ಸಾರಾಂಶ
ಪುಣೆ: ಯುವತಿಯನ್ನು ‘ದೀದಿ’ (ಅಕ್ಕ) ಎಂದು ಕರೆದ ಕಾಮುಕನೊಬ್ಬ ಆಕೆಯ ಮೇಲೆ ಬಸ್ಸಿನಲ್ಲೇ ಅತ್ಯಾಚಾರ ಎಸಗಿರುವ ಘಟನೆ ಕಳೆದ ಮಂಗಳವಾರ ಪುಣೆಯಲ್ಲಿ ನಡೆದಿದೆ. ಇದರ ಬೆನ್ನಲ್ಲೇ ಆತ ಪರಾರಿ ಆಗಿದ್ದು, ಆರೋಪಿ ಕಬ್ಬಿನ ಗದ್ದೆಯಲ್ಲಿ ಅವಿತಿರುವ ಶಂಕೆ ಇದೆ. ಆತನ ಪತ್ತೆಗೆ ಪೊಲೀಸರು 13 ತಂಡಗಳನ್ನು ರಚಿಸಿ ಡ್ರೋನ್ ಹಾಗೂ ಶ್ವಾನದಳದ ಸಹಾಯವನ್ನೂ ಪಡೆದಿದ್ದಾರೆ.
ದತ್ತಾತ್ರೇಯ ರಾಮದಾಸ್ ಗಾಡೆ (37) ಕೃತ್ಯ ನಡೆಸಿದಾತ. ಸ್ಥಳೀಯ ಪೊಲೀಸ್ ಠಾಣೆಯಿಂದ 100 ಮೀ ದೂರದಲ್ಲಿರುವ ಸ್ವರ್ಗೇಟ್ ಬಸ್ ನಿಲ್ದಾಣದಲ್ಲಿ ನಿಂತಿದ್ದ ಬಸ್ಸಿನಲ್ಲಿ ಯುವತಿ ಮೇಲೆ ಕೃತ್ಯ ನಡೆಸಿ ಪರಾರಿಯಾಗಿದ್ದ.
ಆರೋಪಿ ತನ್ನ ಊರಿನ ಕಬ್ಬಿನ ಹೊಲದಲ್ಲಿ ಅಡಗಿಕುಳಿತಿರಬಹುದು ಎನ್ನುವ ಅನುಮಾನದ ಮೇರೆಗೆ ಪೊಲೀಸರು ಸ್ನಿಫರ್ ನಾಯಿಗಳು ಮತ್ತು ಡ್ರೋನ್ ಬಳಸಿ ಶೋಧ ನಡೆಸುತ್ತಿದ್ದಾರೆ. ತನಿಖೆಗೆ ಅಪರಾಧ ವಿಭಾಗದ ಪೊಲೀಸರು 13 ವಿಶೇಷ ತಂಡಗಳನ್ನು ರಚಿಸಿದ್ದು, ಸುಳಿವು ನೀಡಿದವರಿಗೆ 1 ಲಕ್ಷ ರು. ಬಹುಮಾನ ಘೋಷಿಸಿದ್ದಾರೆ.
‘ಈ ಘಟನೆ ನಿರ್ಭಯಾ (ದಿಲ್ಲಿ ಗ್ಯಾಂಗ್‌ರೇಪ್) ಘಟನೆಯನ್ನು ನೆನಪಿಸಿದೆ. ಆ ಘಟನೆ ಬಳಿಕ ಕಾನೂನು ಬಿಗಿ ಮಾಡಿದ್ದರೂ ಇಂಥ ಕೃತ್ಯ ನಿಂತಿಲ್ಲ’ ಎಂದು ನಿವೃತ್ತ ಸಿಜೆಐ ನ್ಯಾ। ಡಿ.ವೈ. ಚಂದ್ರಚೂಡ ಬೇಸರಿಸಿದ್ದಾರೆ. ಆರೋಪಿಯನ್ನು ಶೀಘ್ರ ಹೆಡೆಮುರಿ ಕಟ್ಟುತ್ತೇವೆ ಎಂದು ಮಹಾರಾಷ್ಟ್ರ ಡಿಸಿಎಂ ಏಕನಾಥ ಶಿಂಧೆ ಹೇಳಿದ್ದಾರೆ. ಘಟನೆ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಆಗಿದ್ದೇನು?
ಕಳೆದ ಮಂಗಳವಾರ ಪುಣೆಯ ಸ್ವರ್ಗೇಟ್ ಬಸ್ ನಿಲ್ದಾಣದಲ್ಲಿ ನಸುಕಿನ 6 ಗಂಟೆಗೆ ಮಹಾರಾಷ್ಟ್ರದ ಸತಾರಾ ಜಿಲ್ಲೆಯಲ್ಲಿರುವ ತನ್ನ ಮನೆಗೆ ಹೋಗಲು ಬಸ್‌ಗಾಗಿ ಕಾಯುತ್ತಿದ್ದಳಿ. ಆಗ ದೀದಿ (ಸಹೋದರಿ) ಎಂದು ಹೇಳುತ್ತ ಆಕೆಯನ್ನು ಗಾಡೆ ಮಾತನಾಡಿಸಿದ ಹಾಗೂ ಎಲ್ಲಿ ಹೋಗಬೇಕು ಎಂದು ಕೇಳಿದ. ಆಗ ಆಕೆ ‘ಸತಾರಾ’ ಎಂದು ಹೇಳಿದಾಗ ‘ನಿಮ್ಮ ಬಸ್ಸು ಇಲ್ಲೇ ಇದೆ’ ಎಂದು ಹೇಳಿ ಖಾಳಿ ಬಸ್ಸಿನಲ್ಲಿ ಕರೆದುಕೊಂಡು ಹೋದ ಹಾಗೂ ಬಾಗಿಲು ಲಾಕ್ ಮಾಡಿ, ಅತ್ಯಾಚಾರ ನಡೆಸಿ ಪರಾರಿಯಾದ.
ಪೊಲೀಸ್ ಠಾಣೆಯ ಕೇವಲ 100 ಮೀ. ಅಂತರದಲ್ಲಿ ಘಟನೆ ನಡೆದಿದೆ. ಯುವತಿ ಬಳಿಕ ಬೆಳಗ್ಗೆ 9 ಗಂಟೆಗೆ ದೂರು ನೀಡಿದ್ದು, ಪೊಲೀಸರು ದೂರು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.ಅಪರಾಧದ ಹಿನ್ನೆಲೆ ಹೊಂದಿರುವ ಗೇಡ್ ಮೇಲೆ ಕ್ರಿಮಿನಲ್ ದಾವೆಗಳಿದ್ದು, ಪುಣೆಯ ಮತ್ತು ನರೆಯ ಅಹಿಲ್ಯಾನಗರದಲ್ಲಿ ಕಳ್ಳತನ ಮತ್ತು ದರೋಡೆ, ಸರಗಳ್ಳತನ ಪ್ರಕರಣಗಳಿದ್ದು, 2019ರಿಂದ ಜಾಮೀನಿನ ಮೇಲೆ ಹೊರಗಿದ್ದಾನೆ.