ಸಾರಾಂಶ
ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರ, ಅಂಡಮಾನ್-ನಿಕೋಬಾರ್ ಹಾಗೂ ಉತ್ತರಾಖಂಡ ರಾಜ್ಯ ಬಿಜೆಪಿ ನೂತನ ಅಧ್ಯಕ್ಷರನ್ನು ಮಂಗಳವಾರ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.
- ಸದ್ಯದಲ್ಲೇ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆ ನಿರೀಕ್ಷೆ
ನವದೆಹಲಿ: ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರ, ಅಂಡಮಾನ್-ನಿಕೋಬಾರ್ ಹಾಗೂ ಉತ್ತರಾಖಂಡ ರಾಜ್ಯ ಬಿಜೆಪಿ ನೂತನ ಅಧ್ಯಕ್ಷರನ್ನು ಮಂಗಳವಾರ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.ತೆಲಂಗಾಣದಲ್ಲಿ ಶಾಸಕ ರಾಜಾ ಸಿಂಗ್ ವಿರೋಧದ ನಡುವೆಯೂ ರಾಮಚಂದ್ರರಾವ್ ಅವರನ್ನು ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ಚುನಾಯಿಸಲಾಗಿದೆ.
ಆಂಧ್ರಪ್ರದೇಶದಲ್ಲಿ ಹಿರಿಯ ಬಿಜೆಪಿ ನಾಯಕ ಪಿವಿಎನ್ ಮಾದೇವ್ ಅವರು ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿದ್ದು, ಹಾಲಿ ಅಧ್ಯಕ್ಷೆ ಡಿ.ಪುರುಂದೇಶ್ವರಿ ಅವರಿಂದ ಅಧಿಕಾರ ಸ್ವೀಕರಿಸಿದ್ದಾರೆ.ಅನಿಲ್ ತಿವಾರಿ ಅವರನ್ನು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಘಟಕದ ಹೊಸ ಅಧ್ಯಕ್ಷರನ್ನಾಗಿ ನೇಮಿಸಿದೆ.
ಅದೇ ರೀತಿ ಮಹಾರಾಷ್ಟ್ರದಲ್ಲಿ ಹಿರಿಯ ನಾಯಕ ರವೀಂದ್ರ ಚವ್ಹಾನ್ ಅವರು ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. .ಇನ್ನು ಉತ್ತರಾಖಂಡದಲ್ಲಿ ರಾಜ್ಯಸಭಾ ಸದಸ್ಯ ಎಂ.ಪಿ.ಮಹೇಂದ್ರ ಭಟ್ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಮರು ಆಯ್ಕೆ ಮಾಡಲಾಗಿದೆ.
ಬಿಜೆಪಿ ರಾಜ್ಯಾಧ್ಯಕ್ಷರನ್ನು ಮರು ಆಯ್ಕೆ ಮಾಡಿದ್ದು ಉತ್ತರಾಖಂಡ ರಾಜ್ಯದಲ್ಲಿ ಇದೇ ಮೊದಲು. ಮದನ್ ಕೌಶಿಕ್ ಅವರಿಂದ ತೆರವಾಗಿದ್ದ ಸ್ಥಾನಕ್ಕೆ ಭಟ್ ಅವರು 2022ರಲ್ಲಿ ಆಯ್ಕೆಯಾಗಿದ್ದರು.ಸದ್ಯದಲ್ಲೇ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆ:
ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಬಹುತೇಕ ಮುಕ್ತಾಯ ಹಂತಕ್ಕೆ ಬಂದು ತಲುಪಿದ್ದು, ಇದು ಪೂರ್ಣಗೊಂಡ ಬಳಿಕ ಪಕ್ಷದ ರಾಷ್ಟ್ರಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಬಹುಶಃ ಜುಲೈ 15ರ ವೇಳೆಗೆ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆ ನಡೆಯಬಹುದು ಎನ್ನಲಾಗಿದೆ.