ಸಾರಾಂಶ
ತಿರುಮಲ ದೇವಸ್ಥಾನದಲ್ಲಿ ಯೂಟ್ಯೂಬರ್ ಟಿಟಿಎಫ್ ವಾಸನ್ ಸೇರಿದಂತೆ ಕೆಲವರು ಟಿಟಿಡಿ ಉದ್ಯೋಗಿಯಂತೆ ಪೋಸ್ ಕೊಟ್ಟು, ಸರತಿ ಸಾಲಿನಲ್ಲಿ ಕಾಯುವ ಯಾತ್ರಾರ್ಥಿಗಳಿಗೆ ದರ್ಶನಕ್ಕೆ ಅವಕಾಶ ಮಾಡಿಕೊಡಲು ಕಂಪಾರ್ಟ್‌ಮೆಂಟ್ ತೆರೆದಂತೆ ವರ್ತಿಸುತ್ತಿರುವ ತಮಾಷೆಯ ವಿಡಿಯೋ (ಪ್ರಾಂಕ್ ವಿಡಿಯೋ) ವೈರಲ್ ಆಗಿದೆ.
ತಿರುಮಲ: ತಿರುಮಲ ತಿಮ್ಮಪ್ಪನ ದೇವಸ್ಥಾನದಲ್ಲಿ ಯೂಟ್ಯೂಬರ್ ಟಿಟಿಎಫ್ ವಾಸನ್ ಸೇರಿದಂತೆ ಕೆಲವರು ಟಿಟಿಡಿ ಉದ್ಯೋಗಿಯಂತೆ ಪೋಸ್ ಕೊಟ್ಟು, ಸರತಿ ಸಾಲಿನಲ್ಲಿ ಕಾಯುವ ಯಾತ್ರಾರ್ಥಿಗಳಿಗೆ ದರ್ಶನಕ್ಕೆ ಅವಕಾಶ ಮಾಡಿಕೊಡಲು ಕಂಪಾರ್ಟ್‌ಮೆಂಟ್ ತೆರೆದಂತೆ ವರ್ತಿಸುತ್ತಿರುವ ತಮಾಷೆಯ ವಿಡಿಯೋ (ಪ್ರಾಂಕ್ ವಿಡಿಯೋ) ವೈರಲ್ ಆಗಿದೆ.
ಇದರಿಂದ ಗರಂ ಆಗಿರುವ ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ಸಮಿತಿ, ಇಂಥ ಯೂಟ್ಯೂಬರ್‌ಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದೆ.
ಕೆಲವು ಯೂಟ್ಯೂಬರ್‌ಗಳು ಟಿಟಿಡಿ ಉದ್ಯೋಗಿಯಂತೆ ಕಂಪಾರ್ಟ್‌ಮೆಂಟ್ ಅನ್ನು ಅನ್ಲಾಕ್ ಮಾಡಿ ಯಾತ್ರಾರ್ಥಿಗಳನ್ನು ದರ್ಶನಕ್ಕೆ ಬಿಡುವಂತೆ ತಮಾಷೆಯ ವೀಡಿಯೊವನ್ನು ಮಾಡಿದ್ದಾರೆ. ಕಂಪಾರ್ಟ್‌ಮೆಂಟ್‌ಗಳಲ್ಲಿ ಕಾಯುತ್ತಿದ್ದ ಭಕ್ತರು ತಮ್ಮ ಕಂಪಾರ್ಟ್‌ಮೆಂಟ್ ಬಿಡುಗಡೆಯಾಗುತ್ತದೆ ಎಂಬ ನಿರೀಕ್ಷೆಯಲ್ಲಿ ಏಳುತ್ತಾರೆ. ಆದರೆ ಪ್ರಾಂಕ್ ವಿಡಿಯೋ ಮಾಡುವ ಕುಚೇಷ್ಟೆಗಾರ, ಚೇಷ್ಟೆಯಿಂದ ನಗುತ್ತಾ ಕಂಪಾರ್ಟ್‌ಮೆಂಟ್‌ನಿಂದ ಓಡಿಹೋಗುತ್ತಾನೆ. ಆಗ ಭಕ್ತರು ಮೋಸ ಹೋಗಿ ಪೆಚ್ಚು ಮೋರೆ ಹಾಕಿ ಕೂರುತ್ತಾರೆ.
ಈ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊವನ್ನು ಬಿಡುಗಡೆ ಮಾಡಿದ್ದು ಅದು ವಿಶೇಷವಾಗಿ ತಮಿಳುನಾಡಿನಲ್ಲಿ ವೈರಲ್ ಆಗಿದೆ.
ವಿಶ್ವಾಸಮತ ಕಳೆದುಕೊಂಡ ನೇಪಾಳ ಪ್ರಧಾನಿ ಪ್ರಚಂಡ
ಕಾಠ್ಮಂಡು: ನೇಪಾಳದಲ್ಲಿ ಮತ್ತೊಮ್ಮೆ ರಾಜಕೀಯ ಅಸ್ಥಿರತೆ ಸೃಷ್ಟಿಯಾಗಿದೆ. ಪ್ರಧಾನಿ ಪುಷ್ಪ ಕಮಲ್ ದಹಲ್ ‘ಪ್ರಚಂಡ’ ಸಂಸತ್ತಿನಲ್ಲಿ ಶುಕ್ರವಾರ ನಡೆದ ವಿಶ್ವಾಸಮತ ಮತಯಾಚನೆಯಲ್ಲಿ ಸೋತಿದ್ದಾರೆ. ಇದರ ಬೆನ್ನಲ್ಲೇ, ಪ್ರಚಂಡಗೆ ಬಂಬಲ ಹಿಂಪಡೆದಿದ್ದ ಸಿಪಿಎನ್-ಯುಎಂಎಲ್ ಪಕ್ಷದ ನಾಯಕ ಕೆ.ಪಿ. ಶರ್ಮಾ ಓಲಿ ಮುಂದಿನ ಪ್ರಧಾನಿಯೆಂದು ನೇಪಾಳಿ ಕಾಂಗ್ರೆಸ್ ಮುಖ್ಯಸ್ಥ ಶೇರ್ ಬಹದ್ದೂರ್ ದೇವುಬಾ ಘೋಷಿಸಿದ್ದಾರೆ.
275 ಸಂಸದರ ನೇಪಾಳದ ಸಂಸತ್‌ನಲ್ಲಿ ಬಹುಮತವನ್ನು ಪಡೆಯಬೇಕಾದರೆ 138 ಮತಗಳನ್ನು ಪಡೆಯಬೇಕು. ಆದರೆ ಪ್ರಚಂಡ ಕೇವಲ 63 ಮತಗಳನಷ್ಟೇ ಪಡೆದುಕೊಂಡಿದ್ದಾರೆ. ನೇಪಾಳದ ಕಮ್ಯೂನಿಸ್ಟ್ ಪಾರ್ಟಿ ಆಫ್ ಯುನೈಟೆಡ್ +ಮಾರ್ಕ್ಸ್‌ಸ್ಟ್ ಲೆನಿನಿಸ್ಟ್(ಸಿಪಿಎನ್- ಯುಎಂಎಲ್) ಪ್ರಚಂಡ ಪಕ್ಷಕ್ಕೆ ನೀಡಿದ ಬೆಂಬಲವನ್ನು ಹಿಂಪಡೆದ ಬಳಿಕ ಪ್ರಚಂಡ ಸರ್ಕಾರ ಅಲ್ಪ ಮತಕ್ಕೆ ಕುಸಿದಿದೆ.2022ರ ಡಿಸೆಂಬರ್‌ನಲ್ಲಿ 25 ರಂದು ಅಧಿಕಾರ ವಹಿಸಿಕೊಂಡಿದ್ದ ಪ್ರಚಂಡ , ಈವರೆಗೆ ನಾಲ್ಕು ವಿಶ್ವಾಸಮತಯಾಚನೆಯಲ್ಲಿ ಗೆದ್ದಿದ್ದರು. ಆದರೆ ಐದನೇ ಬಾರಿ ಸೋತಿದ್ದಾರೆ.
ನೇಪಾಳದ ಮಾಜಿ ಪ್ರಧಾನಿ ಕೆಪಿ ಶರ್ಮಾ ಒಲಿ ನೇತೃತ್ವದ ಸಿಪಿಎನ್- ಯುಎಂಎಲ್ ಪಕ್ಷದ ಬೆಂಬಲದೊಂದಿಗೆ ಪ್ರಚಂಡ ನೇತೃತ್ವದ ಕಮ್ಯೂನಿಸ್ಟ್ ಪಾರ್ಟಿ ಆಫ್ ಮಾವೋವಾದಿ ಕೇಂದ್ರಿತ (ಸಿಪಿಎಮ್-ಎಮ್‌ಸಿ) ಪಕ್ಷ ಸರ್ಕಾರ ರಚನೆ ಮಾಡಿತ್ತು. ಆದರೆ ಕಳೆದ ವಾರ ಶರ್ಮಾ ಒಲಿ ನೇಪಾಳದ ಮತ್ತೊಂದು ರಾಜಕೀಯ ಪಕ್ಷ ನೇಪಾಳಿ ಕಾಂಗ್ರೆಸ್ ಜೊತೆಗೆ ಮೈತ್ರಿ ಮಾಡಿಕೊಂಡು ಪ್ರಚಂಡಗೆ ನೀಡಿದ್ದ ಬೆಂಬಲವನ್ನು ವಾಪಸ್ ಪಡೆದಿತ್ತು. ಹೀಗಾಗಿ ಪ್ರಚಂಡ ಸರ್ಕಾರ ಪತನವಾಗಿದೆ.
ಈ ಸಲವೂ ನಾನೇ ಅಭ್ಯರ್ಥಿ, ಟ್ರಂಪ್ ವಿರುದ್ಧ ಜಯ ನಂಗೇ: ಬೈಡನ್
ವಾಷಿಂಗ್ಟನ್: ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಅವರನ್ನು ಸೋಲಿಸುತ್ತೇನೆ ಎಂಬ ವಿಶ್ವಾಸ ವ್ಯಕ್ತಪಡಿಸಿರುವ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಈ ಬಾರಿಯೂ ತಾನೇ ಪಕ್ಷದ ಅಭ್ಯರ್ಥಿ ಎಂದು ಘೋಷಿಸಿಕೊಂಡಿದ್ದಾರೆ.ತಮ್ಮ ಉಮೇದುವಾರಿಕೆ ಬಗ್ಗೆ ಪಕ್ಷದಲ್ಲಿ ಎದ್ದಿರುವ ವಿರೋಧಕ್ಕೆ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ ಅವರು, ‘ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಟ್ರಂಪ್‌ರನ್ನು ಸೋಲಿಸಲು ನಾನೇ ಸಮರ್ಥ. ಶಾರೀರಿಕವಾಗಿ ಹಾಗೂ ಮಾನಸಿಕವಾಗಿ ನಾನು ಆರೋಗ್ಯವಾಗಿದ್ದೇನೆ’ ಎನ್ನುವ ಮೂಲಕ ತಮ್ಮ ವಯಸ್ಸು ಹಾಗೂ ಮಾನಸಿಕ ಆರೋಗ್ಯದ ಬಗೆಗಿರುವ ಕಳವಳಗಳನ್ನು ತಳ್ಳಿಹಾಕಿದರು.
ಕಮಲಾ ಹ್ಯಾರಿಸ್ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಬೇಕು ಎಂದ ಕೂಗು ಪಕ್ಷದಲ್ಲೇ ಕೇಳಿಬರುತ್ತಿರುವಾಗಲೇ ಬೈಡನ್ ಈ ಹೇಳಿಕೆ ನೀಡಿದ್ದಾರೆ.
ಪುಟಿನ್-ಮೋದಿ ಅನ್ಯೋನ್ಯತೆ: ಅಮೆರಿಕ ಸರ್ಕಾರ ಬೇಸರ
ವಾಷಿಂಗ್ಟನ್/ನವದೆಹಲಿ: ಇತ್ತೀಚೆಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರನ್ನು ಭೇಟಿ ಮಾಡಿ ಅನ್ಯೋನ್ಯತೆ ಪ್ರದರ್ಶಿಸಿರುವುದು ಅಮೆರಿಕ ಸರ್ಕಾರಕ್ಕೆ ಬೇಸರ ಮೂಡಿಸಿದೆ ಎಂದು ‘ಬ್ಲೂಂಬರ್ಗ್’ ಸುದ್ದಿಸಂಸ್ಥೆ ವರದಿ ಮಾಡಿದೆ.ಅಮೆರಿಕವು ನ್ಯಾಟೋ ಸಭೆ ಹಮ್ಮಿಕೊಳ್ಳುವ ಮುನ್ನ ಮೋದಿ ರಷ್ಯಾಗೆ ಹೋಗಿ, ಉಕ್ರೇನ್ ವಿರುದ್ಧ ಯುದ್ಧ ನಡೆದಿರುವ ವೇಳೆಯೇ ಅಮೆರಿಕ ವಿರೋಧಿಯಾದ ರಷ್ಯಾವನ್ನು ‘ಸರ್ವಋತು ಸ್ನೇಹಿತ’ ಎಂದು ಹೊಗಳಿದ್ದಾರೆ. ಇದು ಬೇಸರದ ವಿಷಯ ಎಂದು ಅಧಿಕಾರಿಗಳು ಹೇಳಿದ್ದಾರೆ ಎಂದು ವರದಿ ಹೇಳಿದೆ.
ಈ ನಡುವೆ ಗುರುವಾರ ದಿಲ್ಲಿಯಲ್ಲಿ ಮಾತನಾಡಿದ ಭಾರತದಲ್ಲಿನ ಅಮೆರಿಕ ರಾಯಭಾರಿ ಗಾರ್ಸೆಟಿ, ‘ಎಲ್ಲ ವಿಷಯಗಳಲ್ಲಿ ಅಮೆರಿಕವನ್ನು ಭಾರತ ಲಘುವಾಗಿ ಪರಿಗಣಿಸುವುದು ತರವಲ್ಲ’ ಎಂದು ಸೂಚ್ಯವಾಗಿ ಹೇಳಿದ್ದಾರೆ.