ಸಾರಾಂಶ
ಮೆಪ್ಪಾಡಿ: ವಯನಾಡು ಭೂಕುಸಿತದ ವೇಳೆ ಇಡೀ ಮನೆ ಕುಸಿದುಬಿದ್ದು, ಕುಟುಂಬ ಸದಸ್ಯರೊಂದಿಗೆ ಜೀವ ಉಳಿಸಿಕೊಳ್ಳಲು ಪರಾರಿಯಾಗುತ್ತಿದ್ದ ವೇಳೆ ಎದುರಾಗಿದ್ದ ಆನೆಯೊಂದು ಇಡೀ ಕುಟುಂಬವನ್ನು ಕಾಪಾಡಿದ ಅಚ್ಚರಿಯ ಘಟನೆಯೊಂದು ನಡೆದಿದೆ.
ಚೂರಲ್‌ಮಲೆಯಲ್ಲಿ ಘಟನೆ ನಡೆದ ದಿನ ಮಧ್ಯರಾತ್ರಿ ಭಾರೀ ಪ್ರವಾಹದ ಕಾರಣ ಸುಜಾತಾ ಎಂಬುವವರ ಮನೆ ಪೂರ್ಣ ಕುಸಿದುಬಿದ್ದಿತ್ತು. ಪರಿಣಾಮ ಮನೆಯೊಳಗಿದ್ದ ಅಳಿಯ, ಮಗಳು ಮತ್ತು ಇಬ್ಬರು ಮೊಮ್ಮಕ್ಕಳು ಗಾಯಗೊಂಡಿದ್ದರು. ಇನ್ನು ಇಲ್ಲೇ ಇದ್ದರೆ ಪ್ರಾಣಾಪಾಯ ಗ್ಯಾರಂಟಿ ಎಂದು ಸುಜಾತಾ ಇಡೀ ಕುಟುಂಬ ಸದಸ್ಯರನ್ನು ಸೇರಿಸಿಕೊಂಡು ಟೀ ಎಸ್ಟೇಟ್‌ನ ಎತ್ತರದ ಪ್ರದೇಶದತ್ತ ಹೆಜ್ಜೆ ಹಾಕಿದ್ದರು.
ಆದರೆ ಸ್ವಲ್ಪ ದೂರ ಸಾಗುವಷ್ಟರಲ್ಲೇ ಎದುರಿಗೆ ಮೂರು ಕಾಡಾನೆಗಳ ಗುಂಪು ಕಂಡಿತ್ತು. ಸುಜಾತಾ ಕುಟುಂಬಕ್ಕೆ ಒಮ್ಮೆ ಎದೆ ಧಸಕ್ಕೆಂದಿತ್ತು. ಆದರೂ ಧೈರ್ಯಗೆಡದ ಸುಜಾತಾ ಆನೆಗಳ ಮುಂದೆ ಕೈಮುಗಿದು, ಈಗಷ್ಟೇ ಒಂದು ದುರಂತದಿಂದ ಪಾರಾಗಿ ಬಂದಿದ್ದೇನೆ. ದಯವಿಟ್ಟು ನಮ್ಮ ಕುಟುಂಬವನ್ನು ಬಿಟ್ಟುಬಿಡು. ಬೆಳಗಿನ ಜಾವದವರೆಗೆ ನಮಗೆ ಇಲ್ಲೇ ಇರಲು ಬಿಡಿ ಎಂದು ಕೇಳಿಕೊಂಡಿದ್ದಾರೆ.
ಆನೆಗೆ ಏನನ್ನಿಸಿತೋ ಸುಮ್ಮನಾಗಿದೆ. ಬಳಿಕ ಕುಟುಂಬದ ಎಲ್ಲಾ ಸದಸ್ಯರು ಮೂರು ಆನೆಗಳಿಂದ ಕೆಲವೇ ಅಡಿಗಳ ದೂರದಲ್ಲಿ ಮರದಡಿ ನಿಂತು ಬೆಳಗಿನ ಜಾವದವರೆಗೆ ಕಾಲ ಕಳೆದಿದ್ದಾರೆ. ಆನೆಗಳು ಬೆಳಗಿನ ಜಾವದರೆಗೆ ಅಲ್ಲೇ ನಿಂತು ಕುಟುಂಬಕ್ಕೆ ರಕ್ಷಣೆ ನೀಡಿವೆ. ಬೆಳಗ್ಗೆ ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ ಬಳಿಕವಷ್ಟೇ ಆನೆಗಳು ಅಲ್ಲಿಂದ ತೆರಳಿವೆ ಎಂದು ಸುಜಾತಾ ಆಘಾತಕಾರಿ ಘಟನೆ, ಬಳಿಕ ಆನೆಗಳು ತಮಗೆ ಪ್ರಾಣಭಿಕ್ಷೆ ನೀಡಿದ ಘಟನೆಯನ್ನು ಎಲ್ಲರೊಂದಿಗೆ ಹಂಚಿಕೊಂಡಿದ್ದಾರೆ.
ನೀರಿನಲ್ಲಿ ಕೊಚ್ಚಿಹೋದರೂ ಬದುಕಿದ 40 ದಿನದ ಕಂದ, 6 ವರ್ಷದ ಪುಟ್ಟ ಬಾಲಕ
ಮೆಪ್ಪಾಡಿ: ಚೂರಲ್‌ಮಲೆಯಲ್ಲಿ ಒಂದೇ ಕುಟುಂಬದ 6 ಜನರ ಪೈಕಿ ಮೂವರು ಸಾವನ್ನಪ್ಪಿದ್ದರೂ, 40 ದಿನದ ಮಗು, ಆತನ 6 ವರ್ಷದ ಸೋದರ ಮತ್ತು ಇವರಿಬ್ಬರ ತಾಯಿ ಪವಾಡ ಸದೃಶ್ಯವಾಗಿ ಬದುಕಿ ಬಂದಿದ್ದಾರೆ.
ಭೂಕುಸಿದ ಘಟನೆ ನಡೆದ ದಿನ ಮನೆಯಲ್ಲಿ ನೀರು ನುಗ್ಗಿದ್ದನ್ನು ನೋಡಿದ ತಂಝೀರಾ ಎಂಬ ಬಾಣಂತಿ ತನ್ನ 40 ದಿನಗಳಷ್ಟೇ ತುಂಬಿದ ಹಸುಗೂಸು ಅನಾರ್, 6 ವರ್ಷದ ಇನ್ನೊಬ್ಬ ಮಗ ಹಯಾನ್, ಅಜ್ಜಿ ಮತ್ತು ಮುತ್ತಾತನನ್ನು ಮನೆಯ ಮೇಲಿನ ಮಹಡಿಗೆ ಕರೆದೊಯ್ದಿದ್ದರು.
ಆದರೆ ಪ್ರವಾಹ ಮೇಲಿನ ಮಹಡಿಯನ್ನೂ ಬಿಡದೆ ಅಪ್ಪಳಿಸಿದಾಗ ಅಜ್ಜಿ ಮತ್ತು ಮುತ್ತಾತ, ಪ್ರವಾಹದ ಅಬ್ಬರಕ್ಕೆ ಕೊಚ್ಚಿ ಹೋಗಿದ್ದಾರೆ. ಈ ವೇಳೆ ಪ್ರವಾಹದ ಅಬ್ಬರ ತಂಝೀರಾ ಮೇಲೂ ಅಪ್ಪಳಿಸಿದ್ದು, ಆಕೆಯ ಇಬ್ಬರೂ ಮಕ್ಕಳು ಕೈಯಿಂದ ಜಾರಿ ಹೋಗಿದ್ದಾರೆ. ಅದೃಷ್ಟವಶಾತ್ ಆಕೆ 40 ತಿಂಗಳ ಮಗುವಿನ ಹಿಡಿದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಹಯಾನ್ ನೀರಿನಲ್ಲಿ ಕೊಚ್ಚಿಹೋಗಿದ್ದಾರೆ. ತಂಝೀರಾಳ ಅದೃಷ್ಟಕ್ಕೆ ಹಯಾನ್, ಕೊಚ್ಚಿಹೋದ ಪ್ರದೇಶದಿಂದ ಸ್ವಲ್ಪದೂರದಲ್ಲಿ ಬಾವಿಯೊಂದರ ಕಬ್ಬಿಣದ ತಂತಿಗೆ ಸಿಕ್ಕಿಬಿದ್ದಿದ್ದಾನೆ. ಕೆಲ ಹೊತ್ತಿನ ಬಳಿಕ ರಕ್ಷಣಾ ಸಿಬ್ಬಂದಿ ಆತನನ್ನು ಗಮನಿಸಿ ರಕ್ಷಿಸಿದ್ದಾರೆ.