ಸಾರಾಂಶ
ಗಾಂಧಿನಗರ : ‘ದೇಶದ ಕ್ಷಿಪ್ರ ಪ್ರಗತಿಗಾಗಿ ತಮ್ಮ ನೇತೃತ್ವದ ಕೇಂದ್ರ ಸರ್ಕಾರದ ಮೂರನೇ ಅವಧಿಯ ಮೊದಲ 100 ದಿನಗಳಲ್ಲಿ ಪ್ರತಿಯೊಂದು ವಲಯ ಹಾಗೂ ಅಂಶಗಳಿಗೂ ಸ್ಪಂದಿಸಲು ಯತ್ನಿಸಿದ್ದೇವೆ. ನಮ್ಮ ಸರ್ಕಾರದ ಆದ್ಯತೆಗಳು, ವೇಗ ಹಾಗೂ ಪ್ರಮಾಣವನ್ನು ನೀವು ಗಮನಿಸಬಹುದು’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
‘ಮುಂದಿನ 1000 ವರ್ಷಗಳ ಅಭಿವೃದ್ಧಿಗಾಗಿ ಭಾರತ ಬುನಾದಿಯನ್ನು ಸೃಷ್ಟಿಸುತ್ತಿದೆ. ಮೊದಲ ಸ್ಥಾನಕ್ಕೇರುವುದಷ್ಟೇ ನಮ್ಮ ಆದ್ಯತೆಯಲ್ಲ, ಆ ಪಟ್ಟವನ್ನು ಉಳಿಸಿಕೊಳ್ಳುವುದು ಕೂಡ ಆಗಿದೆ ಎಂದು ತಿಳಿಸಿದ್ದಾರೆ. ಅಯೋಧ್ಯೆ ಹಾಗೂ ಇತರೆ 16 ನಗರಳನ್ನು ಮಾದರಿ ಸೌರನಗರ ಮಾಡುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದ್ದೇವೆ’ ಎಂದೂ ಹೇಳಿದ್ದಾರೆ.
4ನೇ ಆವೃತ್ತಿಯ ಜಾಗತಿಕ ನವೀಕರಿಸಬಹುದಾದ ಇಂಧನ ಹೂಡಿಕೆದಾರರ ಸಮಾವೇಶ ಹಾಗೂ ಎಕ್ಸ್‌ಪೋ (ರೀ-ಇನ್‌ವೆಸ್ಟ್ 2024) ಅನ್ನು ಗುಜರಾತಿನ ಗಾಂಧಿನಗರದಲ್ಲಿ ಸೋಮವಾರ ಉದ್ಘಾಟಿಸಿ ಮಾತನಾಡಿದ ಮೋದಿ ಅವರು, ಭಾರತೀಯರಷ್ಟೆ ಅಲ್ಲ, ಇಡೀ ವಿಶ್ವವೇ ಭಾರತ 21ನೇ ಶತಮಾನದ ಯಶಸ್ವಿ ದೇಶ ಎಂಬ ಭಾವನೆ ಹೊಂದಿದೆ ಎಂದು ತಿಳಿಸಿದರು.
ಹಸಿರು ಭವಿಷ್ಯ ಹಾಗೂ ನೆಟ್ ಜೀರೋ ಎಂಬುದು ನಮಗೆ ಅಲಂಕಾರಿಕ ಪದಗಳಲ್ಲ. ಇದು ದೇಶದ ಅಗತ್ಯಗಳು. ಅದನ್ನು ಸಾಧಿಸಲು ಬದ್ಧವಾಗಿದ್ದೇವೆ. 21ನೇ ಶತಮಾನವು ಭಾರತದ ಪಾಲಿಗೆ ಸೌರಶಕ್ತಿಯಲ್ಲಿ ಸುವರ್ಣ ಯುಗವಾಗಲಿದೆ ಎಂದು ತಿಳಿಸಿದರು.
ಹೂಡಿಕೆಗೆ ಜೋಶಿ ಮನವಿ:
‘ದೇಶದ ಹಸಿರು ಯೋಜನೆಗಳಿಗೆ 32.45 ಲಕ್ಷ ಕೋಟಿ ರು. ಹಣಕಾಸು ನೆರವು ನೀಡಲು ಬ್ಯಾಂಕುಗಳು ಹಾಗೂ ಹಣಕಾಸು ಸಂಸ್ಥೆಗಳು ಬದ್ಧತೆ ವ್ಯಕ್ತಪಡಿಸಿವೆ. ಹೀಗಾಗಿ ಹೂಡಿಕೆದಾರರು ಭಾರತದಲ್ಲಿ ಹೂಡಿಕೆ ಮಾಡಬೇಕು’ ಎಂದು ಸಮಾರಂಭದಲ್ಲಿ ಹಾಜರಿದ್ದ ನವೀಕರಿಸಬಹುದಾದ ಇಂಧನ ಸಚಿವ ಪ್ರಹ್ಲಾದ ಜೋಶಿ ಮನವಿ ಮಾಡಿದರು.
100 ದಿನದ ವೀಕ್ ಸರ್ಕಾರ- ಕಾಂಗ್ರೆಸ್:
100 ದಿನದ ದುರ್ಬಲ ಸರ್ಕಾರ ಇದಾಗಿದೆ. ವಕ್ಫ್ ಮಸೂದೆ, ಮಾಧ್ಯಮ ಮಸೂದೆ, ಪಿಂಚಣಿ ಯೋಜನೆ ಸೇರಿ ಹಲವು ವಿಷಯಗಳಲ್ಲಿ ಯೂ-ಟರ್ನ್ ಹೊಡೆದ ಸರ್ಕಾರವಾಗಿದೆ ಎಂದು ಮೋದಿ-3 ಸರ್ಕಾರದ ಮೊದಲ 100 ದಿನಗಳ ಬಗ್ಗೆ ಕಾಂಗ್ರೆಸ್ ವ್ಯಂಗ್ಯವಾಡಿದೆ.
ಮೋದಿಗೆ ಇಂದು 74ನೇ ಜನ್ಮದಿನದ ಸಂಭ್ರಮ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಮಂಗಳವಾರ 74ನೇ ವಸಂತಕ್ಕೆ ಕಾಲಿಡಲಿದ್ದಾರೆ. ತಮ್ಮ ನಾಯಕನ ಜನ್ಮದಿನವನ್ನು ವಿಭಿನ್ನವಾಗಿ ಆಚರಿಸಲು ಬಿಜೆಪಿ ಒಂದೆಡೆ ಭರ್ಜರಿ ಸಿದ್ಧತೆ ಮಾಡಿಕೊಂಡಿದ್ದರೆ, ಮತ್ತೊಂದೆಡೆ ಮೋದಿ ಅಭಿಮಾನಿಗಳು ವಿಶಿಷ್ಟವಾಗಿ ಪ್ರಧಾನಿ ಹುಟ್ಟಿದ ಹಬ್ಬವನ್ನು ಆಚರಿಸಲಿದ್ದಾರೆ.ಪ್ರಧಾನಿ ಹುಟ್ಟುಹಬ್ಬದ ಹಿನ್ನಲೆಯಲ್ಲಿ ಅಜ್ಮೇರ್ ಷರೀಫ್ ದರ್ಗಾವು 4 ಸಾವಿರ ಕೆಜಿಯ ಸಸ್ಯಾಹಾರಿ ಲಂಗೇರ್ ಆಹಾರವನ್ನು ವಿತರಿಸಲು ಮುಂದಾಗಿದೆ. ಚೆನ್ನೈ ಮೂಲದ 13 ವರ್ಷದ ಬಾಲಕಿ ಮೋದಿಯವರ ಭಾವಚಿತ್ರವನ್ನು 800 ಕೆ.ಜಿ ಸಿರಿಧಾನ್ಯಗಳನ್ನು ಬಳಸಿ ತಯಾರಿಸಿದ್ದಾಳೆ. ತವರು ರಾಜ್ಯ ಗುಜರಾತಿನ ಸೂರತ್‌ನಲ್ಲಿ ಪ್ರಧಾನಿ ಜನ್ಮದಿನದಂದು ವ್ಯಾಪಾರಿಗಳು ರಿಯಾಯಿತಿ ದರದಲ್ಲಿ ವಸ್ತುಗಳ ಮಾರಾಟಕ್ಕೆ ಮುಂದಾಗಿದ್ದಾರೆ.
ಮತ್ತೊಂದೆಡೆ ದೇಶದಲ್ಲಿ ಎನ್‌ಡಿಎ ಸರ್ಕಾರ ಸೆ.15ಕ್ಕೆ ಅಧಿಕಾರಕ್ಕೆ ಬಂದು100 ದಿನಗಳು ಸಂದಿದೆ. ಹೀಗಾಗಿ ನರೇಂದ್ರ ಮೋದಿಯವರ ಹುಟ್ಟುಹಬ್ಬದ ದಿನದಂದೇ ಬಿಜೆಪಿ ನಾಯಕರು ಸರ್ಕಾರದ 100 ದಿನದ ಸಾಧನೆಗಳನ್ನು ವಿವರಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ.