ಸಾರಾಂಶ
ಬೆಂಗಳೂರು : ಗಣೇಶೋತ್ವದಲ್ಲಿ ‘ಡಿಜೆ’ಗೆ ಅವಕಾಶ ನೀಡದಿರುವುದನ್ನು ವಿರೋಧಿಸಿ ಹಿಂದೂಪರ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಪೊಲೀಸರೊಂದಿಗೆ ವಾಗ್ವಾದ ನಡೆಸಿದ ಘಟನೆ ವಿಜಯನಗರ ಮತ್ತು ಚಾಮರಾಜಪೇಟೆಯಲ್ಲಿ ಭಾನುವಾರ ರಾತ್ರಿ ನಡೆದಿದೆ. ಇದರಿಂದಾಗಿ ಕೆಲಕಾಲ ಸ್ಥಳದಲ್ಲಿ ಬಿಗುವಿನ ವಾತಾವರಣ ಉಂಟಾಗಿತ್ತು.
ವಿಜಯನಗರದ ಹಂಪಿ ನಗರದಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶ ವಿಸರ್ಜನೆ ಸಮಯದಲ್ಲಿ ಪೊಲೀಸರು ಡಿಜೆಗೆ ಅನುಮತಿ ನಿರಾಕರಿಸಿದ್ದರಿಂದ ಅಸಮಾಧಾನಗೊಂಡ ನೂರಾರು ಹಿಂದೂಪರ ಕಾರ್ಯಕರ್ತರು ರಸ್ತೆಯಲ್ಲೇ ಕುಳಿತು ಪ್ರತಿಭಟನೆ ನಡೆಸಿದರು. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರು ಡಿಜೆಗೆ ಅನುಮತಿ ನೀಡಬೇಕು ಎಂದು ಪಟ್ಟು ಹಿಡಿದಾಗ ಪೊಲೀಸರು ಹಾಗೂ ಮುತಾಲಿಕ್ ನಡುವೆ ವಾಗ್ವಾದ ಉಂಟಾಯಿತು.
ಮಹಿಳೆಯರು, ಮಕ್ಕಳು, ವೃದ್ಧರು, ಅನಾರೋಗ್ಯಕ್ಕೆ ಒಳಗಾದವರಿಗೆ ಡಿಜೆ ಶಬ್ಧದಿಂದ ತೊಂದರೆಯಾಗುತ್ತದೆ. ಆದ್ದರಿಂದ ಅನುಮತಿ ನೀಡುವುದಿಲ್ಲ ಎಂದು ಪೊಲೀಸರು ಹೇಳಿದ್ದು ಮುತಾಲಿಕ್ ಅವರನ್ನು ಕೆರಳಿಸಿತು. ಡಿಜೆ ಶಬ್ಧದಿಂದ ತೊಂದರೆ ಉಂಟಾಗುತ್ತದೆ ಎಂದು ಯಾರಾದರೂ ನಿಮಗೆ ದೂರು ನೀಡಿದ್ದಾರಾ, ಬೆಳಗ್ಗೆಯೇ ಆಜಾನ್ ಕೂಗಿದರೂ ನೀವು ಕ್ರಮ ಕೈಗೊಳ್ಳುವುದಿಲ್ಲ. ಈ ಸಂಬಂಧ ಸುಪ್ರೀಂ ಕೋರ್ಟ್ ನೀಡಿರುವ ಆದೇಶವನ್ನೇ ಪಾಲಿಸುವುದಿಲ್ಲ. ಆದರೆ ಡಿಜೆಗೆ ಅಡ್ಡಿ ಉಂಟು ಮಾಡುತ್ತೀರಾ ಎಂದು ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದರು.
ಪೊಲೀಸರು ಡಿಜೆಗೆ ಅಡ್ಡಿ ಉಂಟು ಮಾಡುವುದನ್ನು ವಿರೋಧಿಸಿ ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದ ಹಿಂದೂಪರ ಕಾರ್ಯಕರ್ತರು ಭಾರತ ಮಾತೆಯ ಭಾವಚಿತ್ರ ಹಿಡಿದು ಕೆಲ ಕಾಲ ರಸ್ತೆಯಲ್ಲೇ ಪ್ರತಿಭಟನೆ ನಡೆಸಿದರು. ಪೊಲೀಸರು ಡಿಜೆಗೆ ಅವಕಾಶ ನೀಡದಿದ್ದರಿಂದ ಬಳಿಕ ಡೋಲು ಬಳಸಿ ಗಣೇಶನ ವಿಸರ್ಜನೆ ನಡೆಸಲಾಯಿತು.
ಡಿಜೆಗೆ ಪಟ್ಟು, ವಿಸರ್ಜನೆ ಮುಂದಕ್ಕೆ
ಮತ್ತೊಂದೆಡೆ, ಚಾಮರಾಜಪೇಟೆಯ ಗಣೇಶೋತ್ಸವ ಸಮಿತಿ ಪ್ರತಿಷ್ಠಾಪಿಸಿದ್ದ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಡಿಜೆಗೆ ಅನುಮತಿ ನೀಡದಿರುವುದನ್ನು ಖಂಡಿಸಿ ಈದ್ಗಾ ಮೈದಾನದ ಬಳಿ ಹಿಂದೂಪರ ಕಾರ್ಯಕರ್ತರು ಭಾನುವಾರ ಪ್ರತಿಭಟನೆ ನಡೆಸಿದರು. ಪೊಲೀಸರು ಡಿಜೆಗೆ ಅನುಮತಿ ನೀಡಿವವರೆಗೂ ಗಣೇಶ ವಿಸರ್ಜನೆ ಮಾಡುವುದಿಲ್ಲ ಎಂದು ಕಾರ್ಯಕರ್ತರು ಪಟ್ಟು ಹಿಡಿದಿದ್ದಾರೆ.