ಸಾರಾಂಶ
ನಿತೀಶ್ ಇಲ್ಲದೆಯೇ ದಲಿತ ಮತ್ತು ಇತರೆ ಹಿಂದುಳಿದ ವರ್ಗಗಳ ಸಾಮಾಜಿಕ ನ್ಯಾಯಕ್ಕಾಗಿ ಬಿಹಾರದಲ್ಲಿ ಹೋರಾಟ ನಡೆಸಲಾಗುವುದು ಎಂದು ರಾಹುಲ್ ಗಾಂಧಿ ತಿಳಿಸಿದ್ದಾರೆ.
ಪುರ್ನಿಯಾ: ಬಿಹಾರದಲ್ಲಿ ಮಹಾಗಠಬಂಧನ ಮೈತ್ರಿಕೂಟಕ್ಕೆ ಹಾಗೂ ರಾಷ್ಟ್ರಮಟ್ಟದಲ್ಲಿ ಇಂಡಿಯಾ ಕೂಟಕ್ಕೆ ನಿತೀಶ್ ಕುಮಾರ್ ಅವರ ಅಗತ್ಯತೆಯೇ ಇಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಿಡಿಕಾರಿದ್ದಾರೆ.
ಈ ಮೂಲಕ ಇಂಡಿಯಾ ಕೂಟ ತೊರೆದು ಬಿಜೆಪಿ ಸಂಗ ಮಾಡಿದ ನಿತೀಶ್‌ಗೆ ಮೊದಲ ಬಾರಿ ರಾಹುಲ್ ಚಾಟಿ ಬೀಸಿದ್ದಾರೆ.
ಮಂಗಳವಾರ ಭಾರತ್ ಜೋಡೋ ನ್ಯಾಯ ಯಾತ್ರೆಯಲ್ಲಿ ಮಾತನಾಡಿದ ಅವರು, ‘ಬಿಹಾರದಲ್ಲಿ ಮಹಾಗಠಬಂಧನವು ದಲಿತರು ಮತ್ತು ಇತರೆ ಹಿಂದುಳಿದ ವರ್ಗದವರಿಗೆ ಸಾಮಾಜಿಕ ನ್ಯಾಯ ದೊರಕಿಸಲು ಹೋರಾಟ ನಡೆಸಲಿದೆ.
ಈ ಪ್ರಕ್ರಿಯೆಯಲ್ಲಿ ನಮಗೆ ನಿತೀಶ್‌ಕುಮಾರ್ ಅವರ ಅಗತ್ಯತೆಯೇ ಇಲ್ಲ. ಆರ್‌ಜೆಡಿ ಮತ್ತು ಇತರ ಅಂಗಪಕ್ಷಗಳೊಂದಿಗೆ ಒಟ್ಟುಗೂಡಿ ಕಾಂಗ್ರೆಸ್ ಹೋರಾಡಲಿದೆ’ ಎಂದರು.
ನಿತೀಶ್ ಕುಮಾರ್ ಅವರು ಭಾನುವಾರವಷ್ಟೇ ಕಾಂಗ್ರೆಸ್ ನೇತೃತ್ವದ ಇಂಡಿಯಾ ಕೂಟವನ್ನು ತ್ಯಜಿಸಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಸೇರಿದ್ದರು.