ಇತ್ತೀಚೆಗೆ ಸಿಜೆಪಿ ಪ್ರತಿಭಟನೆಯ ಕಾರಣ ದೆಹಲಿಯ ಜಂತರ್ ಮಂತರ್ ಭಾರಿ ಹೈಡ್ರಾಮಾಗಳಿಗೆ ಸಾಕ್ಷಿಯಾಗುತ್ತಿರುವ ನಡುವೆಯೇ, ಅದನ್ನು ಪ್ರತಿಭಟನೆ ನಡೆಸುವ ಸ್ಥಳಗಳ ಪಟ್ಟಿಯಿಂದ ದೆಹಲಿ ಪೊಲೀಸರು ತೆರವುಗೊಳಿಸಿದ್ದಾರೆ. ಇದರ ಬದಲಾಗಿ ಪ್ರತಿಭಟನೆ ನಡೆಸಲು 3 ಹೊಸ ಸ್ಥಳಗಳನ್ನು ಗುರುತಿಸಿ ಆದೇಶ ಹೊರಡಿಸಲಾಗಿದೆ.
ನವದೆಹಲಿ: ಇತ್ತೀಚೆಗೆ ಸಿಜೆಪಿ ಪ್ರತಿಭಟನೆಯ ಕಾರಣ ದೆಹಲಿಯ ಜಂತರ್ ಮಂತರ್ ಭಾರಿ ಹೈಡ್ರಾಮಾಗಳಿಗೆ ಸಾಕ್ಷಿಯಾಗುತ್ತಿರುವ ನಡುವೆಯೇ, ಅದನ್ನು ಪ್ರತಿಭಟನೆ ನಡೆಸುವ ಸ್ಥಳಗಳ ಪಟ್ಟಿಯಿಂದ ದೆಹಲಿ ಪೊಲೀಸರು ತೆರವುಗೊಳಿಸಿದ್ದಾರೆ. ಇದರ ಬದಲಾಗಿ ಪ್ರತಿಭಟನೆ ನಡೆಸಲು 3 ಹೊಸ ಸ್ಥಳಗಳನ್ನು ಗುರುತಿಸಿ ಆದೇಶ ಹೊರಡಿಸಲಾಗಿದೆ.
ದೆಹಲಿ ಪೊಲೀಸ್ ಕಮಿಷನರ್ ಅನುರಾಗ್ ಕುಮಾರ್ ಅ.11ರಂದು ಈ ಕುರಿತು ನಿರ್ದೇಶನ ಹೊರಡಿಸಿದ್ದು, ರಾಮಲೀಲಾ ಮೈದಾನ, ಬುರಾರಿ ಮೈದಾನ ಮತ್ತು ಸಿಬಿಡಿ ಮೈದಾನಗಳನ್ನು ನೂತನ ಪ್ರತಿಭಟನಾ ಸ್ಥಳಗಳಾಗಿ ನಿಗದಿಪಡಿಸಿದ್ದಾರೆ. ಇವುಗಳಲ್ಲಿ ರಾಮಲೀಲಾ ಮೈದಾನ ಜಂತರ್ ಮಂತರ್‌ನಿಂದ 4 ಕಿ.ಮೀ. ದೂರದಲ್ಲಿದ್ದರೆ, ಸಿಬಿಡಿ ಗ್ರೌಂಡ್ 12 ಕಿ.ಮೀ. ಹಾಗೂ ಬುರಾರಿ ಗ್ರೌಂಡ್ 21 ಕಿ.ಮೀ. ದೂರದಲ್ಲಿವೆ.
ಇತ್ತೀಚೆಗೆ ಪ್ರತಿಭಟನೆಗಳ ಕಾರಣ ದೆಹಲಿಯ ಜನಜೀವನ ಅಸ್ತವ್ಯಸ್ತವಾಗಿತ್ತು. ಪ್ರತಿಭಟನೆ ಮತ್ತು ಧರಣಿಗಳನ್ನು ಸಂಘಟಿಸಲು ಪರ್ಯಾಯ ಸ್ಥಳಗಳನ್ನು ಪರಿಶೀಲಿಸಲು ಕೇಂದ್ರ ಗೃಹ ಸಚಿವಾಲಯವು ಸಮಿತಿಯೊಂದನ್ನು ರಚಿಸಿತ್ತು. ಈ ಸಮಿತಿಯ ಶಿಫಾರಸಿನ ಆಧಾರದ ಮೇಲೆ ಜಂತರ್ ಮಂತರ್ ಅನ್ನು ಧರಣಿ ಸ್ಥಳದ ಪಟ್ಟಿಯಿಂದ ಕೈಬಿಡಲಾಗಿದೆ. ನೂತನವಾಗಿ ಆಯ್ಕೆ ಮಾಡಲಾದ 3 ಸ್ಥಳಗಳಲ್ಲಿ ಪ್ರತಿಭಟನೆ ನಡೆಸಲು ಅನುಸರಿಸಬೇಕಾದ ನಿಯಮಗಳನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಎಂದು ಪೊಲೀಸ್ ಇಲಾಖೆ ತಿಳಿಸಿದೆ
ಸಿಜೆಪಿ, ಕಾಂಗ್ರೆಸ್ ಕಿಡಿ:
ಈ ಕ್ರಮವನ್ನು ಸಿಜೆಪಿ ಹಾಗೂ ಕಾಂಗ್ರೆಸ್ ತೀವ್ರವಾಗಿ ವಿರೋಧಿಸಿವೆ. ‘ಜಂತರ್ ಮಂತರ್‌ನಲ್ಲಿ ಪ್ರತಿಭಟನೆಗೆ ಅವಕಾಶ ನೀಡದಿರುವ ಸರ್ಕಾರದ ಕ್ರಮ ಏಕಪಕ್ಷೀಯವಾಗಿದ್ದು, ನಾವು ಇದನ್ನು ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ’ ಎಂದು ಸಿಜೆಪಿ ಮುಖಂಡ ಸೌರವ್ ದಾಸ್ ಕಿಡಿಕಾರಿದ್ದಾರೆ.
ಮೋದಿ, ಗೃಹ ಸಚಿವ ಅಮಿತ್ ಶಾ ಅವರಿಗೆ ಡೆಮಾಕ್ರಸಿಯಲ್ಲಿ ಆಸಕ್ತಿ ಇಲ್ಲ
‘ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಅವರಿಗೆ ಡೆಮಾಕ್ರಸಿಯಲ್ಲಿ (ಪ್ರಜಾಪ್ರಭುತ್ವ) ಯಾವುದೇ ಆಸಕ್ತಿ ಇಲ್ಲ, ಅವರ ಆಸಕ್ತಿಯೇನಿದ್ದರೂ ‘ಡೆಮೋಕುರ್ಚಿ’ ಬಗ್ಗೆ ಮಾತ್ರ’ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್ ಆರೋಪಿಸಿದ್ದಾರೆ.
