ ಕಿತ್ತೊಗೆಯಲು ಆ ವ್ಯಕ್ತಿ(ಯೂನಸ್) ಮಾಡಿದ ಷಡ್ಯಂತ್ರದ ಭಾಗ ಎಂದು ಆರೋಪಿಸಿದ ಅವರು, ನಾನು ದೇಶಕ್ಕೆ ವಾಪಸಾಗುತ್ತೇನೆ ಮತ್ತು ನಮ್ಮ ಪೊಲೀಸರ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳುತ್ತೇನೆ ಎಂದರು.ಈ ಮಧ್ಯಂತರ ಸರ್ಕಾರವನ್ನು ಕಿತ್ತೊಗೆಯುವಂತೆ ಜನ ನೋಡಿಕೊಳ್ಳಬೇಕಿದೆ. ಯೂನಸ್ ಸರ್ಕಾರದ ಅಡಿ ಭಾರೀ ಪ್ರಮಾಣದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆಗುತ್ತಿದೆ ಎಂದು ಆರೋಪಿಸಿದರು.
ಯೂನಸ್ ತಿರುಗೇಟು:ಹಸೀನಾ ಅವರು ಪೊಲೀಸರ ಕುಟುಂಬದ ಜತೆಗೆ ಮಾತುಕತೆ ನಡೆಸಿದ ಬೆನ್ನಲ್ಲೇ ಯೂನಸ್ ಅವರು ಹಸೀನಾ ವಿರುದ್ಧ ಕಿಡಿಕಾರಿದ್ದಾರೆ. ಆಕೆಯನ್ನು ಭಾರತದಿಂದ ಗಡೀಪಾರು ಆಗುವಂತೆ ನೋಡಿಕೊಳ್ಳುವುದು ನಮ್ಮ ಮೊದಲ ಆದ್ಯತೆಯಾಗಿರಲಿದೆ ಎಂದು ತಿಳಿಸಿದ್ದಾರೆ.
2026ರಿಂದ ಸಿಬಿಎಸ್ಸಿ 10ನೇ ಕ್ಲಾಸ್ ವಿದ್ಯಾರ್ಥಿಗಳಿಗೆ 2 ಅಂತಿಮ ಪರೀಕ್ಷೆ
ನವದೆಹಲಿ: ಮುಂದಿನ ವರ್ಷದಿಂದ ಸಿಬಿಎಸ್‌ಇನಿಂದ (ಸೆಂಟ್ರಲ್ ಬೋರ್ಡ್ ಆಫ್ ಸೆಂಕೆಂಡರಿ ಎಜುಕೇಷನ್) 10ನೇ ತರಗತಿಗೆ ವರ್ಷಕ್ಕೆ ಎರಡು ಬೋರ್ಡ್ ಪರೀಕ್ಷೆ ನಡೆಸಲು ಚಿಂತಿಸಿದೆ. ಇದರ ಜತೆಗೆ, 2026-27ನೇ ಸಾಲಿನಿಂದ ಸಿಬಿಎಸ್‌ಇ ಜತೆಗೆ ಸಂಯೋಜಿತ 260 ವಿದೇಶಿ ಶಾಲೆಗಳಿಗೆ ಭಾರತೀಯ ಪಾಠವನ್ನೂ ಒಳನ್ನೊಳಗೊಂಡ ಅಂತಾರಾಷ್ಟ್ರೀಯ ಪಠ್ಯ ಪರಿಚಯಿಸಲು ತೀರ್ಮಾನಿಸಿದೆ.ಸಿಬಿಎಸ್‌ಇ ಅಧಿಕಾರಿಗಳು, ನ್ಯಾಷನಲ್ ಕೌನ್ಸಿಲ್ ಆಫ್ ಎಜುಕೇಷನಲ್ ರಿಸರ್ಚ್ ಆ್ಯಂಡ್ ಟ್ರೈನಿಂಗ್ (ಎನ್‌ಸಿಇಆರ್‌ಟಿ), ಕೇಂದ್ರೀಯ ವಿದ್ಯಾಲಯ ಸಂಘಟನೆ, ನವೋದಯ ವಿದ್ಯಾಲಯ ಸಮಿತಿ ಮುಖ್ಯಸ್ಥರ ಜತೆಗೆ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ನೇತೃತ್ವದಲ್ಲಿ ನಡೆದ ಶಿಕ್ಷಣ ಸಚಿವಾಲಯದ ಸಭೆಯಲ್ಲಿ ಈ ಕುರಿತು ಬುಧವಾರ ಚರ್ಚೆ ನಡೆಸಲಾಯಿತು. ಮುಂದಿನ ಸೋಮವಾರ ಈ ಕರಡು ನೀತಿಗಳ ಕುರಿತು ಸಾರ್ವಜನಿಕರ ಅಭಿಪ್ರಾಯ ಪಡೆಯಲು ತೀರ್ಮಾನಿಸಲಾಗಿದೆ.
ಬೆಸ್ಟ್ ಆಫ್ 2 ಆಯ್ಕೆ:ಹೊಸ ವ್ಯವಸ್ಥೆಯಲ್ಲಿ ಎರಡು ಪರೀಕ್ಷೆಯಲ್ಲಿ ಯಾವುದರಲ್ಲಿ ಉತ್ತಮ ಸಾಧನೆ ಮಾಡಿರುತ್ತಾರೋ ಆ ಪರೀಕ್ಷೆಯ ಅಂಕಗಳನ್ನು ವಿದ್ಯಾರ್ಥಿಗಳು ಉಳಿಸಿಕೊಳ್ಳಬಹುದಾಗಿದೆ. ಇದು ರಾಷ್ಟ್ರೀಯ ಶಿಕ್ಷಣ ನೀತಿ(ಎನ್‌ಇಪಿ)ಗೆ ಪೂರಕವಾಗಿದೆ. ವಾರ್ಷಿಕವಾಗಿ ಒಂದೇ ಬಾರಿ ನಡೆಯುವ ಬೋರ್ಡ್ ಎಕ್ಸಾಂನಿಂದ ವಿದ್ಯಾರ್ಥಿಗಳ ಮೇಲೆ ಒತ್ತಡ ಹೆಚ್ಚಾಗುತ್ತಿದೆ. ಇದನ್ನು ಕಡಿಮೆ ಮಾಡಲು ಹಾಗೂ ವಿದ್ಯಾರ್ಥಿಗಳಿಗೆ ತಮ್ಮ ಸಾಧನೆ ಉತ್ತಮಪಡಿಸಲು ಈ ಪರೀಕ್ಷಾ ವಿಧಾನ ದಾರಿ ಮಾಡಿಕೊಡುತ್ತದೆ.
ಈ ಹೊಸ ಪರೀಕ್ಷಾ ಮಾದರಿ ಅಂತಾರಾಷ್ಟ್ರೀಯ ಪರೀಕ್ಷಾ ಪದ್ಧತಿಗೆ ಅನುಗುಣವಾಗಿದೆ. ಅಮೆರಿಕದ ಎಸ್‌ಎಟಿ ಪರೀಕ್ಷಾ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಒಂದಕ್ಕಿಂತ ಹೆಚ್ಚು ಬಾರಿ ಪರೀಕ್ಷೆ ಬರೆಯಲು ಅವಕಾಶವಿದೆ. ಯಾವ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿರುತ್ತಾರೋ ಆ ಫಲಿತಾಂಶವನ್ನೇ ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಳ್ಳಬಹುದಾಗಿದೆ.+++ಈ ರೀತಿಯ ಬದಲಾವಣೆ ಮಾಮೂಲಿ ಪರೀಕ್ಷಾ ಸಾಧನೆಗಿಂತ ವಿದ್ಯಾರ್ಥಿಗಳಲ್ಲಿ ಕೌಶಲ್ಯ ಮತ್ತು ಸ್ವಸುಧಾರಣೆಗೆ ಹೆಚ್ಚಿನ ಒತ್ತು ನೀಡಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.