ಸದನಕ್ಕೆ ನಿತೀಶ್‌ ಭಾಂಗ್‌ ಕುಡಿದು ಬರ್ತಾರೆ - ಮೈಮೇಲೆ ಪ್ರಜ್ಞೆಯೇ ಇರುವುದಿಲ್ಲ : ರಾಬ್ಡಿ

| N/A | Published : Mar 13 2025, 12:45 AM IST / Updated: Mar 13 2025, 04:52 AM IST

ಸದನಕ್ಕೆ ನಿತೀಶ್‌ ಭಾಂಗ್‌ ಕುಡಿದು ಬರ್ತಾರೆ - ಮೈಮೇಲೆ ಪ್ರಜ್ಞೆಯೇ ಇರುವುದಿಲ್ಲ : ರಾಬ್ಡಿ
Share this Article
  • FB
  • TW
  • Linkdin
  • Email

ಸಾರಾಂಶ

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್  ಸದನಕ್ಕೆ ಭಾಂಗ್‌ ಕುಡಿದು ಬರುವ ಅವರಿಗೆ ಮೈಮೇಲೆ ಪ್ರಜ್ಞೆಯೇ ಇರುವುದಿಲ್ಲ’ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕಿಯೂ ಆಗಿರುವ ರಾಬ್ಡಿ ದೇವಿ ಕುಟುಕಿದ್ದಾರೆ.

ಪಟನಾ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹಾಗೂ ಆರ್‌ಜೆಡಿ ನಾಯಕಿ ರಾಬ್ಡಿ ದೇವಿ ನಡುವೆ ವಿಧಾನ ಪರಿಷತ್ತಿನಲ್ಲಿ ತೀವ್ರ ವಾಗ್ವಾದ ನಡೆದಿದೆ. ‘ನಾನು ಬಿಂದಿ ಹಚ್ಚಿಕೊಂಡಿದ್ದನ್ನು ನಿತೀಶ್‌ ಅಣಕಿಸಿದ್ದಾರೆ ಹಾಗೂ ಸದನದಲ್ಲೇ ಅಶ್ಲೀಲ ಸಂಜ್ಞೆ ಮಾಡಿದ್ದಾರೆ. ಏಕೆಂದರೆ ಸದನಕ್ಕೆ ಭಾಂಗ್‌ ಕುಡಿದು ಬರುವ ಅವರಿಗೆ ಮೈಮೇಲೆ ಪ್ರಜ್ಞೆಯೇ ಇರುವುದಿಲ್ಲ’ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕಿಯೂ ಆಗಿರುವ ರಾಬ್ಡಿ ದೇವಿ ಕುಟುಕಿದ್ದಾರೆ.

ಇದೇ ವೇಳೆ, ‘ನಿತೀಶ್ ಕುಮಾರ್ ಮುಖ್ಯಮಂತ್ರಿಯಾಗಿರುವ ಅವಧಿಯಲ್ಲಿ ಬಿಹಾರದಲ್ಲಿ ಯಾವುದೇ ಅಭಿವೃದ್ದಿ ಕಾರ್ಯಗಳು ನಡೆದಿಲ್ಲ’ ಎಂದು ಆರೋಪಿಸಿದ್ದಾರೆ.

ಇದಕ್ಕೆ ಪ್ರತಿಯಾಗಿ ಸಿಎಂ ನಿತೀಶ್ ‘ಆರ್‌ಜೆಡಿ ಅಧಿಕಾರದಲ್ಲಿದ್ದಾಗ ಮಹಿಳೆಯರಿಗಾಗಿ ಏನನ್ನೂ ಮಾಡಿಲ್ಲ. ನಾನು 2005ರಲ್ಲಿ ಅಧಿಕಾರಕ್ಕೆ ಬರುವವರೆಗೆ ಮಹಿಳೆಯರಿಗೆ ಸರಿಯಾದ ಬಟ್ಟೆಯೂ ಇರಲಿಲ್ಲ. ಲಾಲು ಯಾದವ್ ತಾವು ಅಧಿಕಾರದಿಂದ ಇಳಿಯುವ ವೇಳೆ ತಮ್ಮ ಪತ್ನಿಯನ್ನೇ (ರಾಬ್ಡಿ ದೇವಿ) ಮುಖ್ಯಮಂತ್ರಿ ಮಾಡಿದರು’ ಎಂದು ಆರೋಪಿಸಿದ್ದಾರೆ.

ಇದಕ್ಕೆ ರಾಬ್ಡಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದು, ‘ಹಾಗಾದರೆ 2005ಕ್ಕಿಂತ ಮುನ್ನ ನಿತೀಶ್ ಕುಮಾರ್ ಕುಟುಂಬದ ಮಹಿಳೆಯರು ಬೆತ್ತಲೆಯಾಗಿ ತಿರುಗಾಡುತ್ತಿದ್ದರಾ?’ ಎಂದು ಪ್ರಶ್ನಿಸಿದ್ದಾರೆ.

ಬಿಜೆಪಿ ಗೆದ್ರೆ ಮುಸ್ಲಿಂ ಶಾಸಕರ ಹೊರಗೆಸೆವೆ: ಸುವೇಂದು ಅಧಿಕಾರಿ

ಕೋಲ್ಕತಾ: ‘ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಗೆದ್ದರೆ ಮುಸ್ಲಿಂ ಶಾಸಕರನ್ನು ಹೊರಗೆಸೆಯುತ್ತೇವೆ’ ಎಂದು ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಇದಕ್ಕೆ ಮಮತಾ ಬ್ಯಾನರ್ಜಿ ಕಿಡಿಕಾರಿದ್ದು. ‘ಬಿಜೆಪಿ ನಕಲಿ ಹಿಂದು ಧರ್ಮವನ್ನು ಅಮದು ಮಾಡಿಕೊಳ್ಳುತ್ತಿದೆ. ಬಿಜೆಪಿಯ ಹಿಂದುವಾದವನ್ನು ಋಷಿಗಳೂ ಒಪ್ಪಲ್ಲ:’ ಎಂದಿದ್ದಾರೆ.

ಕೋಲಾಹಲ ಎಬ್ಬಿಸಿದ್ದಕ್ಕಾಗಿ ವಿಧಾನಸಭೆಯಿಂದ ಸಸ್ಪೆಂಡ್‌ ಆದ ಬಳಿಕ ಸೋಮವಾರ ಸುದ್ದಿಗಾರರ ಜತೆ ಮಾತನಾಡಿದ ಸುವೇಂದು,‘ಸ್ಪೀಕರ್‌ ಬಿಮನ್ ಬ್ಯಾನರ್ಜಿ ಮತ್ತು ಸಿಎಂ ಮಮತಾ ಬ್ಯಾನರ್ಜಿಯವರನ್ನು ನಾವು ಮುಂದಿನ ಸಲ ಸೋಲಿಸುತ್ತವೆ. ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಟಿಎಂಸಿಯ ಮುಸ್ಲಿಂ ಶಾಸಕರನ್ನು ಹೊರಗೆಸೆಯುತ್ತೇವೆ. 10 ತಿಂಗಳಲ್ಲಿ ವಿಧಾನಸಭೆಯಿಂದ ಹೊರ ಹಾಕುತ್ತೇವೆ’ ಎಂದರು.,ಇದಕ್ಕೆ ಆಕ್ಷೇಪಿಸಿದ ಸಿಎಂ ಮಮತಾ ಬ್ಯಾನರ್ಜಿ, ‘ಬಿಜೆಪಿ ಅಮದು ಮಾಡಿಕೊಂಡ ಹಿಂದು ಧರ್ಮವನ್ನು ವೇದಗಳು, ಋಷಿಗಳೂ ಒಪ್ಪುವುದಿಲ್ಲ. ನಾಗರಿಕರಾಗಿ ಮುಸ್ಲಿಂ ಹಕ್ಕುಗಳನ್ನು ಹೇಗೆ ನಿರಾಕರಿಸುತ್ತೀರಿ? ನೀವು ನಕಲಿ ಹಿಂದೂ ಧರ್ಮವನ್ನು ಅಮದು ಮಾಡಿಕೊಳ್ಳುತ್ತಿದ್ದೀರಿ’ ಎಂದರು.

ಹರ್ಯಾಣ ಮೇಯರ್ ಚುನಾವಣೆ: ಬಿಜೆಪಿ ಕ್ಲೀನ್ ಸ್ವೀಪ್, ಕಾಂಗ್ರೆಸ್‌ಗೆ ಮುಖಭಂಗ

ಚಂಡೀಗಢ: ಹರ್ಯಾಣ ಮಹಾನಗರ ಪಾಲಿಕೆಗಳ ಮೇಯರ್ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯ ಗಳಿಸಿದೆ. 10 ಮೇಯರ್ ಸ್ಥಾನಗಳಲ್ಲಿ 9 ಸ್ಥಾನಗಳನ್ನು ಬಿಜೆಪಿ ಗೆದ್ದಿದ್ದು, 1 ಸ್ಥಾನ ಸ್ವತಂತ್ರ ಅಭ್ಯರ್ಥಿಯ ಪಾಲಾಗಿದೆ.ಗುರುಗ್ರಾಮ, ಹಿಸಾರ್, ಕರ್ನಾಲ್, ರೋಹ್ಟಕ್, ಫರಿದಾಬಾದ್, ಯಮುನಾನಗರ, ಪಾಣಿಪತ್, ಅಂಬಾಲ ಮತ್ತು ಸೋನಿಪತ್‌ಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದರೆ, ಮಾನೇಸರ್ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿ ಡಾ. ಇಂದ್ರಜಿತ್ ಯಾದವ್ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಿದ್ದಾರೆ. ಕಾಂಗ್ರೆಸ್‌ನ ಸೋಲಿನ ಸರಣಿ ಮುಂದುವರಿದಿದೆ.

ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಬಿಜೆಪಿ ಗೆಲುವಿನ ಹಿನ್ನೆಲೆ ಮಾತನಾಡಿದ್ದು, ‘ಜನರು ತ್ರಿಬಲ್ ಎಂಜಿನ್ ಸರ್ಕಾರಕ್ಕೆ ಅನುಮೋದನೆಯ ಮುದ್ರೆ ಹಾಕಿದ್ದಾರೆ. ನಾನು ಅವರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ತಿಳಿಸುತ್ತೇನೆ. ಸ್ಥಳೀಯ ಆಡಳಿತ ಮತ್ತು ರಾಜ್ಯ ಸರ್ಕಾರ ಪ್ರಧಾನಿ ಮೋದಿಯವರ ವಿಕಸಿತ ಭಾರತ ಗುರಿಯನ್ನು ಈಡೇರಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಲಿವೆ’ ಎಂದಿದ್ದಾರೆ.

ಸಿಎಂ ರೇವಂತ್‌ ರೆಡ್ಡಿ ಟ್ರೋಲ್‌: 2 ಮಹಿಳಾ ಪತ್ರಕರ್ತರ ಬಂಧನ

ಹೈದರಾಬಾದ್‌: ತೆಲಂಗಾಣದ ಮುಖ್ಯಮಂತ್ರಿ ಎ.ರೇವಂತ್‌ ರೆಡ್ಡಿ ಅವರನ್ನು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್‌ ಮಾಡಿದ್ದಕ್ಕಾಗಿ ಇಬ್ಬರು ಪತ್ರಕರ್ತೆಯರನ್ನು ಹೈದರಾಬಾದ್‌ ಪೊಲೀಸರು ಬಂಧಿಸಿದ್ದಾರೆ.‘ನ್ಯೂಸ್‌ ಪಲ್ಸ್‌ ಬ್ರೇಕ್‌’ ಎಂಬ ಆನ್ಲೈನ್‌ ಚಾನೆಲ್‌ನ ಎಂಡಿ ಪಿ. ರೇವತಿ ಮತ್ತು ವರದಿಗಾರ್ತಿ ಬಿ. ಸಂಧ್ಯಾ ಅವರು ಬಂಧಿತರು. ಇವರು ತಮ್ಮ ಚಾನೆಲ್‌ನಲ್ಲಿ ಸಿಎಂ ರೇವಂತ್‌ ರೆಡ್ಡಿ ಅವರಿಗೆ ಅವಮಾನವಾಗುವಂತಹ ಸಂದರ್ಶನವೊಂದನ್ನು ಪೋಸ್ಟ್‌ ಮಾಡಿ ಅದನ್ನು ವೈರಲ್‌ ಮಾಡಿದ್ದಾರೆ ಎಂದು ಕಾಂಗ್ರೆಸ್‌ ದೂರು ನೀಡಿತ್ತು. ಇದರ ಆಧಾರದ ಮೇಲೆ ಪೊಲೀಸರು ಐಟಿ ಕಾಯ್ದೆ ಮತ್ತು ಬಿಎನ್‌ಎಸ್‌ ಅಡಿಯಲ್ಲಿ ಪ್ರಕರಣ ದಾಖಲಿಸಿ ಬುಧವಾರ ಮುಂಜಾನೆ ಬಂಧಿಸಿದ್ದಾರೆ. ಇವರ ಬಂಧನವನ್ನು ಬಿಆರ್‌ಎಸ್‌ ನಾಯಕ ಕೆ.ಟಿ.ರಾಮರಾವ್‌ ವಿರೋಧಿಸಿದ್ದಾರೆ.

ತೆಲಂಗಾಣ ಆರ್ಥಿಕ ದುಃಸ್ಥಿತಿಗೆ ಕೆಸಿಆರ್ ಕಾರಣ: ರೇವಂತ್‌

ಹೈದರಾಬಾದ್‌: ತೆಲಂಗಾಣ ಆರ್ಥಿಕ ದುಃಸ್ಥಿತಿಗೆ ಗ್ಯಾರಂಟಿ ಸ್ಕೀಂಗಳು ಕಾರಣ ಎಂದು 2 ದಿನದ ಹಿಂದೆ ಹೇಳಿದ್ದ ಸಿಎಂ ರೇವಂತ ರೆಡ್ಡಿ ಬುಧವಾರ ತಮ್ಮ ನಿಲುವು ಬದಲಿಸಿ ಇದಕ್ಕೆ ಹಿಂದಿನ ಕೆಸಿಆರ್‌ ನೇತೃತ್ವದ ಬಿಆರೆಸ್‌ ಸರ್ಕಾರದ ಆರ್ಥಿಕ ನೀತಿ ಕಾರಣ ಎಂದಿದ್ದಾರೆ. ಸಭೆಯೊಂದರಲ್ಲಿ ಅವರು ಮಾತನಾಡಿ, ‘ನಮ್ಮ ಪರಿಸ್ಥಿತಿ ’ಊಪರ್‌ ಸೆ ಶೇರವಾನಿ- ಅಂದರ್‌ ಸೆ ಪರೇಶಾನಿ’ (ಮೇಲೆ ಶೇರವಾನಿ, ಒಳಗೆ ಸಮಸ್ಯೆ) ಎಂಬಂತಾಗಿದೆ, ಕೆಸಿಆರ್‌ ಆರ್ಥಿಕ ಸ್ಥಿತಿಯನ್ನು ಕ್ಯಾನ್ಸರ್ ರೀತಿ ಬಿಟ್ಟು ಹೋಗಿದ್ದಾರೆ. ಸರ್ಕಾರದ 18 ಸಾವಿರ ಕೋಟಿ ರು. ಮಾಸಿಕ ಆದಾಯದಲ್ಲಿ ಸಾಲ ಹಾಗೂ ವೇತನಕ್ಕೆ 13 ಸಾವಿರ ಕೋಟಿ ರು.ಖರ್ಚಾಗಿ, 30 ಅಭಿವೃದ್ಧಿ ಸ್ಕೀಂಗಳಿಗೆ ಕೇವಲ 5 ಸಾವಿರ ಕೋಟಿ ರು. ಉಳಿಯುತ್ತಿದೆ’ ಎಂದು ಬೇಸರಿಸಿದರು.