ಸಾರಾಂಶ
ನವದೆಹಲಿ: ಜಾಗತಿಕ ಕಂಪನಿಗಳಲ್ಲಿ ಭಾರತೀಯ ಮೂಲದ ಸಿಇಒಗಳ ಪ್ರಭಾವ ಹೆಚ್ಚುತ್ತಿರುವ ಹೊತ್ತಿನಲ್ಲೇ, ಅಮೆರಿಕ ಮೂಲದ ಕ್ವಾಂಟಂ ಸ್ಕೇಪ್ ಕಂಪನಿಯ ಮಾಜಿ ಸಿಇಒ ಜಗದೀಪ್ ಸಿಂಗ್ ವಾರ್ಷಿಕ 17500 ಕೋಟಿ ರು. ವೇತನ ಪಡೆಯುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ. ಅಂದರೆ ಅವರ ಒಂದು ದಿನದ ವೇತನ ಭರ್ಜರಿ 48 ಕೋಟಿ ರುಪಾಯಿಗಳು.
ನಿಜ. ವಿದ್ಯುತ್ ಚಾಲಿತ ವಾಹನ(ಇವಿ)ಗಳಲ್ಲಿ ಬಳಸಲಾಗುವ ಲಿಥಿಯಂ ಬ್ಯಾಟರಿ ತಯಾರಕ ಕಂಪನಿಯಾಗಿರುವ ಕ್ವಾಂಟಂ ಸ್ಕೇಪ್ ಅನ್ನು 2010ರಲ್ಲಿ ಜಗದೀಪ್ ಸಿಂಗ್ ಸ್ಥಾಪಿಸಿದ್ದರು. 2021ರಲ್ಲಿ ಈ ಕಂಪನಿ ಷೇರುಮಾರುಕಟ್ಟೆ ಪ್ರವೇಶ ಮಾಡಿತ್ತು. 2022ರಲ್ಲಿ ನಡೆದ ಕಂಪನಿಯ ಆಡಳಿತ ಮಂಡಳಿ ಸಭೆಯಲ್ಲಿ ಭವಿಷ್ಯದಲ್ಲಿ ಕಂಪನಿ ಸಾಧಿಸಬೇಕಾದ ಬೃಹತ್ ಗುರಿಯನ್ನು ಪ್ರಸ್ತಾಪಿಸಲಾಗಿತ್ತು. ಮೇಲ್ನೋಟಕ್ಕೆ ತೀರಾ ಕಷ್ಟ ಎನ್ನಿಸುವ ಈ ಗುರಿ ಮಟ್ಟಿದರೆ ಕಂಪನಿಯ ಸಿಇಒ ಆಗಿದ್ದ ಸಿಂಗ್‌ಗೆ 2.3 ಕೋಟಿ ಶತಕೋಟಿ ರು. ಮೌಲ್ಯದ ಸ್ಟಾಕ್ ಆಪ್ಷನ್ ನೀಡಲು ನಿರ್ಧರಿಸಲಾಗಿತ್ತು. ಅಂದರೆ ಸುಮಾರು 17500 ಕೋಟಿ ರು. ಮೌಲ್ಯದ ಷೇರುಗಳನ್ನು ನೀಡಲು ಆಡಳಿತ ಮಂಡಳಿ ಒಪ್ಪಿತ್ತು.
ಮುಂದಿನ ಒಂದು ವರ್ಷದಲ್ಲಿ ಕ್ವಾಂಟಂ ಸ್ಕೇಪ್ ನಿಗದಿತ ಗುರಿ ಕಾರಣ, ಕಂಪನಿ ಅವರಿಗೆ 17500 ಕೋಟಿ ರು.ಮೌಲ್ಯದ ಷೇರುಗಳನ್ನು ಸಾಧನೆ ಆಧರಿತ ಪ್ರೋತ್ಸಾಹಕವಾಗಿ ನೀಡಿದೆ. ಈ ಮೂಲಕ ಒಂದೇ ವರ್ಷದಲ್ಲಿ ಸಿಂಗ್ ಅವರ ವೇತನ 17500 ಕೋಟಿ ರು. ದಾಟಿದ್ದು, ಅವರು ವಿಶ್ವದಲ್ಲೇ ಅತ್ಯಂತ ಹೆಚ್ಚು ವೇತನ ಪಡೆದ ಉದ್ಯೋಗಿಯಾಗಿ ಹೊರಹೊಮ್ಮಿದ್ದಾರೆ. ಇದು ವಿಶ್ವದ ಬಹುತೇಕ ಕಂಪನಿಗಳ ಮಾರುಕಟ್ಟೆ ಮೌಲ್ಯಕ್ಕಿಂತಲೂ ಹೆಚ್ಚು ಎಂಬುದು ವಿಶೇಷ.
2024ರ ಫೆಬ್ರುವರಿಯಲ್ಲಿ ಸಿಂಗ್ ಕ್ವಾಂಟಂ ಸ್ಕೇಪ್ ಕಂಪನಿಯ ಸಿಇಒ ಹುದ್ದೆಗೆ ರಾಜೀನಾಮೆ ನೀಡಿ, ಸ್ಟೆಲ್ತ್ ಸ್ಟಾರ್ಟಪ್ ಎಂಬ ಕಂಪನಿಯ ಸಿಇಒ ಆಗಿದ್ದಾರೆ.
ಸದ್ಯ ಕ್ವಾಂಟಂ ಸ್ಕೇಪ್‌ನ ಮಾರುಕಟ್ಟೆ ಮೌಲ್ಯ 45 ಲಕ್ಷ ಕೋಟಿ ರು.ನಷ್ಟಿದೆ.