ಸಾರಾಂಶ
ನವದೆಹಲಿ: ಭಾರತದಲ್ಲಿ ಡ್ರೋನ್ ಉತ್ಪಾದನೆ ಬಲಪಡಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರಕ್ಕೆ ಪಾಠ ಮಾಡುವ ವೇಳೆ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಭಾರತದಿಂದ ನಿಷೇಧಕ್ಕೆ ಒಳಗಾಗಿರುವ ಚೀನಿ ಡ್ರೋನ್ ಅನ್ನು ಕೈಯಲ್ಲಿ ಹಿಡಿದುಕೊಂಡಿದ್ದು ಭಾರೀ ವಿವಾದಕ್ಕೆ ಕಾರಣವಾಗಿದೆ.
ಇತ್ತೀಚೆಗೆ ಎಕ್ಸ್‌ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದ ರಾಹುಲ್ ಅದರಲ್ಲಿ, ‘ಡ್ರೋನ್ ಬರೀ ತಂತ್ರಜ್ಞಾನವಲ್ಲ. ಅದು ಬಲವಾದ ಕೈಗಾರಿಕಾ ವ್ಯವಸ್ಥೆಯಿಂದ ಉತ್ಪಾದಿಸಲ್ಪಟ್ಟ ಉಪಕರಣವಾಗಿದೆ. ಇದನ್ನು ಅರ್ಥೈಸಿಕೊಳ್ಳುವಲ್ಲಿ ಪ್ರಧಾನಿ ನರೇಂದ್ರ ಮೋದಿ ಸೋತಿದ್ದಾರೆ. ಅವರು ಎಐ ಬಗ್ಗೆ ಟೆಲಿಪ್ರಾಂಪ್ಟರ್ ನೋಡಿ ಭಾಷಣ ಮಾಡುತ್ತಿದ್ದರೆ, ಪ್ರತಿಸ್ಪರ್ಧಿಗಳೆಲ್ಲಾ ಅದರಲ್ಲಿ ನಿಪುಣರಾಗುತ್ತಿದ್ದಾರೆ. ಭಾರತಕ್ಕೆ ಬರಿ ಬಾಯಿ ಮಾತಲ್ಲ. ಬಲವಾದ ಉತ್ಪಾದನಾ ಆಧಾರ ಬೇಕು. ಜೊತೆಗೆ ಭಾರತೀಯ ಡ್ರೋನ್‌ನಲ್ಲಿ ಬಳಸಲಾಗುವ ಯಾವುದೇ ಭಾಗವನ್ನು ಭಾರತ ಉತ್ಪಾದಿಸುತ್ತಿಲ್ಲ’ ಎಂದು ಆರೋಪಿಸಿದ್ದರು.
ಜೊತೆಗೆ ಇಂಥದ್ದೊಂದು ಪಾಠ ಮಾಡುವ ವೇಳೆ ಅವರು ಚೀನಾದ ಡಿಜಿಐ ಕಂಪನಿ ನಿರ್ಮಿತ ಡ್ರೋನ್ ಪ್ರದರ್ಶಿಸಿದ್ದರು. ಆದರೆ ಇದು ಭಾರತ ಸರ್ಕಾರದಿಂದ ನಿಷೇಧಕ್ಕೆ ಒಳಗಾಗಿರುವ ಡ್ರೋನ್. ಅದನ್ನು ತೋರಿಸಿ ಭಾರತ ಸರ್ಕಾರಕ್ಕೆ ರಾಹುಲ್ ಸಲಹೆ ನೀಡಿದ್ದಾರೆ ಎಂದು ಜಾಲತಾಣಗಳಲ್ಲಿ ಭಾರೀ ಟೀಕೆ ವ್ಯಕ್ತವಾಗಿದೆ.
ಈ ನಡುವೆ ರಾಹುಲ್ ಚೀನಿ ಡ್ರೋನ್ ಪ್ರದರ್ಶನ ಮಾಡಿದ್ದನ್ನು ಭಾರತೀಯ ಡ್ರೋನ್ ಒಕ್ಕೂಟದ (ಡಿಎಫ್‌ಐ) ಅಧ್ಯಕ್ಷ ಸ್ಮಿತ್ ಶಾ ಖಂಡಿಸಿದ್ದಾರೆ. ಈ ಕುರಿತು ರಾಹುಲ್‌ಗೆ ಎಕ್ಸ್‌ನಲ್ಲೇ ತಿರುಗೇಟು ನೀಡಿರುವ ಅವರು, ‘ಭಾರತದಲ್ಲಿ 400ಕ್ಕೂ ಅಧಿಕ ಡ್ರೋನ್ ಉತ್ಪಾದಕ ಕಂಪನಿಗಳಿದ್ದು, ಅವುಗಳಲ್ಲಿ 40-50 ಕಂಪನಿಗಳು ಡ್ರೋನ್‌ಗಳ ಭಾಗಗಳನ್ನು ಉತ್ಪಾದಿಸುತ್ತಿವೆ. ಹೀಗಿರುವಾಗ ಯಾರೋ ಒಬ್ಬರು ಚೀನಾ ಡ್ರೋನ್ ಹಿಡಿದು ಬಂದು, ಅದರ ಭಾಗಗಳು ಭಾರತದಲ್ಲಿ ಉತ್ಪಾದನೆಯಾಗಿಲ್ಲ ಎನ್ನುತ್ತಾರೆ’ ಎಂದಿದ್ದಾರೆ.
ಇನ್ಫೋಸಿಸ್‌ನ ಮಾಜಿ ಮುಖ್ಯ ಹಣಕಾಸು ಅಧಿಕಾರಿ ಮೋಹನದಾಸ್ ಪೈ ಪ್ರತಿಕ್ರಿಯಿಸಿ, ‘ದೇಶದ ವರ್ಚಸ್ಸನ್ನು ಕುಗ್ಗಿಸುವಂತಹ ಹೇಳಿಕೆಗಳನ್ನು ನೀಡಕೂಡದು. ಇಂದು ಜಾಗತಿಕವಾಗಿ ಭಾರತವು 5 ನೇ ಅತಿದೊಡ್ಡ ಕೈಗಾರಿಕಾ ಉತ್ಪಾದನಾ ರಾಷ್ಟ್ರವಾಗಿದೆ’ ಎಂದು ಹರಿಹಾಯ್ದಿದ್ದಾರೆ. 2022ರಿಂದ ಚೀನಾದ ಡಿಜಿಐ ಕಂಪನಿ ತಯಾರಿಸಿದ ಡ್ರೋನ್‌ಗಳನ್ನು ಭಾರತದಲ್ಲಿ ನಿಷೇಧಿಸಲಾಗಿದೆ.
ಭಾರತಕ್ಕೆ ಚೀನಾ ಶತ್ರುವೇ ಅಲ್ಲ: ರಾಹುಲ್ ಅತ್ಯಾಪ್ತ ಪಿತ್ರೋಡಾ
ನವದೆಹಲಿ: ಆಗ್ಗಿಂದಾಗ್ಗೆ ಪಕ್ಷಕ್ಕೆ ಮುಜುಗರ ತರುವ ಹೇಳಿಕೆ ನೀಡಿ ಸುದ್ದಿಯಲ್ಲಿರುವ, ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅತ್ಯಾಪ್ತ, ಕಾಂಗ್ರೆಸ್‌ನ ಹಿರಿಯ ನಾಯಕ ಸ್ಯಾಮ್ ಪಿತ್ರೋಡಾ ಮತ್ತೆ ಅದೇ ಕೆಲಸ ಮಾಡಿದ್ದಾರೆ. ಈ ಬಾರಿ ಅವರು, ‘ಚೀನಾ ನಮ್ಮ ಶತ್ರುವಲ್ಲ, ಚೀನಾ ವಿಚಾರವನ್ನು ಅಗತ್ಯಕ್ಕಿಂತ ದೊಡ್ಡದಾಗಿ ಬಿಂಬಿಸಲಾಗಿದೆ. ನಾವು ಚೀನಾವನ್ನು ಶತ್ರುವಾಗಿ ನೋಡುವುದನ್ನು ನಿಲ್ಲಿಸಬೇಕು’ ಎಂದು ವಿವಾದಿತ ಹೇಳಿಕೆ ನೀಡಿದ್ದಾರೆ.
ಪಿತ್ರೋಡಾ ಹೇಳಿಕೆ ಬಗ್ಗೆ ಕಿಡಿಕಾರಿರುವ ಬಿಜೆಪಿ, ‘ಕಾಂಗ್ರೆಸ್ ಪಕ್ಷಕ್ಕಿರುವ ಚೀನಾ ಮೇಲಿನ ಅತಿಯಾದ ಮಮಕಾರ ಮತ್ತೊಮ್ಮೆ ಬಹಿರಂಗವಾಗಿದೆ. ಇದೆಲ್ಲ ಕಾಂಗ್ರೆಸ್ ಮತ್ತು ಕಮ್ಯುನಿಸ್ಟ್ ಚೀನಾದ ನಡುವೆ ಈ ಹಿಂದಿನ ರಹಸ್ಯ ಒಪ್ಪಂದದ ಫಲ’ ಎಂದು ಕಿಡಿಕಾರಿದೆ. ಇನ್ನೊಂದೆಡೆ, ಇದು ಅವರ ವೈಯಕ್ತಿಕ ಹೇಳಿಕೆ. ಅದು ಪಕ್ಷದ ಅಭಿಪ್ರಾಯವಲ್ಲ ಎಂದು ತನ್ನ ನಾಯಕನ ಹೇಳಿಕೆಯಿಂದ ಕಾಂಗ್ರೆಸ್ ದೂರ ಸರಿದಿದೆ.ಸ್ಯಾಮ್ ಹೇಳಿದ್ದೇನು?:
ಸಂದರ್ಶನವೊಂದರ ವೇಳೆ, ಚೀನಾದಿಂದ ಎದುರಾಗಬಹುದಾದ ಬೆದರಿಕೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಮೋದಿ ಅವರು ನಿಯಂತ್ರಣ ಮಾಡಬಲ್ಲರೇ ಎಂದು ಸ್ಯಾಮ್ ಪಿತ್ರೋಡಾರನ್ನು ಪ್ರಶ್ನಿಸಲಾಗಿತ್ತು. ಇದಕ್ಕೆ ಉತ್ತರಿಸಿದ ಕಾಂಗ್ರೆಸ್‌ನ ಸಾಗರೋತ್ತರ ವ್ಯವಹಾರಗಳ ವಿಭಾಗದ ಮುಖ್ಯಸ್ಥ ಸ್ಯಾಮ್ ಪಿತ್ರೋಡಾ, ‘ಚೀನಾದಿಂದ ಯಾವ ರೀತಿಯ ಬೆದರಿಕೆ ಇದೆ ಎಂದೇ ನನಗೆ ಅರ್ಥವಾಗುತ್ತಿಲ್ಲ. ಚೀನಾ ವಿಚಾರವನ್ನು ಅಗತ್ಯಕ್ಕಿಂತ ದೊಡ್ಡದಾಗಿ ಬಿಂಬಿಸಲಾಗಿದೆ. ಯಾಕೆಂದರೆ ಶತ್ರುಗಳನ್ನು ಗೊತ್ತು ಮಾಡುವುದು ಅಮೆರಿಕದ ಪ್ರವೃತ್ತಿ. ಎಲ್ಲಾ ದೇಶಗಳು ಮುಖಾಮುಖಿಯಾಗುವ ಬದಲು ಪರಸ್ಪರ ಸಹಕರಿಸುವ ಕಾಲ ಬಂದಿದೆ ಎಂಬುದು ನನ್ನ ಭಾವನೆ. ನಾವು ಪರಸ್ಪರ ಸಂವಹನ, ಸಹಕಾರ, ಸಹಭಾಗಿತ್ವವನ್ನು ಹೆಚ್ಚಿಸಿಕೊಳ್ಳಬೇಕೇ ಹೊರತು ಕಮಾಂಡ್ ಆ್ಯಂಡ್ ಕಂಟ್ರೋಲ್ ಮನಸ್ಥಿತಿಯಡಿ ಕಾರ್ಯ ನಿರ್ವಹಿಸಬಾರದು. ಈ ರೀತಿಯ ನಡೆ ಶತ್ರುಗಳನ್ನು ಸೃಷ್ಟಿಸುತ್ತದೆ. ನಾವು ಈ ಮನಸ್ಥಿತಿ ಬದಲಾಯಿಸಿಕೊಳ್ಳಬೇಕು ಮತ್ತು ಮೊದಲ ದಿನದಿಂದಲೂ ಚೀನಾ ನಮ್ಮ ಶತ್ರು ಎಂಬ ಭಾವನೆಯನ್ನು ಕೈಬಿಡಬೇಕು. ಚೀನಾ ಮಾತ್ರವಲ್ಲ ಇದು ಎಲ್ಲರ ವಿಚಾರಕ್ಕೂ ಅನ್ವಯಿಸುತ್ತದೆ’ ಎಂದು ಹೇಳಿದ್ದಾರೆ.ಬಿಜೆಪಿ ತೀವ್ರ ಆಕ್ರೋಶ:
ಚೀನಾ ಜತೆಗಿನ ಕಾಂಗ್ರೆಸ್ ಪಕ್ಷದ ಒಪ್ಪಂದವನ್ನು ಸ್ಯಾಮ್ ಪಿತ್ರೋಡಾ ಜಗಜ್ಜಾಹೀರು ಮಾಡಿದ್ದಾರೆ. ಸ್ಯಾಮ್ ಪಿತ್ರೋಡಾ ಅವರ ಹೇಳಿಕೆಯು ಭಾರತವೇ ಕಾಲುಕೆರೆದು ಜಗಳಕ್ಕೆ ಹೋಗುತ್ತಿದೆ ಎನ್ನುವ ಭಾವನೆ ಸೃಷ್ಟಿಸುತ್ತಿದೆ. ಈ ರೀತಿಯ ಹೇಳಿಕೆ ಭಾರತದ ಗೌರವ, ರಾಯಭಾರತ್ವ ಮತ್ತು ಸಾರ್ವಭೌಮತೆಗೆ ಬಹುದೊಡ್ಡ ಹೊಡೆತವಾಗಿದೆ ಎಂದು ಬಿಜೆಪಿ ವಕ್ತಾರ ಸುಧಾಂಶು ತ್ರಿವೇದಿ ಆಕ್ರೋಶ ಹೊರಹಾಕಿದರು. ಇದೇ ವೇಳೆ ಅವರು, ಪಿತ್ರೋಡಾ ಹೇಳಿಕೆ ಕುರಿತು ಕಾಂಗ್ರೆಸ್ ವಿವರಣೆ ನೀಡಬೇಕು ಎಂದೂ ಆಗ್ರಸಿದರು.ಇನ್ನು ಬಿಜೆಪಿ ರಾಷ್ಟ್ರೀಯ ವಕ್ತಾರ ತುಹಿನ್ ಸಿನ್ಹಾ ಮಾತನಾಡಿ, ದೇಶದ 40 ಸಾವಿರ ಚದರ ಕಿ.ಮೀ. ಕಿತ್ತುಕೊಂಡಿದ್ದರೂ ಚೀನಾದಿಂದ ನಮಗೆ ಯಾವುದೇ ಬೆದರಿಕೆ ಇಲ್ಲ ಎಂದು ಪಿತ್ರೋಡಾ ಹೇಳುತ್ತಾರೆ. ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಚೀನಾದ ಮೇಲೆ ಮಮಕಾರ ಹೊಂದಿದ್ದಾರೆ. ಐಎಂಇಇಸಿ (ಇಂಡಿಯಾ ಮಿಡಲ್ ಈಸ್ಟ್ ಯುರೋಪ್ ಎಕನಾಮಿಕ್ ಕಾರಿಡಾರ್) ಘೋಷಣೆಗೂ ಒಂದು ದಿನ ಮೊದಲು ಅವರು ಬಿಆರ್‌ಐ (ಬೆಲ್ಟ್ ಆ್ಯಂಡ್ ರೋಡ್ ಯೋಜನೆ)ಗೆ ಪರ ಮಾತನಾಡಿದ್ದರಲ್ಲಿ ವಿಶೇಷವಿಲ್ಲ. ಚೀನಾದ ಕುರಿತ ಕಾಂಗ್ರೆಸ್‌ನ ಅತಿಯಾದ ಮಮಕಾರದ ಸಾರವು 2008ರಲ್ಲಿ ಕಾಂಗ್ರೆಸ್-ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾ ನಡುವೆ ನಡೆದ ನಿಗೂಢ ಒಪ್ಪಂದದಲ್ಲಿ ಅಡಗಿದೆ ಎಂದರು.
ಅದೇ ರೀತಿ ಬಿಜೆಪಿ ಮತ್ತೊಬ್ಬ ವಕ್ತಾರ ಪ್ರದೀಪ್ ಭಂಡಾರಿ ಮಾತನಾಡಿ, ರಾಹುಲ್ ಗಾಂಧಿ ಅವರು ರಿಮೋಟ್ ಕಂಟ್ರೋಲ್ ಜಾರ್ಜ್ ಸೊರೋಸ್ ಮತ್ತು ಚೀನಾದ ಕೈಗೊಂಬೆಯಾಗಿದ್ದಾರೆ. ಅವರು ಇದೀಗ ಚೀನಾ ನಮ್ಮ ವಿರೋಧಿಯಲ್ಲ ಎಂದು ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ ಯಾವತ್ತಿಗೂ ದೇಶಕ್ಕಿಂತ ಚೀನಾ ಮತ್ತು ಪಾಕಿಸ್ತಾನದ ಹಿತಾಸಕ್ತಿಗೆ ಹೆಚ್ಚಿನ ಆಸಕ್ತಿ ತೋರಿಸುವುದು ನೋಡಿ ಅಚ್ಚರಿಯಾಗುತ್ತದೆ ಎಂದು ಆಕ್ರೋಶ ಹೊರಹಾಕಿದರು.
ವೈಯಕ್ತಿಕ ಹೇಳಿಕೆ:ಸ್ಯಾಮ್ ಪಿತ್ರೋಡಾ ಅವರ ಹೇಳಿಕೆಯಿಂದ ಕಾಂಗ್ರೆಸ್ ಪಕ್ಷ ಮಾತ್ರ ಅಂತರ ಕಾಯ್ದುಕೊಂಡಿದೆ. ಪಿತ್ರೋಡಾ ಅವರ ಹೇಳಿಕೆಯು ಪಕ್ಷದ ನಿಲುವನ್ನು ಪ್ರತಿಬಿಂಬಿಸುವುದಿಲ್ಲ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್ ಹೇಳಿದ್ದಾರೆ.