ಸಾರಾಂಶ
ಉಕ್ರೇನ್‌ನೊಂದಿಗಿನ ಯುದ್ಧ 3 ವರ್ಷಕ್ಕೆ ಕಾಲಿಡುತ್ತಿರುವ ಹೊತ್ತಿನಲ್ಲೇ ಯೋಧರ ಕೊರತೆ ಎದುರಿಸುತ್ತಿರುವ ರಷ್ಯಾ ಸೇನೆ, ಇದಕ್ಕಾಗಿ ಹೊಸ ಆಫರ್ ನೀಡಿದೆ
ಮಾಸ್ಕೋ: ಉಕ್ರೇನ್‌ನೊಂದಿಗಿನ ಯುದ್ಧ 3 ವರ್ಷಕ್ಕೆ ಕಾಲಿಡುತ್ತಿರುವ ಹೊತ್ತಿನಲ್ಲೇ ಯೋಧರ ಕೊರತೆ ಎದುರಿಸುತ್ತಿರುವ ರಷ್ಯಾ ಸೇನೆ, ಇದಕ್ಕಾಗಿ ಹೊಸ ಆಫರ್ ನೀಡಿದೆ. ರಷ್ಯಾದ ಯಾವುದೇ ಯುವಕರು ಸೇನೆ ಸೇರಿ, ಒಂದು ವರ್ಷಗಳ ಕಾಲ ಉಕ್ರೇನ್ ವಿರುದ್ಧದ ಯುದ್ಧದಲ್ಲಿ ಹೋರಾಡುವ ಮುಚ್ಚಳಿಕೆ ನೀಡಿದರೆ ಅವರ ಎಲ್ಲಾ ಸಾಲ ಮನ್ನಾ ಮಾಡುವುದಾಗಿ ಘೋಷಿಸಿದ್ದಾರೆ.
ಸರ್ಕಾರದ ಹೊಸ ಆಫರ್ ಅನ್ವಯ, ರಕ್ಷಣಾ ಸಚಿವಾಲಯದೊಂದಿಗೆ ಡಿ.1 ಒಳಗಾಗಿ ಒಪ್ಪಂದಕ್ಕೆ ಸಹಿ ಹಾಕಿದರೆ 10 ಮಿಲಿಯನ್ ರೂಬಲ್ 80 ಲಕ್ಷ ರು.) ವರೆಗಿನ ಸಾಲ ಮನ್ನಾ ಮಾಡಲಾಗುವುದು ಎಂದು ತಿಳಿಸಲಾಗಿದೆ. ಇದು ಡಿ.1ರ ಒಳಗೆ ಸಾಲ ಮರುಪಾವತಿಸಬೇಕಿರುವ ಎಲ್ಲಾ ನೇಮಿತರಿಗೆ ಅನ್ವಯಿಸುತ್ತದೆ.ಈಗಾಗಲೇ, ಉಕ್ರೇನ್ ವಿರುದ್ಧ ಸೆಣಸಲು ಸಿದ್ಧರಾಗುವವರಿಗೆ ಅಧಿಕ ವೇತನ ನೀಡುವ ಮೂಲಕ ನೇಮಕಾತಿಯನ್ನು ಅಧಿಕ ಮಾಡಿಕೊಂಡು ಸೇನೆಯನ್ನು ಸಶಕ್ತಗೊಳಿಸಲು ಪ್ರಯತ್ನಿಸುತ್ತಿದೆ. ಜೊತೆಗೆ ಉತ್ತರ ಕೊರಿಯಾಕ್ಕೆ ರಕ್ಷಣಾ ಉಪಕರಣಗಳನ್ನು ನೀಡಿ ಅಲ್ಲಿಂದ 10000 ಯೋಧರನ್ನು ಕರೆತಂದು ಯುದ್ಧಕ್ಕೆ ರಷ್ಯಾ ಬಳಸಿಕೊಳ್ಳುತ್ತಿದೆ. ಜೊತೆಗೆ ಮಧ್ಯವರ್ತಿಗಳ ಮೂಲಕ ಭಾರತ ಸೇರಿದಂತೆ ವಿವಿಧ ದೇಶಗಳ ಯುವಕರಿಗೆ ನಾನಾ ಹುದ್ದೆಯ ಆಫರ್ ನೀಡಿ ಅವರನ್ನು ಯುದ್ಧದ ಬಲೆಗೆ ತಳ್ಳುತ್ತಿದೆ. ಅದರ ನಡುವೆಯೇ ಈ ಹೊಸ ಆಫರ್ ಪ್ರಕಟಿಸಲಾಗಿದೆ.
2022ರಲ್ಲಿನ ಉಕ್ರೇನ್ ಮೇಲಿನ ಆಕ್ರಮಣದ ಬಳಿಕ ಬಡ್ಡಿ ದರವನ್ನು ಶೇ.21ರಷ್ಟು ಏರಿಸಿದ ಬಳಿಕವೂ ಸಾಲ ತೆಗೆದುಕೊಳ್ಳುತ್ತಿರುವವರ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ ಎಂದು ಅಲ್ಲಿನ ರಾಷ್ಟ್ರೀಯ ಬ್ಯಾಂಕ್ ತಿಳಿಸಿದೆ.