ವಿಧೇಯಕಗಳ ಕುರಿತ ನಿರ್ಧಾರ ಕೈಗೊಳ್ಳಲು ರಾಷ್ಟ್ರಪತಿ, ರಾಜ್ಯಪಾಲರಿಗೆ ಕಾಲಮಿತಿ ಹೇರುವ ತನ್ನ ಏ.13ರ ತೀರ್ಪಿನ ಕುರಿತು ಸ್ಪಷ್ಟನೆ ಕೋರಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಲ್ಲಿಸಿದ್ದ ಅರ್ಜಿ ಕುರಿತ ವಿಚಾರಣೆ ಪೂರ್ಣಗೊಳಿಸಿರುವ ಸುಪ್ರೀಂಕೋರ್ಟ್‌, ತನ್ನ ತೀರ್ಪನ್ನು ಕಾಯ್ದಿರಿಸಿದೆ.

- ಸುಪ್ರೀಂ ಕೋರ್ಟ್‌ ಸಂವಿಧಾನದ ರಕ್ಷಕ: ಸಿಜೆಐ ಗವಾಯಿ

- ಗವರ್ನರ್‌ ವಿಫಲರಾದಾಗ ನಾವು ಸುಮ್ಮನೆ ಕೂರಬೇಕೇ?

- ಅಟಾರ್ನಿ ಜನರಲ್‌ಗೆ ಸಾಂವಿಧಾನಿಕ ಪೀಠದಿಂದ ಪ್ರಶ್ನೆ

- ಮಸೂದೆ ಅಂಗೀಕಾರಕ್ಕೆ ಕಾಲಮಿತಿ ಸರಿಯೇ ಎಂಬ ವಿವಾದನವದೆಹಲಿ: ವಿಧೇಯಕಗಳ ಕುರಿತ ನಿರ್ಧಾರ ಕೈಗೊಳ್ಳಲು ರಾಷ್ಟ್ರಪತಿ, ರಾಜ್ಯಪಾಲರಿಗೆ ಕಾಲಮಿತಿ ಹೇರುವ ತನ್ನ ಏ.13ರ ತೀರ್ಪಿನ ಕುರಿತು ಸ್ಪಷ್ಟನೆ ಕೋರಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಲ್ಲಿಸಿದ್ದ ಅರ್ಜಿ ಕುರಿತ ವಿಚಾರಣೆ ಪೂರ್ಣಗೊಳಿಸಿರುವ ಸುಪ್ರೀಂಕೋರ್ಟ್‌, ತನ್ನ ತೀರ್ಪನ್ನು ಕಾಯ್ದಿರಿಸಿದೆ.

ಕೊನೆಯ ದಿನದ ವಿಚಾರಣೆ ವೇಳೆ ತನ್ನನ್ನು ತಾನು ಸಂವಿಧಾನದ ರಕ್ಷಕ ಎಂದು ಹೇಳಿಕೊಂಡಿರುವ ನ್ಯಾಯಾಲಯವು, ‘ರಾಜ್ಯಪಾಲರಂಥ ಸಾಂವಿಧಾನಿಕ ಹುದ್ದೆಯಲ್ಲಿರುವವರು ತಮ್ಮ ಕರ್ತವ್ಯ ನಿಭಾಯಿಸುವಲ್ಲಿ ವಿಫಲರಾದಾಗ ನಾವು ಸುಮ್ಮನೆ ಕೂತಿರಬೇಕೇ?’ ಎಂದೂ ಎಂದೂ ಖಾರವಾಗಿ ಪ್ರಶ್ನಿಸಿದೆ.

ಕಳೆದ 10 ದಿನಗಳಿಂದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್‌.ಗವಾಯಿ ಅವರ ನೇತೃತ್ವದ ಸಂವಿಧಾನ ಪೀಠವು ರಾಷ್ಟ್ರಪತಿಗಳು ಸ್ಪಷ್ಟನೆ ಕೋರಿ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿ ಮ್ಯಾರಥಾನ್‌ ವಿಚಾರಣೆ ನಡೆಸಿತ್ತು. ಅಟಾರ್ನಿ ಜನರಲ್‌ ಆರ್‌.ವೆಂಕಟರಮಣಿ, ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಮತ್ತು ಹಿರಿಯ ವಕೀಲರಾದ ಕಪಿಲ್‌ ಸಿಬಲ್‌, ಅಭಿಷೇಕ್‌ ಸಿಂಘ್ವಿ, ಕರ್ನಾಟಕ ಪರ ವಕೀಲ, ಗೋಪಾಲ್‌ ಸುಬ್ರಹ್ಮಣಿಯಂ, ಅರವಿಂದ್‌ ದಾತಾರ್‌ ಮತ್ತಿತರರ ವಾದವನ್ನು ಆಲಿಸಿತ್ತು.

ಸಂವಿಧಾನದ 200, 201ನೇ ಪರಿಚ್ಛೇದವು ರಾಷ್ಟ್ರಪತಿ ಹಾಗೂ ರಾಜ್ಯಪಾಲರಿಗೆ ವಿಧೇಯಕದ ಕುರಿತು ನಿರ್ಧಾರ ಕೈಗೊಳ್ಳಲು ಕಾಲಮಿತಿ ನಿಗದಿಗೆ ಅವಕಾಶ ಮಾಡಿಕೊಡುತ್ತದೆಯೇ, ಇಲ್ಲವೇ ಎಂಬ ಕುರಿತು ಸುದೀರ್ಘವಾದ ವಾದ-ಪ್ರತಿವಾದ ಆಲಿಸಿದೆ.

ಸಿಜೆಐ ಪ್ರಶ್ನೆ:

ಗುರುವಾರ ಕೂಡ ಸಿಜೆಐ ನ್ಯಾ.ಗವಾಯಿ ಅವರು,‘ಪ್ರಜಾಪ್ರಭುತ್ವದ ಒಂದು ವಿಭಾಗವು ತನ್ನ ಕರ್ತವ್ಯ ನಿರ್ವಹಿಸುವಲ್ಲಿ ವಿಫಲವಾದಾಗ ಸಂವಿಧಾನದ ರಕ್ಷಕ ಅಧಿಕಾರರಹಿತನಾಗಿರಬೇಕೇ, ಸುಮ್ಮನೆ ಕೂತಿರಬೇಕೇ’ ಎಂದು ಪ್ರಶ್ನಿಸಿದರು.

ಆಗ ಅಟಾರ್ನಿ ಜನರಲ್‌ ಮೆಹ್ತಾ ಅವರು, ‘ಕೋರ್ಟ್‌ ಮಾತ್ರವಲ್ಲ, ಕಾರ್ಯಾಂಗ, ಶಾಸಕಾಂಗ ಕೂಡ ಮೂಲಭೂತ ಹಕ್ಕುಗಳ ರಕ್ಷಕರು. ಆದರೆ, ಶಾಸಕಾಂಗಕ್ಕೆ ಸಂಬಂಧಿಸಿದ ವಿವೇಚನಾಧಿಕಾರದ ವಿಚಾರವಾಗಿ ರಾಜ್ಯಪಾಲರಿಗೆ ಕಾಲಮಿತಿ ಹೇರಿ ನಿರ್ದೇಶನ ನೀಡುವುದು ಅಧಿಕಾರದ ವರ್ಗೀಕರಣದ ಸಿದ್ಧಾಂತವನ್ನೇ ಉಲ್ಲಂಘಿಸಿದಂತೆ’ ಎಂದರು.

ರಾಷ್ಟ್ರಪತಿ ಹಾಗೂ ರಾಜ್ಯಪಾಲರು ಕೇವಲ ಮಂತ್ರಿಮಂಡಲದ ಸಲಹೆಯಂತೆ ಕಾರ್ಯನಿರ್ವಹಿಸಬೇಕು ಎಂಬ ರಾಜ್ಯಗಳ ವಾದವನ್ನೂ ತಳ್ಳಿಹಾಕಿದ ಅವರು, ‘ಒಂದು ವೇಳೆ ಶಾಸಕಾಂಗವು ನಾವು ಇನ್ನು ಮುಂದೆ ಭಾರತದಿಂದ ಪ್ರತ್ಯೇಕವಾಗುತ್ತೇವೆಂಬ ಶಾಸನ ಅಂಗೀಕರಿಸಿ ಕಳುಹಿಸಿಕೊಟ್ಟರೆ ರಾಜ್ಯಪಾಲರಿಗೆ ಆ ವಿಧೇಯಕವನ್ನು ಹಿಡಿದಿಟ್ಟುಕೊಳ್ಳದೆ ವಿಧಿಯಿಲ್ಲ’ ಎಂದರು.

ಇದೇ ವೇಳೆ, ‘1970ರಿಂದ ಈವರೆಗೆ ಶೇ.90ರಷ್ಟು ವಿಧೇಯಕಗಳನ್ನು ತಿಂಗಳೊಳಗೆ ಅನುಮೋದನೆ ಪಡೆದಿವೆ. ಒಟ್ಟಾರೆ 17,150 ವಿಧೇಯಕಗಳಲ್ಲಿ ಕೇವಲ 20 ಪ್ರಕರಣಗಳಲ್ಲಷ್ಟೇ ವಿಧೇಯಕಗಳನ್ನು ಹಿಡಿದಿಟ್ಟುಕೊಳ್ಳಲಾಗಿದೆ. ಈ ವ್ಯವಸ್ಥೆಯು ದಶಕಗಳಿಂದ ಸಾಮರಸ್ಯದಿಂದ ನಡೆದುಕೊಂಡು ಬಂದಿದೆ’ ಎಂದು ಹೇಳಿದರು.