ಸಾರಾಂಶ
ಪುಣೆ : ಇಲ್ಲಿನ ಸ್ವರ್ಗೇಟ್ ಬಸ್ ನಿಲ್ದಾಣದಲ್ಲಿ ಕಳೆದ ಮಂಗಳವಾರ, ನಿಂತಿದ್ದ ಬಸ್ಸಿನಲ್ಲಿ 26 ವರ್ಷದ ಮಹಿಳೆ ಮೇಲೆ ಅತ್ಯಾಚಾರವೆಸಗಿ ಪರಾರಿಯಾಗಿದ್ದ ಆರೋಪಿ ದತ್ತಾತ್ರೇಯ ರಾಮದಾಸ್ ಗಾಡೆ (37) ಎಂಬಾತನನ್ನು ಬಂಧಿಸುವಲ್ಲಿ ಪೊಲೀಸರು ಕೊನೆಗೂ ಯಶಸ್ವಿಯಾಗಿದ್ದಾರೆ.
ಪುಣೆ ಬಳಿಯ ಶಿರೂರ್ ತಾಲೂಕಿನ ಭತ್ತದ ಗದ್ದೆಯಲ್ಲಿ ಅಡಗಿ ಕುಳಿತಿದ್ದ ಆರೋಪಿಯನ್ನು ಶುಕ್ರವಾರ ಬೆಳಗಿನ ಜಾವ 2 ಗಂಟೆ ಸುಮಾರಿಗೆ ಡ್ರೋನ್ ಮತ್ತು ಸ್ನಿಪರ್ ನಾಯಿಗಳ ಸಹಾಯದಿಂದ ಬಂಧಿಸಿದ್ದಾರೆ. ಇಡೀ ಕಾರ್ಯಾಚರಣೆಯಲ್ಲಿ 500 ಪೊಲೀಸರು ಭಾಗಿಯಾಗಿದ್ದರು.
ಪೊಲೀಸ್ ಮೂಲಗಳ ಪ್ರಕಾರ ಆರೋಪಿ ಕತ್ತಿನಲ್ಲಿ ಗಾಯದ ಗುರುತು ಪತ್ತೆಯಾಗಿದ್ದು, ಆತ ಆತ್ಮಹತ್ಯೆಗೂ ಯತ್ನಿಸಿರಬಹುದು ಎನ್ನುವ ಶಂಕೆ ವ್ಯಕ್ತವಾಗಿದೆ. ಸದ್ಯ ಪೊಲೀಸರು ಆತನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದು, ಬಳಿಕ ಕೋರ್ಟ್‌ಗೆ ಹಾಜರು ಪಡಿಸಲಿದ್ದಾರೆ.
ಸಿಕ್ಕಿಬಿದ್ದಿದ್ದು ಹೇಗೆ?:
ರೇಪ್ ಮಾಡಿದ ಬಳಿಕ ಬಳಿಕ ಆರೋಪಿ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಪರಾರಿಯಾಗಿದ್ದ. ಆದರೆ ಗಾಡೆ ಊಟಕ್ಕಾಗಿ ಆತನ ಊರು ಶಿರೂರಿನ ಮನೆಯೊಂದಕ್ಕೆ ಹೋಗಿದ್ದ ಎನ್ನುವ ಮಾಹಿತಿ ಪೊಲೀಸರಿಗೆ ಲಭ್ಯವಾಗಿತ್ತು. ಈ ಮಾಹಿತಿ ಬೆನ್ನಟ್ಟಿದ್ದ ಪೊಲೀಸರು ಶಿರೂರು ತಲುಪುವಲ್ಲಿ ಯಶಸ್ವಿಯಾಗಿದ್ದರು.
ಆಗ ನೀರು ಕೇಳುವ ನೆಪದಲ್ಲಿ ಆತ ಹೋಗಿದ್ದ ಮನೆಯೊಳಗೆ ಪ್ರವೇಶಿಸಿದ್ದರು. ಅಷ್ಟರಲ್ಲಾಗಲೇ ಆತ ಅಲ್ಲಿಂದ ಪರಾರಿಯಾಗಿದ್ದ. ಮನೆಯವರು ನೀಡಿದ ಸುಳಿವಿನ ಮೇರೆಗೆ ಪೊಲೀಸರು ಊರಿನ ಆಸುಪಾಸಿನಲ್ಲಿಯೇ ಹುಡುಕಾಟ ನಡೆಸಿದ್ದರು. ಈ ಸಂದರ್ಭದಲ್ಲಿ ಆತ ಭತ್ತದ ಹೊಲದಲ್ಲಿ ಅಡಗಿ ಕುಳಿತಿರುವುದು ತಿಳಿದು, ಡ್ರೋನ್, ಸ್ನಿಪರ್ ನಾಯಿ ಬಳಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.