ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ಸಾಂಸ್ಕೃತಿಕ ಸಂಘಟನೆಗಳಿಂದ ತುಮಕೂರಿನಲ್ಲಿ ಪ್ರತಿಭಟನೆ

| Published : Dec 04 2024, 12:32 AM IST

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ಸಾಂಸ್ಕೃತಿಕ ಸಂಘಟನೆಗಳಿಂದ ತುಮಕೂರಿನಲ್ಲಿ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮಂಗಳವಾರ ಕರ್ನಾಟಕ ಸಾಂಸ್ಕೃತಿಕ ಸಂಘಟನೆಗಳ ರಾಜ್ಮ ಮಹಾ ಒಕ್ಕೂಟದ ವತಿಯಿಂದ ತುಮಕೂರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ, ಸರಕಾರಕ್ಕೆ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಲಾಯಿತು.

ಕನ್ನಡಪ್ರಭ ವಾರ್ತೆ ತುಮಕೂರುತುಮಕೂರು ನಗರದಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಆಡಿಟೋರಿಯಂ (ರಂಗಮಂದಿರ) ನಿರ್ಮಾಣ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮಂಗಳವಾರ ಕರ್ನಾಟಕ ಸಾಂಸ್ಕೃತಿಕ ಸಂಘಟನೆಗಳ ರಾಜ್ಮ ಮಹಾ ಒಕ್ಕೂಟದ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ, ಸರಕಾರಕ್ಕೆ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಿದರು.ಕರ್ನಾಟಕ ಸಾಂಸ್ಕೃತಿಕ ಸಂಘಟನೆಗಳ ರಾಜ್ಯ ಮಹಾ ಒಕ್ಕೂಟದ ರಾಜ್ಯಾಧ್ಯಕ್ಷ ವೀರೇಶ್ ಪ್ರಸಾದ್ (ಗುಬ್ಬಿ ವೀರಣ್) ನೇತೃತ್ವದಲ್ಲಿ ಹತ್ತಾರು ಕಲಾವಿದರು ಜಿಲ್ಲಾಧಿಕಾರಿ ಕಚೇರಿಗಳ ಕಚೇರಿ ಬಳಿ ಪ್ರತಿಭಟನೆ ನಡೆಸಿದರು.ಈ ವೇಳೆ ಮಾತನಾಡಿದ ಕರ್ನಾಟಕ ಸಾಂಸ್ಕೃತಿಕ ಸಂಘಟನೆಗಳ ರಾಜ್ಯ ಮಹಾ ಒಕ್ಕೂಟದ ರಾಜ್ಯಾಧ್ಯಕ್ಷ ವೀರೇಶ್ ಪ್ರಸಾದ್, ರಾಜ್ಯದ ಕಲಾವಿಧರ ಸುಮಾರು 15 ಬೇಡಿಕೆಗಳಿವೆ. ಅವುಗಳ ಕುರಿತು ಚಳಿಗಾಲದ ಅಧಿವೇಶನದ ನಡೆಯುವ ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸಲು ಮುಂದಾಗಿದ್ದೇವೆ. ಅದರ ಪೂರ್ವಭಾವಿಯಾಗಿ ತುಮಕೂರಿನಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ ಎಂದರು. ಇಡೀ ರಾಜ್ಯದಾದ್ಯಂತ ಸರಕಾರದ ಗಮನ ಸೆಳೆಯುವ ಕೆಲಸ ಮಾಡಲಾಗುವುದು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಈ ಮೊದಲು ಸುಮಾರು 431 ಕೋಟಿ ರು.ಗಳನ್ನು ನೀಡಲಾಗಿತ್ತು. ಆದರೆ ಕೋವಿಡ್ ಸಂದರ್ಭದಲ್ಲಿ ಅದನ್ನು 191 ಕೋಟಿ ರೂಗಳಿಗೆ ಕಡಿತ ಮಾಡಿದೆ. ಇದರಿಂದ ಹಿರಿಯ ಕಲಾವಿದರಿಗೆ ನೀಡುತ್ತಿದ್ದ ಮಾಶಾಸನದಲ್ಲಿ ವ್ಯತ್ಯಾಸವಾಗಿದೆ. ಜೀವನವನ್ನು ಕಲೆಗಾಗಿ ಮುಡಿಪಿಟ್ಟ ಕಲಾವಿದರು, ಕೊನೆಗಾಲದಲ್ಕಿ ಆಸ್ಪತ್ರೆ ಖರ್ಚಿಗೂ ಇನ್ನೊಬ್ಬರ ಮೇಲೆ ಅವಲಂಬಿಸುವಂತಹ ಸ್ಥಿತಿಯನ್ನು ಸರ್ಕಾರ ನಿರ್ಮಾಣ ಮಾಡಿದೆ. ಸರಕಾರದ ನಡೆ ಖಂಡಿಸಿ ಬೆಳಗಾವಿ ಅಧಿವೇಶನದಲ್ಲಿ ಹೋರಾಟ ನಡೆಸಲಾಗುವುದು ಎಂದರು.ಸರಕಾರ ನಾಟಕಗಳಿಗೆ ನೀಡುತ್ತಿದ್ದ ಪ್ರೋತ್ಸಾಹ ಧನವನ್ನು ಕಡಿತ ಮಾಡಿದೆ. ಇದರ ಜೊತೆಗೆ ವಾದ್ಯ ಪರಿಕರಗಳ ಖರೀದಿಗೆ ನೀಡುತ್ತಿದ್ದ ಧನ ಸಹಾಯವನ್ನು ನಿಲ್ಲಿಸಿದೆ. ಕೂಡಲೇ ಸರಕಾರ ಮೇಲಿನ ಸಹಾಯಧನ ಮುಂದುವರೆಸಬೇಕು. ಇತ್ತಿಚಿಗೆ ನಡೆದ ತುಮಕೂರು ದಸರಾದಲ್ಲಿ ಪ್ರದರ್ಶನ ನೀಡಿದ ಕಲಾವಿದರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿಗದಿ ಪಡಿಸಿದ್ದಕ್ಕಿಂತ ಕಡಿಮೆ ಸಂಭಾವನೆ ನೀಡಲಾಗಿದೆ. ಕೆಲವರಿಗೆ ಭರಪೂರ ನೀಡಿ ಸ್ಥಳೀಯ ಕಲಾವಿದರನ್ನು ಕಡೆಗಣಿಸುವುದು ತರವಲ್ಲ ಎಂದರು.ಕಲಾಶ್ರೀ ನರಸಿಂಹದಾಸ್ ಮಾತನಾಡಿ, ತುಮಕೂರು ದಸರಾದಲ್ಲಿ ಪ್ರರ್ದಶನ ನೀಡಿದ ಹೊರರಾಜ್ಯದ ಕಲಾವಿದರಿಗೆ 10-20 ಲಕ್ಷದವರೆಗೆ ಸಂಭಾವನೆ ನೀಡಿ, ಐಷರಾಮಿ ಹೊಟೇಲ್ ಗಳಲ್ಲಿ ರಾಜಾತೀತ್ಯ ನೀಡಲಾಗಿದೆ. ಆದರೆ ಸ್ಥಳೀಯ ಕಲಾವಿದರನ್ನು ಕಡೆಗಣಿಸಲಾಗಿದೆ. ನಮ್ಮ ಕೈಯಿಂದ ಹಣ ಹಾಕಿ ಕಲಾವಿದರನ್ನು ಕರೆತಂದು ಹಣ ಕಳೆದುಕೊಂಡಿದ್ದೇವೆ. ಜಿಲ್ಲಾಡಳಿತ ಕೂಡಲೇ ಸ್ಥಳೀಯ ಕಲಾವಿದರಿಗೆ ನೀಡುವ ನೇರವಾಗಿ ಕಲಾವಿದರಿಗೆ ನೀಡಬೇಕು ಎಂದು ಆಗ್ರಹಿಸಿದರು.

ಕಲಾವಿದರ ರಾಜ್ಯ ಮಹಾ ಒಕ್ಕೂಟದ ನರಸಿಂಹಮೂರ್ತಿ ಮಾತನಾಡಿ, ಗುಬ್ಬಿ ವೀರಣ್ಣ ಕಲಾಕ್ಷೇತ್ರ ಶಿಥಿಲವಾಗಿದೆ. ಕಲಾವಿದರ ತವರೂರಾದ ತುಮಕೂರಿನಲ್ಲಿ ಒಂದು ಒಳ್ಳೆಯ ಸುಸಜ್ಜಿತ ಕಲಾಮಂದಿರದ ಅಗತ್ಯವಿದೆ. ಅಂತಾರಾಷ್ಟ್ರೀಯ ಗುಣಮಟ್ಟದ ಕಲಾಮಂದಿರ ನಿರ್ಮಿಸಿ, ಕಲಾವಿದರಿಗೆ ಅನುಕೂಲ ಮಾಡಿಕೊಡುವಂತೆ ಒತ್ತಾಯಿಸಿದರು.ಈ ವೇಳೆ ಕಲಾವಿದರಾದ ಜಿಲ್ಲಾ ಉಪಾಧ್ಯಕ್ಷ ಗಂಗಾಧರಯ್ಯ, ರಮೇಶ್, ಮಂಜುನಾಥ್, ನಾಗಭೂಷಣ್, ಮುತ್ತುರಾಜ್, ಬಸವರಾಜಕೊಂಡ್ಲಿ ಮತ್ತಿತರರು ಉಪಸ್ಥಿತರಿದ್ದರು.