ದೇಶದ ಗಿಗ್ ಕಾರ್ಮಿಕರ ದುಸ್ಥಿತಿ ಬಿಚ್ಚಿಟ್ಟ ರಾಹುಲ್ ಗಾಂಧಿ : ಉಬರ್ ಚಾಲಕನೊಂದಿಗಿನ ಸಂವಾದ

| Published : Aug 20 2024, 12:47 AM IST / Updated: Aug 20 2024, 05:07 AM IST

ಸಾರಾಂಶ

ದೇಶದಲ್ಲಿ ಗಿಗ್ ಕಾರ್ಮಿಕರ ಪರಿಸ್ಥಿತಿ ದುಸ್ತರವಾಗಿದ್ದು, ಉಳಿತಾಯ ಮತ್ತು ಭವಿಷ್ಯದ ಭದ್ರತೆ ಇಲ್ಲದೆ ಬದುಕುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಉಬರ್ ಚಾಲಕನೊಂದಿಗಿನ ಸಂವಾದದ ವಿಡಿಯೋ ಹಂಚಿಕೊಂಡಿರುವ ಅವರು, ಕಾಂಗ್ರೆಸ್  ಸಮಸ್ಯೆಗಳನ್ನು ಪರಿಹರಿಸಲು ಶ್ರಮಿಸುತ್ತದೆ ಎಂದು ಭರವಸೆ ನೀಡಿದ್ದಾರೆ.

ನವದೆಹಲಿ: ‘ದೇಶದಲ್ಲಿ ಗಿಗ್ ಕಾರ್ಮಿಕರ ಪರಿಸ್ಥಿತಿ ದುಸ್ತರವಾಗಿದೆ. ಉಳಿತಾಯವೂ ಇರದೇ, ಭವಿಷ್ಯದ ಭದ್ರತೆಯೂ ಇರದೇ ಬದುಕುತ್ತಿದ್ದಾರೆ’ ಎಂದು ರಾಹುಲ್ ಗಾಂಧಿ ಗಿಗ್‌ ಕಾರ್ಮಿಕರ ಸಂಕಷ್ಟಗಳನ್ನು ತೆರೆದಿಟ್ಟಿದ್ದಾರೆ. ಅಲ್ಲದೇ ಕಾಂಗ್ರೆಸ್‌ ಗಿಗ್ ಕಾರ್ಮಿಕ ವಲಯದ ಸಮಸ್ಯೆ ಬಗ್ಗೆ ಹರಿಸಲು ಶ್ರಮಿಸುತ್ತದೆ ಎಂದಿದ್ದಾರೆ.

ತಾವು ಉಬರ್‌ನಲ್ಲಿ ಪ್ರಯಾಣಿಸುತ್ತಾ, ಕ್ಯಾಬ್ ಚಾಲಕನ ಜೊತೆ ಮಾತುಕತೆ ನಡೆಸುವ 11 ನಿಮಿಷದ ವಿಡಿಯೋವೊಂದನ್ನು ರಾಹುಲ್ ಗಾಂಧಿ ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. ಅದರಲ್ಲಿ ‘ಕಡಿಮೆ ಆದಾಯ ಮತ್ತು ಹಣದುಬ್ಬರ ದೇಶವನ್ನು ಹಾಳು ಮಾಡುತ್ತಿದೆ. ಇದು ಭಾರತದಲ್ಲಿ ಗಿಗ್‌ ಕಾರ್ಮಿಕರ ದುಸ್ಥಿತಿ. ಅವರು ಕೇವಲ ಕೈಯಿಂದ ಬಾಯಿ ಆದಾಯದಲ್ಲಿ ಬದುಕುತ್ತಿದ್ದಾರೆ. ಉಳಿತಾಯವಿಲ್ಲ. ಅವರ ಕುಟುಂಬದ ಭವಿಷ್ಯಕ್ಕೆ ಭದ್ರತೆಯೂ ಇಲ್ಲ. ಇದನ್ನು ಪರಿಹರಿಸಲು ರಾಜ್ಯ ಸರ್ಕಾರ ಮತ್ತು ಕಾಂಗ್ರೆಸ್‌ ನೀತಿಗಳನ್ನು ತರುವ ಮೂಲಕ ನ್ಯಾಯ ಒದಗಿಸುತ್ತದೆ’ ಎಂದು ಬರೆದುಕೊಂಡಿದ್ದಾರೆ.

‘ಕಾಂಗ್ರೆಸ್‌ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ , ಹೊಸ ಕಾನೂನುಗಳನ್ನು ಜಾರಿಗೆ ತಂದು ಅವರ ಸಮಸ್ಯೆಗಳನ್ನು ಬಗ್ಗೆ ಹರಿಸುವ ಕೆಲಸ ಮಾಡಲಿದೆ. ದೇಶದಾದ್ಯಂತ ಇಂಡಿಯಾ ಕೂಟ ಗಿಗ್ ಕಾರ್ಮಿಕರ ಸಂಕಷ್ಟಗಳನ್ನು ಪರಿಹರಿಸಲು ಶ್ರಮಿಸುತ್ತದೆ’ ಎಂದರು. ಕ್ಯಾಬ್‌ ಚಾಲಕನೊಂದಿಗೆ ಕೆಲ ಕಾಲ ಮಾತುಕತೆ ನಡೆಸಿ, ಅವರ ವೈಯುಕ್ತಿಕ ಸಮಸ್ಯೆಗಳ ಬಗ್ಗೆ ಚರ್ಚಿಸಿದ್ದಾರೆ.ಅಲ್ಲದೇ ರಾಹುಲ್ ಇಳಿದು ಹೋಗಬೇಕಾದರೆ ಕ್ಯಾಬ್‌ ಚಾಲಕನ ಮಕ್ಕಳಿಗೆ ಉಡುಗೊರೆಯನ್ನು ನೀಡಿದ್ದಾರೆ.