ಸಾರಾಂಶ
ವಾಷಿಂಗ್ಟನ್: ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ 2 ದಿನಗಳ ಬಹುನಿರೀಕ್ಷಿತ ಪ್ರವಾಸ ಅಮೆರಿಕ ಕಾಲಮಾನ ಗುರುವಾರ ಬೆಳಗ್ಗೆ ಆರಂಭವಾಗಿದೆ. ಭೇಟಿ ವೇಳೆ ಅವರು ಅಮೆರಿಕದಲ್ಲಿ 2ನೇ ಬಾರಿ ಅಧಿಕಾರಕ್ಕೆ ಬಂದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜತೆ ವಲಸಿಗರ ಸಮಸ್ಯೆ ಹಾಗೂ ತೆರಿಗೆ ಬಿಕ್ಕಟ್ಟಿನ ಬಗ್ಗೆ ಚರ್ಚಿಸಲಿದ್ದಾರೆ.ಮೋದಿ ಹಾಗೂ ಟ್ರಂಪ್ ಸಭೆ ಅಮೆರಿಕ ಕಾಲಮಾನ ಗುರುವಾರ ರಾತ್ರಿ (ಭಾರತೀಯ ಕಾಲಮಾನ ಶುಕ್ರವಾರ ಬೆಳಗ್ಗೆ) ನಿಗದಿಯಾಗಿದೆ.
ಅಮೆರಿಕವು ಭಾರತೀಯರು ಸೇರಿ ವಿದೇಶಗಳ ಅಕ್ರಮ ವಲಸಿಗರನ್ನು ಗಡೀಪಾರು ಮಾಡಲಾರಂಭಿಸಿದೆ. ಇಂಥದ್ದರಲ್ಲಿ 104 ವಲಸಿಗ ಭಾರತೀಯರ ಗಡೀಪಾರು ವೇಳೆ ಅವರ ಕೈಗೆ ಕೋಳ, ಕಾಲಿಗೆ ಚೈನು ಕಟ್ಟಿ ಅಮಾನವೀಯತೆ ಪ್ರದರ್ಶಿಸಲಾಗಿತ್ತು. ಇಂಥ ಸೂಕ್ಷ್ಮ ವಿಚಾರಗಳ ಬಗ್ಗೆ ಮೋದಿ ಅವರು ತಮ್ಮ ಆಪ್ತ ಸ್ನೇಹಿತ ಟ್ರಂಪ್ ಜತೆ ಚರ್ಚಿಸುವ ನಿರೀಕ್ಷೆಯಿದೆ.
ಇನ್ನು ಭಾರತ-ಅಮೆರಿಕ ವ್ಯಾಪಾ ಸಂಬಂಧ ಇನ್ನೊಂದು ಪ್ರಮುಖ ವಿಚಾರ. ವಿದೇಶಗಳಿಂದ ಬರುವ ವಸ್ತುಗಳ ಮೇಲೆ ಟ್ರಂಪ್ ಭಾರಿ ತೆರಿಗೆ ವಿಧಿಸುವ ಪ್ರಕ್ರಿಯೆ ಆರಂಭಿಸಿದ್ದಾರೆ ಹಾಗೂ ಮೇಕ್ ಇನ್ ಅಮೆರಿಕಕ್ಕೆ ಆದ್ಯತೆ ನೀಡತೊಡಗಿದ್ದಾರೆ. ಇತ್ತೀಚೆಗೆ ವಿದೇಶಿ ಉಕ್ಕು ಹಾಗೂ ಅಲ್ಯುಮಿನಿಯಂ ಮೇಲೆ ಶೇ.25ರಷ್ಟು ಸುಂಕವನ್ನು ಅವರು ಹೇರಿದ್ದು, ಭಾರತೀಯ ಉಕ್ಕು ಉದ್ಯಮಕ್ಕೆ ಹೊಡೆತ ನೀಡಿದೆ. ಹೀಗಾಗಿ ಇಂಥ ಕ್ರಮಗಳಿಂದ ಭಾರತವನ್ನು ಹೊರಗಿಡಬೇಕು ಎಂಬ ಬೇಡಿಕೆಯನ್ನು ಮೋದಿ ಇಡುವ ಸಾಧ್ಯತೆ ಇದೆ.
ಇನ್ನು ರಕ್ಷಣಾ ವಲಯ ಸೇರಿದಂತೆ ಹಲವು ಮಹತ್ವದ ವಿಚಾರಗಳ ಬಗ್ಗೆಯೂ ವಿಚಾರ ವಿನಿಮಯ ನಡೆಯಲಿದೆ.
ಮಸ್ಕ್, ರಾಮಸ್ವಾಮಿ ಜತೆ ಭೇಟಿ:
ಟ್ರಂಪ್ ಜಯದಲ್ಲಿ ಮಹತ್ವದ ಪಾತ್ರ ವಹಿಸಿದ ವಿಶ್ವದ ನಂ.1 ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ಹಾಗೂ ಭಾರತೀಯ ಮೂಲದ ರಾಜಕಾರಣಿ ವಿವೇಕ್ ರಾಮಸ್ವಾಮಿ ಅವರನ್ನು ಮೋದಿ ಗುರುವಾರ ರಾತ್ರಿ ಭೇಟಿ ಮಾಡಿದರು. ಅಮೆರಿಕ ರಾಷ್ಟ್ರೀಯ ಭದ್ರತಾ ಸಲಹೆಗಾರ ಮೈಕೆಲ್ ವಾಲ್ಷ್‌ರನ್ನೂ ಭೇಟಿ ಮಾಡಿ ರಕ್ಷಣಾ ವಿಷಯಗಳ ಬಗ್ಗೆ ಚರ್ಚಿಸಿದರು.
ಮಸ್ಕ್ ಜತೆಗಿನ ಭೇಟಿ ವೇಳೆ ಭಾರತಕ್ಕೆ ಉಪಗ್ರಹ ಆಧರಿತ ಇಂಟರ್ನೆಟ್ ಸೇವೆಯಾದ ಸ್ಟಾರ್‌ಲಿಂಕ್ ಪ್ರವೇಶ ಹಾಗೂ ಟೆಸ್ಲಾ ಕಾರು ಘಟಕ ಸ್ಥಾಪನೆ ಬಗ್ಗೆ ಚರ್ಚೆ ನಡೆಯಿತೆನ್ನಲಾಗಿದೆ.
ಇನ್ನು ರಾಮಸ್ವಾಮಿ ಜತೆ ವ್ಯಾಪಾರೋದ್ಯಮ, ಭಾರತ-ಅಮೆರಿಕ ಸಂಬಂಧದ ಬಗ್ಗೆ ಮೋದಿ ಚರ್ಚೆ ನಡೆಸಿದ್ದಾರೆ.