ಸಾರಾಂಶ
ಪಹಲ್ಗಾಂ ಉಗ್ರದಾಳಿಗೆ ಪ್ರತೀಕಾರ ತೀರಿಸಿಕೊಳ್ಳಲು ಸಜ್ಜಾಗುತ್ತಿರುವ ಭಾರತಕ್ಕೆ ಇದೀಗ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಂದಲೂ ಬೆಂಬಲ ಲಭಿಸಿದೆ
ನವದೆಹಲಿ: ಪಹಲ್ಗಾಂ ಉಗ್ರದಾಳಿಗೆ ಪ್ರತೀಕಾರ ತೀರಿಸಿಕೊಳ್ಳಲು ಸಜ್ಜಾಗುತ್ತಿರುವ ಭಾರತಕ್ಕೆ ಇದೀಗ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಂದಲೂ ಬೆಂಬಲ ಲಭಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ದೂರವಾಣಿ ಸಂಭಾಷಣೆ ವೇಳೆ ಪಹಲ್ಗಾಂ ದಾಳಿಯನ್ನು ‘ಕ್ರೂರ ಘಟನೆ’ ಎಂದು ಖಂಡಿಸಿದ ಪುಟಿನ್, ‘ದಾಳಿಕೋರರನ್ನು ಶಿಕ್ಷಿಸಿ’ ಎಂದಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ವಿದೇಶಾಂಗ ಇಲಾಖೆ ವಕ್ತಾರ ರಣಧೀರ್ ಜೈಸ್ವಾಲ್, ‘ದಾಳಿಯಲ್ಲಿ ಮೃತಪಟ್ಟ ಅಮಾಯಕರಿಗೆ ಸಂತಾಪ ಸೂಚಿಸಿದ ಪುಟಿನ್, ಉಗ್ರವಾದದ ವಿರುದ್ಧದ ಭಾರತದ ಯುದ್ಧಕ್ಕೆ ಪೂರ್ಣ ಬೆಂಬಲ ನೀಡುವ ಭರವಸೆ ನೀಡಿದ್ದಾರೆ. ಅಂತೆಯೇ ದಾಳಿಯನ್ನು ಕ್ರೂರ ಅಪರಾಧ ಎಂದು ಹೇಳಿರುವ ಅವರು, ಅದರ ಹಿಂದಿರುವವರನ್ನು ಶಿಕ್ಷಿಸಿ ಎಂದಿದ್ದಾರೆ’ ಎಂದು ತಿಳಿಸಿದ್ದಾರೆ.
ಇದೇ ವೇಳೆ, ‘ಭಾರತದೊಂದಿಗೆ ಭಯೋತ್ಪಾದನೆ ವಿರುದ್ಧ ಹೋರಾಡುವಲ್ಲಿ ರಷ್ಯಾದ ಬೆಂಬಲವನ್ನು ಪುನರುಚ್ಚರಿಸಿದ ಪುಟಿನ್, ರಷ್ಯಾ ಮತ್ತು ಭಾರತದ ನಡುವಿನ ಸಂಬಂಧಗಳು ‘ಬಾಹ್ಯ ಪ್ರಭಾವ’ದಿಂದ ಪ್ರಭಾವಿತವಾಗಿಲ್ಲ ಎಂದು ಹೇಳಿದ್ದು, ಭಾರತ-ರಷ್ಯಾ ನಡುವಿನ ವಿಶೇಷ ಕಾರ್ಯತಂತ್ರ ಪಾಲುದಾರಿಕೆಯನ್ನು ಮತ್ತಷ್ಟು ಗಾಢಗೊಳಿಸುವ ಬದ್ಧತೆಯನ್ನು ಪುನರುಚ್ಚರಿಸಿದ್ದಾರೆ’ ಎಂದು ಜೈಸ್ವಾಲ್ ಮಾಹಿತಿ ನೀಡಿದ್ದಾರೆ.