ಕಾರಿನಲ್ಲಿ ಕೂರಿಸಿಕೊಂಡು ಸುಲಿಗೆ ಮಾಡಿ 18 ತಿಂಗಳಲ್ಲಿ 11 ಕೊಲೆ ಮಾಡಿದ್ದ ಸೀರಿಯಲ್‌ ಕಿಲ್ಲರ್‌ ಅಂದರ್‌

| Published : Dec 26 2024, 01:01 AM IST / Updated: Dec 26 2024, 04:40 AM IST

ಸಾರಾಂಶ

ಕಾರಿನಲ್ಲಿ ಕೂರಿಸಿಕೊಂಡು ಸುಲಿಗೆ ಮಾಡಿ ಕೊಲೆ ಮಾಡುತ್ತಿದ್ದ ಸೀರಿಯಲ್ ಕಿಲ್ಲರ್‌ನನ್ನು ಪಂಜಾಬ್‌ ಪೊಲೀಸರು ಬಂಧಿಸಿದ್ದಾರೆ. ಬಂಧಿತ ರಾಮ್‌ ಸರೂಪ್‌ 18 ತಿಂಗಳಲ್ಲಿ 11 ಕೊಲೆ ಮಾಡಿರುವುದಾಗಿ ಹೇಳಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರೂಪ್‌ನಗರ (ಪಂಜಾಬ್‌): ಕಾರಿನಲ್ಲಿ ಕೂರಿಸಿಕೊಂಡು ಸುಲಿಗೆ ಮಾಡಿ ಕೊಲೆ ಮಾಡುತ್ತಿದ್ದ ಸೀರಿಯಲ್ ಕಿಲ್ಲರ್‌ನನ್ನು ಪಂಜಾಬ್‌ ಪೊಲೀಸರು ಬಂಧಿಸಿದ್ದಾರೆ. ಬಂಧಿತ ರಾಮ್‌ ಸರೂಪ್‌ 18 ತಿಂಗಳಲ್ಲಿ 11 ಕೊಲೆ ಮಾಡಿರುವುದಾಗಿ ಹೇಳಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಮ್‌ ಸರೂಪ್‌, ಹೋಶಿಯಾರ್‌ಪುರದ ಚೌರಾ ಗ್ರಾಮದ ನಿವಾಸಿಯಾಗಿದ್ದು, ತನ್ನ ಕಾರಿನಲ್ಲಿ ಡ್ರಾಪ್‌ ನೀಡುವ ನೆಪದಲ್ಲಿ ಜನರನ್ನು ಹತ್ತಿಸಿಕೊಳ್ಳುತ್ತಿದ್ದ. ಬಳಿಕ ಅವರನ್ನು ಹಣ, ಚಿನ್ನಾಭರಣ, ಫೋನ್ ಮತ್ತು ಬೆಲೆಬಾಳುವ ವಸ್ತುಗಳನ್ನು ನೀಡುವಂತೆ ಪೀಡಿಸುತ್ತಿದ್ದ. ಒಂದು ವೇಳೆ ಬೇಡಿಕೆಗೆ ಸ್ಪಂದಿಸದಿದ್ದರೆ ಅವರನ್ನು ಇಟ್ಟಿಗೆ, ಚೂರಿ ಮತ್ತು ಮಾರಕಾಸ್ತ್ರಗಳಿಂದ ಕೊಲೆ ಮಾಡುತ್ತಿದ್ದಾಗಿ ಆತನೇ ಹೇಳಿಕೊಂಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅ.8ರಂದು ಪಂಜಾಬ್‌ನ ಕೀರಟ್‌ಪುರದ ರಾಷ್ಟ್ರೀಯ ಹೆದ್ದಾರಿ ಸಂಕ ಕೇಂದ್ರದ ಬಳಿ ನಡೆದಿದ್ದ ಕೊಲೆ ಪ್ರಕರಣವನ್ನು ತನಿಖೆ ನಡೆಸುವಾಗ ಆರೋಪಿ ರಾಮ್‌ ಪೊಲೀಸರ ಬಲೆಗೆ ಬಿದ್ದಿದ್ದಾನೆ. ತನಿಖೆಯನ್ನು ತೀವ್ರಗೊಳಿಸಿದಾಗ ತಾನು 18 ತಿಂಗಳಲ್ಲಿ 11 ಕೊಲೆಗಳನ್ನು ಮಾಡಿದ್ದಾಗಿ ಹೇಳಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.