ಸಾರಾಂಶ
ಚಂಡೀಗಢ: ಪಂಜಾಬ್‌ನ ಆಮ್ ಆದ್ಮಿ ಪಕ್ಷದ ಶಾಸಕಿ, ಮಾಜಿ ಸಚಿವೆ, ಅನ್ಮೋಲ್ ಗಗನ್ ಮಾನ್ ಅವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದಾರೆ.
ಗಾಯಕಿಯೂ ಆಗಿರುವ ಅನ್ಮೋಲ್ ಅವರು ಈ ಕುರಿತು ಎಕ್ಸ್‌ನಲ್ಲಿ ಹೇಳಿಕೆ ನೀಡಿ, ‘ಭಾರವಾದ ಮನಸ್ಸಿನಿಂದ ರಾಜಕೀಯದಿಂದ ದೂರ ಸರಿಯುತ್ತಿದ್ದೇನೆ. ನನ್ನ ರಾಜೀನಾಮೆಯನ್ನು ಸ್ಪೀಕರ್ ಅವರು ಅನುಮೋದಿಸಿದ್ದಾರೆ. ಪಂಜಾಬ್‌ನ ಭಗವಂತ್ ಮಾನ್ ಸರ್ಕಾರವು ಜನರ ಆಶೋತ್ತರಗಳನ್ನು ಈಡೇರಿಸುತ್ತದೆ ಎಂದು ನಾನು ನಂಬಿದ್ದೇನೆ’ ಎಂದು ಬರೆದಿದ್ದಾರೆ.
ಇವರು 2022ರಿಂದ ಖರರ್ ಕ್ಷೇತ್ರದಿಂದ ಶಾಸಕಿಯಾಗಿ ಆಯ್ಕೆಯಾಗಿದ್ದು, ಸಚಿವೆಯಾಗಿಯೂ ಸೇವೆ ಸಲ್ಲಿಸಿದ್ದಾರೆ.
ನಟಿ ಸಂಗೀತಾ ಬಿಜಲಾನಿ ಪುಣೆ ತೋಟದ ಮನೆಯಲ್ಲಿ ಕಳ್ಳತನ
ಪುಣೆ: ಬಾಲಿವುಡ್ ನಟಿ ಸಂಗೀತಾ ಬಿಜಲಾನಿ ಅವರ ತೋಟದ ಮನೆಯಲ್ಲಿ ಖದೀಮರು ಕೈಚಳಕ ತೋರಿಸಿದ್ದು, ಟೀವಿ, ಫ್ರಿಡ್ಜ್ ಸೇರಿದಂತೆ ಹಲವು ಗೃಹಪಯೋಗಿ ವಸ್ತುಗಳನ್ನು ಕಳ್ಳತನ ಮಾಡಿರುವ ಘಟನೆ ಮಹಾರಾಷ್ಟ್ರದ ಪುಣೆಯ ಮಾವಲ್‌ನಲ್ಲಿ ನಡೆದಿದೆ.ನಾಲ್ಕು ತಿಂಗಳ ಬಳಿಕ ನಟಿ ಟಿಕೋನಾ ಗ್ರಾಮದ ಪಾವ್ನಾ ಡ್ಯಾಂ ಬಳಿಯ ಫಾರ್ಮ್ ಹೌಸ್‌ಗೆ ಭೇಟಿ ನೀಡಿದ ಬಳಿಕ ಕಳ್ಳತನವಾಗಿರುವ ವಿಚಾರ ಬೆಳಕಿಗೆ ಬಂದಿದೆ. ಈ ಸಂಬಂಧ ನಟಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ‘ ಮನೆಯ ಮುಖ್ಯ ಬಾಗಿಲು ಮತ್ತು ಕಿಟಕಿ ಗ್ರಿಲ್ ಮುರಿಯಲಾಗಿದೆ. ಟೀವಿ, ಫ್ರಿಡ್ಜ್ , ಬೆಡ್ ಸೇರಿದಂತೆ ಮನೆಯ ಹಲವು ಗೃಹಪಯೋಗಿ ಉತ್ಪನ್ನಗಳು ಕಾಣೆಯಾಗಿವೆ. ಇದರ ಜೊತೆಗೆ ಸಿಸಿಟೀವಿಯನ್ನು ನಾಶಪಡಿಸಲಾಗಿದೆ’ ಎಂದಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುರುವ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
ಅನ್ಯಧರ್ಮ ಪಾಲನೆ: ಟಿಟಿಡಿಯ ನಾಲ್ವರು ಸಿಬ್ಬಂದಿಗಳು ಸಸ್ಪೆಂಡ್
ತಿರುಪತಿ: ಅನ್ಯಧರ್ಮಗಳನ್ನು ಪಾಲನೆ ಮಾಡುತ್ತಿದ್ದ ನಾಲ್ವರು ಸಿಬ್ಬಂದಿಗಳನ್ನು ತಿರುಪತಿಯ ಪ್ರಸಿದ್ಧ ವೆಂಕಟೇಶ್ವರ ದೇಗುಲದ ಆಡಳಿತ ಮಂಡಳಿಯಾಗಿರುವ ತಿರುಪತಿ ತಿರುಮಲ ದೇವಸ್ಥಾನ (ಟಿಟಿಡಿ) ಸಮಿತಿ ಕೆಲಸದಿಂದ ಅಮಾನತು ಮಾಡಿದೆ.ಟಿಟಿಡಿ ಅಧೀನದಲ್ಲಿ ಕೆಲಸ ಮಾಡುತ್ತಿದ್ದ ಉಪ ಕಾರ್ಯನಿರ್ವಾಹಕ ಎಜಿನಿಯರ್ ಬಿ. ಎಲಿಜರ್, ಬಿಐಆರ್‌ಆರ್‌ಡಿ ಆಸ್ಪತ್ರೆಯ ಸ್ಟಾಫ್ ನರ್ಸ್ ಎಸ್. ರೋಸಿ, ಫಾರ್ಮಸಿಸ್ಟ್ ಎಂ. ಪ್ರೇಮಾವತಿ ಹಾಗೂ ಎಸ್.ವಿ. ಆಯುರ್ವೇದ ಫಾರ್ಮಸಿಯ ಜಿ ಅಸುಂತ ಅವರನ್ನು ಅಮಾನತುಗೊಳಿಸಲಾಗಿದೆ.
‘ಈ ನಾಲ್ವರು ಹಿಂದೂಯೇತರ ಧರ್ಮಗಳನ್ನು ಪಾಲನೆ ಮಾಡುತ್ತಿದ್ದುದು ತಿಳಿದುಬಂದಿದೆ. ಸಂಸ್ಥೆಯ ನೀತಿ ಸಂಹಿತೆ ಉಲ್ಲಂಘಿಸಿ, ಕರ್ತವ್ಯದಲ್ಲಿ ಬೇಜವಾಬ್ದಾರಿ ನಡೆ ತೋರಿದ್ದಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ’ ಎಂದು ಟಿಟಿಡಿ ತಿಳಿಸಿದೆ.
ಟಿಟಿಡಿ ಅಧೀನದಲ್ಲಿ ಕೆಲಸ ಮಾಡುವ ಯಾವುದೇ ವ್ಯಕ್ತಿಗಳು ಅನ್ಯಧರ್ಮ ಪಾಲಕರಾಗಿರಬಾರದು. ಹಿಂದೂಗಳಾಗಿರಬೇಕು ಎಂಬ ನಿಯವಿದೆ.
ಮಹಾ ವಿಪಕ್ಷ ಮೈತ್ರಿಕೂಟದ ಬಗ್ಗೆ ಉದ್ಧವ್ ಅಪಸ್ವರ
ಮುಂಬೈ: ಇತ್ತೀಚೆಗೆ ತಮ್ಮ ಇತ್ತೀಚಿನ ಕಡುವೈರಿ, ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್‌ರನ್ನು ಭೇಟಿಯಾದ ಬೆನ್ನಲ್ಲೇ, ತಾವೇ ಭಾಗವಾಗಿರುವ ಮಹಾ ವಿಕಾಸ್ ಅಘಾಡಿ (ಎಂವಿಎ) ಮೈತ್ರಿಕೂಟದ ವಿರುದ್ಧ ಶಿವಸೇನಾ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಅಪಸ್ವರ ನುಡಿದಿದ್ದಾರೆ. 2024ರ ವಿಧಾನಸಭಾ ಚುನಾವಣೆಯಲ್ಲಿ ಸೀಟು ಹಂಚಿಕೆ ಹಾಗೂ ಅಭ್ಯರ್ಥಿ ಆಯ್ಕೆಯಲ್ಲಿ ಎಂವಿಎ ಮಾಡಿದ ವಿಳಂಬದಿಂದಾಗಿಯೇ ಸೋಲುಣ್ಣಬೇಕಾಯಿತು ಎಂದು ಆರೋಪಿಸಿದ್ದಾರೆ.ತಮ್ಮದೇ ಆದ ಶಿವಸೇನಾ (ಯುಬಿಟಿ) ಮುಖವಾಣಿ ಸಾಮ್ನಾ ಪತ್ರಿಕೆಗೆ ಸಂದರ್ಶನ ನೀಡಿದ ಅವರು, ‘ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಸೀಟು ಹಂಚಿಕೆ, ಅಭ್ಯರ್ಥಿ ಆಯ್ಕೆಯಲ್ಲಿ ವಿಳಂಬವಾಯಿತು. ಎಂವಿಎಯಲ್ಲಿನ ಒಳಜಗಳಗಳು ನಮ್ಮ ಬಗ್ಗೆ ಕೆಟ್ಟ ಸಂದೇಶ ನೀಡಿದವು. ಅದು ಸರಿಪಡಿಸಿಕೊಳ್ಳಲೇಬೇಕಾದ ತಪ್ಪಾಗಿತ್ತು. ಭವಿಷ್ಯದಲ್ಲಿ ಇಂತಹ ತಪ್ಪುಗಳು ಸಂಭವಿಸಿದರೆ ಒಟ್ಟಿಗೆ ಇರುವುದರಲ್ಲಿ ಅರ್ಥವಿಲ್ಲ’ ಎಂದಿದ್ದಾರೆ.
ಇತ್ತೀಚೆಗೆ ರಾಜ್ ಹಾಗೂ ಉದ್ಧವ್ ಠಾಕ್ರೆ ಜಂಟಿ ವಿಜಯೋತ್ಸವ ನಡೆಸಿ, ಒಗ್ಗಟ್ಟು ಪ್ರದರ್ಶಿಸಿದ್ದರು. ಆ ವೇಳೆ, ಇದು ವಿಪಕ್ಷ ಎಂವಿಎ ಕೂಟದಲ್ಲಿ ಬಿರುಕಿಗೆ ಕಾರಣವಾಗಬಹುದು ಎಂದು ವಿಶ್ಲೇಷಿಸಲಾಗಿತ್ತು. ಅದರ ಬೆನ್ನಲ್ಲೇ, ಉದ್ಧವ್‌ರಿಂದ ಈ ಹೇಳಿಕೆ ಬಂದಿದೆ.
2024ರ ವಿಧಾನಸಭಾ ಚುನಾವಣೆಯಲ್ಲಿ 288 ಸ್ಥಾನಗಳ ಪೈಕಿ ಎಂವಿಕೆ ಕೂಟ ಕೇವಲ 46 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ.
ಚೀನಾದಿಂದ ಬ್ರಹ್ಮಪುತ್ರಾ ನದಿಗೆ ಡ್ಯಾಂ ನಿರ್ಮಾಣ ಶುರು
ಬೀಜಿಂಗ್: ಅರುಣಾಚಲ ಪ್ರದೇಶದ ಗಡಿಯಲ್ಲಿರುವ ಟಿಬೆಟ್‌ನಲ್ಲಿ ಬ್ರಹ್ಮಪುತ್ರಾ ನದಿಗೆ ಅಡ್ಡಲಾಗಿ ಸುಮಾರು 14 ಲಕ್ಷ ಕೋಟಿ ರು. ಮೊತ್ತದ ಅಣೆಕಟ್ಟಿನ ನಿರ್ಮಾಣವನ್ನು ಚೀನಾ ಶನಿವಾರ ಔಪಚಾರಿಕವಾಗಿ ಪ್ರಾರಂಭಿಸಿದೆ.ಟಿಬೆಟ್ ಸ್ವಾಯತ್ತ ಪ್ರದೇಶದ ನ್ಯಿಂಗ್ಚಿ ನಗರದ ಮೈನ್ಲಿಂಗ್ ಜಲವಿದ್ಯುತ್ ಕೇಂದ್ರದ ಬಳಿ ಶಿಲಾನ್ಯಾಸ ಸಮಾರಂಭ ನಡೆಯಿತು. ಈ ವೇಳೆ ಕಾಮಗಾರಿಯ ಅಧಿಕೃತ ಆರಂಭವನ್ನು ಚೀನಾದ ಪ್ರಧಾನಿ ಲಿ ಕ್ವಿಯಾಂಗ್ ಘೋಷಿಸಿದ್ದಾರೆ ಎಂದು ಸರ್ಕಾರಿ ಸ್ವಾಮ್ಯದ ಕ್ಸಿನ್ಹುವಾ ಸುದ್ದಿಸಂಸ್ಥೆ ವರದಿ ಮಾಡಿದೆ.ಬ್ರಹ್ಮಪುತ್ರಾ ನದಿಯು ಅರುಣಾಚಲ ಪ್ರದೇಶಕ್ಕೆ ಮತ್ತು ನಂತರ ಬಾಂಗ್ಲಾದೇಶಕ್ಕೆ ಯೂ-ಟರ್ನ್ ರೀತಿ ಹರಿಯುವ ಪ್ರದೇಶದಲ್ಲಿ ಚೀನಾ ಈ ಅಣೆಕಟ್ಟನ್ನು ನಿರ್ಮಿಸುತ್ತಿದೆ. ಈ ಅಣೆಕಟ್ಟು ನಿರ್ಮಾಣವಾದರೆ ಬ್ರಹ್ಮಪುತ್ರಾ ಹರಿವನ್ನು ಚೀನಾ ನಿಯಂತ್ರಿಸುತ್ತದೆ. ಬೃಹತ್ ಪ್ರಮಾಣದ ನೀರನ್ನು ಬಿಡುಗಡೆ ಮಾಡಿ ಅರುಣಾಚಲ ಪ್ರದೇಶಕ್ಕೆ ಪ್ರವಾಹ ಸ್ಥಿತಿಯನ್ನು ಉಂಟುಮಾಡಬಹುದು ಎಂಬ ಆತಂಕ ಭಾರತದ್ದು.