ರಾಹುಲ್‌ ಗಾಂಧಿ ದ್ವಿಪೌರತ್ವ: ಡಿ.19ಕ್ಕೆ ಕೇಂದ್ರದ ನಿಲುವು ಪ್ರಕಟ

| Published : Nov 27 2024, 01:00 AM IST

ಸಾರಾಂಶ

‘ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ದ್ವಿಪೌರತ್ವವನ್ನು ಹೊಂದಿದ್ದಾರೆ ಎಂದು ಆರೋಪಿಸಿರುವ ಅರ್ಜಿಯನ್ನು ಪರಿಶೀಲಿಸಲಾಗುತ್ತಿದೆ.

ಪ್ರಯಾಗರಾಜ್: ‘ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ದ್ವಿಪೌರತ್ವವನ್ನು ಹೊಂದಿದ್ದಾರೆ ಎಂದು ಆರೋಪಿಸಿರುವ ಅರ್ಜಿಯನ್ನು ಪರಿಶೀಲಿಸಲಾಗುತ್ತಿದೆ. ಡಿ.19ಕ್ಕೆ ಉತ್ತರ ನೀಡಲಿದ್ದೇವೆ’ ಎಂದು ಕೇಂದ್ರ ಸರ್ಕಾರ ಅಲಹಾಬಾದ್ ಹೈಕೋರ್ಟ್‌ಗೆ ಮಂಗಳವಾರ ತಿಳಿಸಿದೆ. ಪ್ರಕರಣದ ಮುಂದಿನ ವಿಚಾರಣೆ ಡಿ.19 ರಂದು ನಡೆಯಲಿದೆ.ಕರ್ನಾಟಕ ಮೂಲದ ವಕೀಲ ಮತ್ತು ಬಿಜೆಪಿ ನಾಯಕ ವಿಘ್ನೇಶ್ ಶಿಶಿರ್ ಎಂಬುವರು ಹೈಕೋರ್ಟ್‌ ಮೊರೆ ಹೋಗಿದ್ದು, ‘ರಾಹುಲ್‌ ಭಾರತ ಹಾಗೂ ಬ್ರಿಟನ್‌ ಪೌರತ್ವ ಹೊಂದಿದ್ದಾರೆ. ಹೀಗಾಗಿ ಅವರ ಭಾರತದ ಪೌರತ್ವ ರದ್ದು ಮಾಡಬೇಕು. ಈ ಬಗ್ಗೆ ಸಿಬಿಐ ತನಿಖೆ ನಡೆಸಬೇಕು’ ಎಂದು ಕೋರಿದ್ದಾರೆ.

ಅಲ್ಲದೆ, ತಮ್ಮ ಅರ್ಜಿಗೆ ಪೂರಕವಾಗಿ ಈ ಹಿಂದೊಮ್ಮೆ ರಾಹುಲ್‌ ಪೌರತ್ವದ ಬಗ್ಗೆ ಪ್ರಶ್ನೆ ಎತ್ತಿದ್ದ ವಿಎಸ್ಎಸ್ ಶರ್ಮಾ ಎಂಬುವವರು ಬ್ರಿಟನ್‌ ಸರ್ಕಾರದಿಂದ ಪಡೆದ ಇಮೇಲ್‌ಗಳನ್ನು ವಿಘ್ನೇಶ್‌ ಉಲ್ಲೇಖಿಸಿದ್ದಾರೆ. ಈ ಬಗ್ಗೆ ಹೈಕೋರ್ಟು, ಕೇಂದ್ರ ಸರ್ಕಾರದಿಂದ ಪ್ರತಿಕ್ರಿಯೆ ಬಯಸಿತ್ತು.

ಇದಕ್ಕೆ ಕೇಂದ್ರ ಗೃಹ ಸಚಿವಾಲಯ ಉತ್ತರ ನೀಡಿದ್ದು, ‘ಅರ್ಜಿದಾರರ ಮನವಿಯನ್ನು ಸಚಿವಾಲಯ ಸ್ವೀಕರಿಸಿದೆ. ಇದಕ್ಕೆ ಉತ್ತರ ಸಿದ್ಧಪಡಿಸುವ ಪ್ರಕ್ರಿಯೆ ಜಾರಿಯಲ್ಲಿದೆ. ಈ ವಿಷಯವನ್ನು ಡ.19ಕ್ಕೆ ಪಟ್ಟಿ ಮಾಡಿ. ಇದರ ಫಲಿತಾಂಶವನ್ನು ನ್ಯಾಯಾಲಯಕ್ಕೆ ತಿಳಿಸಲಾಗುವುದು’ ಎಂದಿದೆ. ಇದಕ್ಕೆ ಒಪ್ಪಿದ ಕೋರ್ಟು ಡಿ.19ಕ್ಕೆ ವಿಚಾರಣೆಗೆ ಸಮ್ಮತಿಸಿದೆ.