10 ವರ್ಷಗಳ ಮೋದಿ ಸಾಧನೆಗೆ ರಾಷ್ಟ್ರಪತಿ ಶಹಬ್ಬಾಸ್‌

| Published : Feb 01 2024, 02:01 AM IST / Updated: Feb 01 2024, 04:12 PM IST

ಸಾರಾಂಶ

ಕಳೆದ 10 ವರ್ಷಗಳಲ್ಲಿ ಕೇಂದ್ರದ ನರೇಂದ್ರ ಮೋದಿ ಸರ್ಕಾರ ಹಿಂದೆ ಯಾರೂ ಈ ದೇಶದಲ್ಲಿ ಮಾಡದಷ್ಟು ಸಾಧನೆಗಳನ್ನು ಮಾಡಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಕೊಂಡಾಡಿದ್ದಾರೆ.

ಪಿಟಿಐ ನವದೆಹಲಿ

ಚಂದ್ರಯಾನ-3ರಿಂದ ಹಿಡಿದು ರಾಮಮಂದಿರದ ನಿರ್ಮಾಣದವರೆಗೆ, ಸಂವಿಧಾನದ 370ನೇ ಪರಿಚ್ಛೇದ ರದ್ದತಿಯಿಂದ ಹಿಡಿದು ಅಸಂಖ್ಯ ಸಾಮಾಜಿಕ ಕಲ್ಯಾಣ ಯೋಜನೆಗಳ ಜಾರಿಯವರೆಗೆ ಕಳೆದ 10 ವರ್ಷಗಳಲ್ಲಿ ಕೇಂದ್ರದ ನರೇಂದ್ರ ಮೋದಿ ಸರ್ಕಾರ ಹಿಂದೆ ಯಾರೂ ಈ ದೇಶದಲ್ಲಿ ಮಾಡದಷ್ಟು ಸಾಧನೆಗಳನ್ನು ಮಾಡಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಕೊಂಡಾಡಿದ್ದಾರೆ.

ಹೊಸ ವರ್ಷದ ಮೊದಲ ಸಂಸತ್‌ ಅಧಿವೇಶನದಲ್ಲಿ ಉಭಯ ಸದನಗಳನ್ನು ಉದ್ದೇಶಿಸಿ ಬುಧವಾರ ಮಾತನಾಡಿದ ಅವರು, ಭವಿಷ್ಯದ 25 ವರ್ಷಗಳ ಮಾರ್ಗಸೂಚಿಯನ್ನು ಅಳವಡಿಸಿಕೊಂಡು ದೇಶದ ಅಭಿವೃದ್ಧಿಗಾಗಿ ನಮ್ಮ ಸರ್ಕಾರ ಕೆಲಸ ಮಾಡುತ್ತಿದೆ ಎಂದು ಹೇಳಿದರು.

ಇದು ದೇಶದ ಹೊಸ ಸಂಸತ್‌ ಭವನದಲ್ಲಿ ರಾಷ್ಟ್ರಪತಿಗಳು ಮಾಡಿದ ಮೊದಲ ಭಾಷಣವಾಗಿದೆ.‘ಅಮೃತ ಕಾಲ’ದಲ್ಲಿ ನಿರ್ಮಾಣವಾದ ಹೊಸ ಭವ್ಯ ಸಂಸತ್‌ ಭವನದಲ್ಲಿ ನಾನು ಮೊದಲ ಭಾಷಣ ಮಾಡುತ್ತಿದ್ದೇನೆ. 

ಈ ಕಟ್ಟಡವು ಏಕ ಭಾರತ ಮತ್ತು ಶ್ರೇಷ್ಠ ಭಾರತದ ಕಂಪನ್ನು ಹೊಂದಿದೆ. ಭಾರತವು ಮುಂದಿನ 25 ವರ್ಷಗಳಲ್ಲಿ ಸಾಧಿಸಬೇಕಾದ ಅಭಿವೃದ್ಧಿಗೆ ಈ ಸುಂದರವಾದ ಕಟ್ಟಡ ಸಾಕ್ಷಿಯಾಗಲಿದೆ ಎಂದು ಮುರ್ಮು ಹೇಳಿದರು.

ಅಗಾಧ ಆರ್ಥಿಕಾಭಿವೃದ್ಧಿ: ಭಾರತವಿಂದು ಜಗತ್ತಿನ ಅತಿದೊಡ್ಡ ಆರ್ಥಿಕತೆಗಳ ಪೈಕಿ ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕತೆಯಾಗಿದೆ.ಕೇಂದ್ರ ಸರ್ಕಾರದ ವ್ಯೂಹಾತ್ಮಕ ಕಾರ್ಯಕ್ರಮಗಳಿಂದಾಗಿ ಕಳೆದ ವರ್ಷ 5ನೇ ಸ್ಥಾನದಲ್ಲಿದ್ದ ಬ್ರಿಟನ್ನಿನ ಆರ್ಥಿಕತೆಯನ್ನೂ ಭಾರತ ಹಿಂದಿಕ್ಕಿದೆ. 

ಕಳೆದ ಕೆಲ ವರ್ಷಗಳಲ್ಲಿ ಸಂಭವಿಸಿದ ಎರಡು ಪ್ರಮುಖ ಯುದ್ಧಗಳು ಹಾಗೂ ಕೊರೋನಾ ಮಹಾಮಾರಿಯಿಂದಾಗಿ ಜಗತ್ತು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದರೂ ಭಾರತ ಮಾತ್ರ ಆರ್ಥಿಕಾಭಿವೃದ್ಧಿಯನ್ನು ಸಾಧಿಸುತ್ತಿದೆ. ಕಳೆದ 10 ವರ್ಷಗಳಲ್ಲಿ ‘ಅಸ್ಥಿರ 5’ ಆರ್ಥಿಕತೆಗಳ ಸಾಲಿನಿಂದ ಭಾರತವು ‘ಟಾಪ್‌ 5’ ಆರ್ಥಿಕತೆಗಳ ಸಾಲಿಗೆ ಜಿಗಿದಿದೆ ಎಂದು ಮುರ್ಮು ಶ್ಲಾಘಿಸಿದರು. 

ಜಾಗತಿಕ ಮಟ್ಟಕ್ಕೆ ಭಾರತದ ಬ್ರ್ಯಾಂಡ್‌: ಮೇಡ್‌ ಇನ್‌ ಇಂಡಿಯಾ ಎಂಬುದು ಈಗ ಜಾಗತಿಕ ಬ್ರ್ಯಾಂಡ್‌ ಆಗಿದೆ. ಮೇಕ್‌ ಇನ್‌ ಇಂಡಿಯಾ ಮತ್ತು ಆತ್ಮನಿರ್ಭರ ಭಾರತ ಕಾರ್ಯಕ್ರಮಗಳ ಮೂಲಕ ಭಾರತದ ಆರ್ಥಿಕತೆ ಭಾರಿ ವೇಗದಲ್ಲಿ ಪ್ರಗತಿಯಾಗುತ್ತಿದೆ. 

ರಕ್ಷಣಾ ಉತ್ಪಾದನೆ 1 ಲಕ್ಷ ಕೋಟಿ ರು.ಗಳನ್ನು ದಾಟಿದೆ. ಭಾರತದ ಜಿಡಿಪಿ ಇಂದು 3.7 ಟ್ರಿಲಿಯನ್‌ ಡಾಲರ್‌ (307 ಲಕ್ಷ ಕೋಟಿ ರು.) ಆಗಿದ್ದು, ಜಗತ್ತಿನ 5ನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದೆ ಎಂದು ಮುರ್ಮು ತಿಳಿಸಿದರು.

ಅಂತರಿಕ್ಷದಲ್ಲಿ ಭಾರಿ ಸಾಧನೆ: ಚಂದ್ರಯಾನ-3 ಯೋಜನೆಯ ಮೂಲಕ ಭಾರತವು ಜಗತ್ತಿನಲ್ಲೇ ಮೊದಲ ಬಾರಿ ಚಂದ್ರನ ದಕ್ಷಿಣ ಧ್ರುವವನ್ನು ತಲುಪಿದೆ. ನಮ್ಮ ಸರ್ಕಾರ ಭಾರತವನ್ನು ಜಗತ್ತಿನಲ್ಲೇ ದೊಡ್ಡ ಅಂತರಿಕ್ಷ ಶಕ್ತಿಯಾಗಿ ರೂಪುಗೊಳಿಸಲು ಕೆಲಸ ಮಾಡುತ್ತಿದೆ. 

ಬಾಹ್ಯಾಕಾಶ ಆರ್ಥಿಕತೆಯಲ್ಲೂ ಭಾರತದ ಪಾಲು ಹೆಚ್ಚುತ್ತಿದೆ. ದೇಶದ ಬಾಹ್ಯಾಕಾಶ ಯೋಜನೆಗಳನ್ನು ವಿಸ್ತರಿಸಲು ಮಹತ್ವದ ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ. 

ಅನೇಕ ಹೊಸ ಬಾಹ್ಯಾಕಾಶ ಸ್ಟಾರ್ಟಪ್‌ಗಳು ಹುಟ್ಟಿಕೊಂಡಿವೆ. ಭಾರತದ ಗಗನಯಾನ ಯೋಜನೆಯು ಅಂತರಿಕ್ಷಕ್ಕೆ ಚಿಮ್ಮಲು ಇನ್ನು ಹೆಚ್ಚು ದಿನಗಳಿಲ್ಲ ಎಂದು ಮುರ್ಮು ಹೇಳಿದರು.

ಮಹಿಳಾ ಸಬಲೀಕರಣ ಸಾಕಾರ: ಮೂರು ದಶಕಗಳಿಂದ ಬಾಕಿಯಿದ್ದ ಮಹಿಳಾ ಮೀಸಲು ಮಸೂದೆಯನ್ನು ಪಾಸು ಮಾಡುವ ಮೂಲಕ ಕೇಂದ್ರ ಸರ್ಕಾರ ಮಹಿಳಾ ಸಬಲೀಕರಣಕ್ಕೆ ದಿಟ್ಟ ಹೆಜ್ಜೆಗಳನ್ನಿಟ್ಟಿದೆ. 

ತ್ರಿವಳಿ ತಲಾಖ್‌ ವಿರುದ್ಧ ಸರ್ಕಾರ ಕಠಿಣ ಕಾಯ್ದೆ ರೂಪಿಸಿದೆ. ಯುವಶಕ್ತಿ, ಸ್ತ್ರೀಶಕ್ತಿ, ರೈತಶಕ್ತಿ ಹಾಗೂ ಬಡವರು - ಈ ನಾಲ್ಕು ಸ್ತಂಭಗಳ ಮೇಲೆ ಅಭಿವೃದ್ಧಿ ಹೊಂದಿದ ಭಾರತವನ್ನು ಕಟ್ಟಲು ಸಾಧ್ಯವೆಂದು ಸರ್ಕಾರ ನಂಬಿದೆ ಎಂದು ಮುರ್ಮು ಅಭಿಪ್ರಾಯಪಟ್ಟರು.

ರಾಮಮಂದಿರ ಮತ್ತು ಪ್ರವಾಸೋದ್ಯಮ: ಆರ್ಥಿಕತೆಗೆ ಪ್ರವಾಸೋದ್ಯಮವು ನೀಡುವ ಕೊಡುಗೆಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಪ್ರವಾಸೋದ್ಯಮಕ್ಕೆ ವ್ಯಾಪಕ ಉತ್ತೇಜನ ನೀಡುತ್ತಿದೆ. 

ಪರಿಣಾಮ, ಅಂಡಮಾನ್‌ ಮತ್ತು ಲಕ್ಷದ್ವೀಪಕ್ಕೆ ಪ್ರವಾಸಿಗರ ಸಂಖ್ಯೆ ಹೆಚ್ಚಿದೆ. ಅಯೋಧ್ಯೆಯಲ್ಲಿ ನೂತನವಾಗಿ ನಿರ್ಮಾಣವಾದ ರಾಮಮಂದಿರಕ್ಕೆ ಕೆಲವೇ ದಿನಗಳಲ್ಲಿ 13 ಲಕ್ಷ ಜನರು ಭೇಟಿ ನೀಡಿದ್ದಾರೆ. 

ರಾಮ ಮಂದಿರದ ನಿರ್ಮಾಣಕ್ಕೆ ಈ ದೇಶದ ಜನರು ಶತಮಾನಗಳಿಂದ ಕಾಯುತ್ತಿದ್ದರು. ಅದನ್ನು ಸಾಕಾರಗೊಳಿಸಲಾಗಿದೆ ಎಂದು ಮುರ್ಮು ಹೇಳಿದರು.

ಅದೇ ರೀತಿ, ಜಮ್ಮು ಕಾಶ್ಮೀರಕ್ಕೆ ಸಂವಿಧಾನದ 370ನೇ ವಿಧಿಯಡಿ ನೀಡಿದ್ದ ವಿಶೇಷ ಸ್ಥಾನಮಾನವನ್ನು ಹಿಂಪಡೆಯಬೇಕೆಂದು ದೇಶದ ಜನರು ಬಯಸಿದ್ದರು.ಅದರಂತೆ 370ನೇ ವಿಧಿಯನ್ನು ರದ್ದುಗೊಳಿಸಿರುವುದು ಇಂದು ಇತಿಹಾಸದ ಪುಟಗಳಲ್ಲಿ ಸೇರಿದೆ ಎಂದೂ ತಿಳಿಸಿದರು.

ಸೆಂಗೋಲ್‌ನೊಂದಿಗೆ ಸಂಸತ್ತಿಗೆ ಆಗಮಿಸಿದ ರಾಷ್ಟ್ರಪತಿ ಮುರ್ಮು
ಸಂಸತ್ತಿನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಲು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಆಗಮಿಸುವ ಸಮಯದಲ್ಲಿ ಸೆಂಗೋಲ್‌ ಮೆರವಣಿಗೆ ಮಾಡುವ ಮೂಲಕ ಹೊಸ ಪದ್ಧತಿಗೆ ಬುಧವಾರ ನಾಂದಿ ಹಾಡಲಾಯಿತು.

ಹೊಸ ಸಂಸತ್‌ ಭವನದ ಗಜದ್ವಾರದ ಮೂಲಕ ರಾಷ್ಟ್ರಪತಿ ಅವರನ್ನು ಸ್ವಾಗತಿಸುವ ಸಮಯದಲ್ಲಿ ಸಂಸತ್ತಿನ ಹಿರಿಯ ಮಾರ್ಷಲ್‌ ರಾಜೀವ್‌ ಶರ್ಮಾ ಸಾಂಪ್ರದಾಯಿಕ ಉಡುಗೆಯೊಂದಿಗೆ ಸೆಂಗೋಲ್‌ ಹಿಡಿದು ಮುಂದೆ ಸಾಗಿದರು. 

ಇವರ ಹಿಂಭಾಗದಲ್ಲಿ ಉಪರಾಷ್ಟ್ರಪತಿ ಜಗದೀಪ್‌ ಧನಕರ್‌, ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ಅವರೊಂದಿಗೆ ರಾಷ್ಟ್ರಪತಿ ಮುರ್ಮು ಸದನಕ್ಕೆ ಆಗಮಿಸಿದರು.

ರಾಷ್ಟ್ರಪತಿ ಅವರ ಭಾಷಣ ಮುಗಿಯುವವರೆಗೂ ಸೆಂಗೋಲನ್ನು ಅವರ ಕುರ್ಚಿಯ ಮುಂಭಾಗದಲ್ಲಿ ಇಡಲಾಗಿತ್ತು. ಬಳಿಕ ಸೆಂಗೋಲ್‌ ಮೆರವಣಿಗೆಯೊಂದಿಗೆ ರಾಷ್ಟ್ರಪತಿ ಅವರನ್ನು ಬೀಳ್ಕೊಟ್ಟು, ಸೆಂಗೋಲನ್ನು ಸ್ಪೀಕರ್‌ ಪಕ್ಕದಲ್ಲಿನ ಸ್ಥಳದಲ್ಲಿ ಇಡಲಾಯಿತು.