ಕಾಮಚೇಷ್ಟೆ ಆರೋಪಿ ಕೇರಳ ಶಾಸಕ ಕಾಂಗ್ರೆಸ್ಸಿಂದ ಸಸ್ಪೆಂಡ್‌

| N/A | Published : Aug 26 2025, 01:03 AM IST / Updated: Aug 26 2025, 03:57 AM IST

Congress flag

ಸಾರಾಂಶ

ಲೈಂಗಿಕ ದೌರ್ಜನ್ಯದ ಹಲವಾರು ಆರೋಪಗಳನ್ನು ಎದುರಿಸುತ್ತಿರುವ ಕೇರಳ ಕಾಂಗ್ರೆಸ್ ಶಾಸಕ ರಾಹುಲ್ ಮಮಕೂಟತಿಲ್ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಸೋಮವಾರ ಅಮಾನತು ಮಾಡಲಾಗಿದೆ.

  ಕಣ್ಣೂರು  : ಲೈಂಗಿಕ ದೌರ್ಜನ್ಯದ ಹಲವಾರು ಆರೋಪಗಳನ್ನು ಎದುರಿಸುತ್ತಿರುವ ಕೇರಳ ಕಾಂಗ್ರೆಸ್ ಶಾಸಕ ರಾಹುಲ್ ಮಮಕೂಟತಿಲ್ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಸೋಮವಾರ ಅಮಾನತು ಮಾಡಲಾಗಿದೆ.

ಕೆಪಿಸಿಸಿ ಅಧ್ಯಕ್ಷ ಸನ್ನಿ ಜೋಸೆಫ್ ಈ ವಿಷಯ ಪ್ರಕಟಿಸಿದ್ದಾರೆ. ಆದರೆ ಶಾಸಕ ಸ್ಥಾನಕ್ಕೆ ರಾಹುಲ್ ರಾಜೀನಾಮೆ ನೀಡಬೇಕೆಂಬ ವಿಪಕ್ಷಗಳ ಒತ್ತಾಯವನ್ನು ತಿರಸ್ಕರಿಸಿದ್ದಾರೆ. ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸನ್ನಿ, ‘ತಮ್ಮ ವಿರುದ್ಧ ಅಧಿಕೃತ ದೂರು ಅಥವಾ ಪ್ರಕರಣ ದಾಖಲಾಗುವ ಮೊದಲೇ ಯುವ ಕಾಂಗ್ರೆಸ್‌ನ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ರಾಹುಲ್ ‘ಮಾದರಿ’ ಹಾಕಿಕೊಟ್ಟಿದ್ದಾರೆ.  

ಅವರ ವಿರುದ್ಧದ ಆರೋಪಗಳನ್ನು ಕಾಂಗ್ರೆಸ್ ಗಂಭೀರವಾಗಿ ಪರಿಗಣಿಸಿದೆ. ಆದರೆ ಈ ಬಗ್ಗೆ ಪಕ್ಷಕ್ಕೆ ಯಾವುದೇ ದೂರು ಬಂದಿಲ್ಲ. ರಾಹುಲ್ ಶಾಸಕತ್ವ ತ್ಯಜಿಸಬೇಕು ಎಂಬ ವಿರೋಧ ಪಕ್ಷಗಳ ಬೇಡಿಕೆಯಲ್ಲಿ ಯಾವುದೇ ತರ್ಕವಿಲ್ಲ’ ಎಂದರು. ರಾಹುಲ್ ವಿರುದ್ಧ ನಟಿ ರಿನಿ ಜಾರ್ಜ್‌, ಲೇಖಕಿ ಹನಿ ಭಾಸ್ಕರನ್, ತೃತೀಯಲಿಂಗಿ ಆವಂತಿಕಾ ಮೊದಲಾದವರಿಂದ ಕಾಮಚೇಷ್ಟೆಯ ಆರೋಪ ವ್ಯಕ್ತವಾಗಿದೆ.

ಸುಪ್ರೀಂಗೆ ನ್ಯಾ। ಆರಾಧೆ, ನ್ಯಾ। ಪಂಚೋಲಿ ಹೆಸರು ಶಿಫಾರಸು

ಪಿಟಿಐ ನವದೆಹಲಿಬಾಂಬೆ ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶ ನ್ಯಾ। ಅಲೋಕ್‌ ಆರಾಧೆ ಮತ್ತು ಪಟನಾ ಹೈಕೋರ್ಟ್‌ ಸಿಜೆ ನ್ಯಾ। ವಿಪುಲ್‌ ಪಂಚೋಲಿ ಅವರನ್ನು ಸುಪ್ರೀಂ ಕೋರ್ಟ್‌ ನ್ಯಾಯಾಧೀಶರಾಗಿ ನೇಮಿಸುವಂತೆ ಮುಖ್ಯ ನ್ಯಾ। ಬಿ.ಆರ್‌.ಗವಾಯಿ ನೇತೃತ್ವದ ಕೊಲಿಜಿಯಂ ಶಿಫಾರಸು ಮಾಡಿದೆ.

ಒಂದು ವೇಳೆ ಕೇಂದ್ರ ಸರ್ಕಾರವು ಈ ಶಿಫಾರಸು ಒಪ್ಪಿದಲ್ಲಿ, ನ್ಯಾ। ಪಂಚೋಲಿ ಅವರು 2031ರ ಅಕ್ಟೋಬರ್‌ನಲ್ಲಿ ನ್ಯಾ।ಜೋಯ್‌ಮಲ್ಯಾ ಬಾಗ್ಚಿ ಅವರ ಬಳಿಕ ಮುಖ್ಯ ನ್ಯಾಯಮೂರ್ತಿಗಳಾಗಲಿದ್ದಾರೆ.ಕೊಲಿಜಿಯಂನಲ್ಲಿ ಸಿಜೆಐ ಅವರೊಂದಿಗೆ ನ್ಯಾ। ಸೂರ್ಯಕಾಂತ್‌, ನ್ಯಾ। ವಿಕ್ರಂನಾಥ್‌, ನ್ಯಾ। ಜೆ.ಕೆ.ಮಹೇಶ್ವರಿ ಮತ್ತು ನ್ಯಾ। ಬಿ.ವಿ.ನಾಗರತ್ನ ಅವರು ಇದ್ದಾರೆ.

ಬ್ಯಾಂಕ್‌ನಲ್ಲಿ ಎಐ ಅಳವಡಿಸಿದರೆ ಶೇ.50 ಉದ್ಯೋಗ ಕಡಿತ?

ಮುಂಬೈ: ಕೃತಕಬುದ್ಧಿಮತ್ತೆ ಅಳವಡಿಕೆಯಿಂದ ಉದ್ಯೋಗ ನಷ್ಟದ ಆತಂಕವು ಇದೀಗ ಬ್ಯಾಂಕಿಂಗ್‌ ಕ್ಷೇತ್ರವನ್ನೂ ಆವರಿಸಿಕೊಂಡಿದೆ. ಬ್ಯಾಂಕ್‌ಗಳಲ್ಲಿ ಎಐ ಬಳಕೆ ಆರಂಭವಾದರೆ ಶೇ.50ರಷ್ಟು ಉದ್ಯೋಗಿಗಳು ಕೆಲಸ ಕಳೆದುಕೊಳ್ಳಲಿದ್ದಾರೆ ಎಂದು ಬಿಸಿಜಿ ಸಲಹಾ ಸಂಸ್ಥೆ ಹೇಳಿದೆ.ಪ್ರಸ್ತುತ ಭಾರತೀಯ ಬ್ಯಾಂಕುಗಳ ಉತ್ಪಾದಕತೆ ಕೇವಲ ಶೇ.1ರಷ್ಟಿದೆ ಎಂದಿರುವ ಬಿಸಿಜಿ, ‘ಎಐ ಅಳವಡಿಕೆಯಿಂದ ಈ ಕೊರತೆ ನೀಗಿ ಉತ್ಪಾದಕತೆ ಹೆಚ್ಚಲಿದೆ. ಆದರೆ ಇದರಿಂದ ಶೇ.30ರಿಂದ 50ರಷ್ಟು ಉದ್ಯೋಗಿಗಳು ನೌಕರಿ ಕಳೆದುಕೊಳ್ಳಬಹುದು’ ಎಂದಿದೆ.ಹಲವು ವರ್ಷಗಳಿಂದ ಸಮಸ್ಯೆಯಾಗಿ ಕಾಡುತ್ತಿರುವ ವೆಚ್ಚವನ್ನು ತಗ್ಗಿಸಲು ಹೊಸ ತಂತ್ರಜ್ಞಾನಗಳ ಬಳಕೆ ಆರಂಭಿಸುವುದು ಅಗತ್ಯ ಎಂದು ಬಿಸಿಜಿಯ ಹಿರಿಯ ಪಾಲುದಾರ ರುಚಿನ್‌ ಗೋಯಲ್‌ ಹೇಳಿದ್ದಾರೆ.

ಲಡ್ಕಿ ಬಹಿನ್‌: 26 ಲಕ್ಷ ಅನರ್ಹ ಫಲಾನುಭವಿಗಳು ಪತ್ತೆ 

ಮುಂಬೈ :  ಬಡ ಮಹಿಳೆಯರಿಗಾಗಿ ಮಹಾರಾಷ್ಟ್ರ ಸರ್ಕಾರ ಜಾರಿಗೊಳಿಸಿರುವ ‘ಲಡ್ಕಿ ಬಹಿನ್‌’ 1500 ರು. ಮಾಸಾಶನ ಯೋಜನೆಯ ಲಾಭವನ್ನು 26 ಲಕ್ಷ ಅನರ್ಹ ಫಲಾನುಭವಿಗಳೂ ಪಡೆಯುತ್ತಿರುವುದು ಬೆಳಕಿಗೆ ಬಂದಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಅದಿತಿ ತತ್ಕರೆ ಹೇಳಿದ್ದಾರೆ.

ಅನರ್ಹ ಫಲಾನುಭವಿಗಳ ಮಾಹಿತಿಯನ್ನು ಜಿಲ್ಲಾಡಳಿತಗಳಿಗೆ ಕಳುಹಿಸಿಕೊಟ್ಟಿದ್ದು, ಸಂಬಂಧ ಪಟ್ಟವರಿಗೆ ಖುದ್ದು ಪರಿಶೀಲನೆ ನಡೆಸುವಂತೆ ಸೂಚಿಸಲಾಗಿದೆ. ಸುಳ್ಳು ಮಾಹಿತಿ ನೀಡಿ ಯೋಜನೆಯ ಲಾಭ ಪಡೆದಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆಯೂ ನಿರ್ದೇಶನ ನೀಡಲಾಗಿದೆ ಎಂದು ಸಚಿವೆ ಮಾಹಿತಿ ನೀಡಿದ್ದಾರೆ.ಮಹಾರಾಷ್ಟ್ರ ಸರ್ಕಾರ ಕಳೆದ ಜುಲೈನಲ್ಲಿ 2.5 ಲಕ್ಷಕ್ಕಿಂತಲೂ ಕಡಿಮೆ ವಾರ್ಷಿಕ ಆದಾಯದ ಒಂದೇ ಕುಟುಂಬದ ಇಬ್ಬರು ಮಹಿಳೆಯರಿಗೆ ತಲಾ 1.500 ರು. ಆರ್ಥಿಕ ನೆರವು ನೀಡುವ ಲಡ್ಕಿ ಬಹಿನ್‌ ಯೋಜನೆ ಆರಂಭಿಸಿತ್ತು. ಯೋಜನೆಯಡಿ 2.5 ಕೋಟಿ ಫಲಾನುಭವಿಗಳು ಹೆಸರು ನೋಂದಾಯಿಸಿದ್ದಾರೆ.

ಆದರೆ ಪರಿಶೀಲನೆ ವೇಳೆ ಕೆಲ ಕುಟುಂಬದಲ್ಲಿ ಎರಡಕ್ಕಿಂತ ಹೆಚ್ಚಿನ ಮಹಿಳೆಯರು ಹೆಸರು ನೋಂದಾಯಿಸಿದ್ದರೆ, ಕೆಲ ಪ್ರಕರಣಗಳಲ್ಲಿ ಗಂಡಸರೂ ಯೋಜನೆಯ ಲಾಭ ಪಡೆಯುತ್ತಿರುವುದು ಬೆಳಕಿಗೆ ಬಂದಿದೆ. ಇದು ಪ್ರತಿಪಕ್ಷಗಳಿಂದ ತೀವ್ರ ಆಕ್ರೋಶಕ್ಕೂ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಇದೀಗ ಅನರ್ಹ ಫಲಾನುಭವಿಗಳನ್ನು ಗುರುತಿಸಿ ಕ್ರಮಕ್ಕೆ ಮುಂದಾಗಿದೆ.

ನಾನು ತಾಯಿ ಆಗಲಿದ್ದೇನೆ: ನಟಿ ಪರಿಣೀತಿ ಚೋಪ್ರಾ

ನವದೆಹಲಿ: ಬಾಲಿವುಡ್‌ ನಟಿ ಪರಿಣೀತಿ ಚೋಪ್ರಾ ಮತ್ತು ಆಪ್‌ ಸಂಸದ ರಾಘವ್‌ ಚಡ್ಢಾ ತಾವು ಪೋಷಕರಾಗುತ್ತಿರುವುದಾಗಿ ಸೋಮವಾರ ಪ್ರಕಟಿಸಿದ್ದಾರೆ.ಇನ್‌ಸ್ಟಾ ಗ್ರಾಂ ಖಾತೆಯಲ್ಲಿ ಕೇಕ್‌ ಚಿತ್ರ ಹಂಚಿಕೊಂಡಿರುವ ದಂಪತಿ, ‘1+1=3’ ಎಂದು ಬರೆದುಕೊಂಡಿದ್ದಾರೆ. ‘ನಮ್ಮ ಪುಟ್ಟ ಜಗತ್ತು ಬರುವಿಕೆಯ ಹಾದಿಯಲ್ಲಿದೆ. ನಿಮ್ಮ ಅಪಾರ ಹಾರೈಕೆಯಿರಲಿ’ ಎಂದು ಸಂತಸ ಹಂಚಿಕೊಂಡಿದ್ದಾರೆ.

2023ರಲ್ಲಿ ಉದಯಪುರದಲ್ಲಿ ಚೋಪ್ರಾ, ಚಡ್ಢಾ ವಿವಾಹವಾಗಿದ್ದರು. ರೆಂಜಿಲ್ ಡಿ ಸಿಲ್ವಾ ನಿರ್ದೇಶನದ ನೆಟ್‌ಫ್ಲಿಕ್ಸ್‌ನ ಶೋವೊಂದರಲ್ಲಿ ಪರಿಣೀತಿ ಈಗ ಸಕ್ರಿಯಗಿದ್ದಾರೆ. ಚಡ್ಢಾ ಆಮ್‌ ಆದ್ಮಿ ಪಕ್ಷದ ರಾಜ್ಯಸಭೆ ಸದಸ್ಯರಾಗಿದ್ದಾರೆ.

ಹನು​ಮಂತ ವಿಶ್ವ​ದ ಪ್ರಥ​ಮ ಗಗ​ನ​ಯಾ​ನಿ: ಠಾಕೂ​ರ್‌

ಉನಾ (ಹಿ​ಮಾ​ಚ​ಲ​): ಬಿಜೆ​ಪಿ ಸಂಸದ ಅನು​ರಾಗ್‌ ಠಾಕೂರ್‌ ಇಲ್ಲಿನ ಶಾಲಾ ಮಕ್ಕಳನ್ನು ಉದ್ದೇ​ಶಿಸಿ ಮಾತ​ನಾಡಿ, ‘ಹ​ನು​ಮಂತ ವಿಶ್ವದ ಮೊದಲ ಗಗ​ನ​ಯಾ​ನಿ’ ಎಂದಿ​ದ್ದಾರೆ. ಮಕ್ಕಳಿಗೆ ಠಾಕೂರ್‌ ‘ಮೊದಲ ಗಗ​ನ​ಯಾನಿ ಯಾರು’ ಎಂದು ಕೇಳಿ​ದಾಗ ಅವ​ರು ‘ಯೂರಿ ಗಗ​ರಿನ್‌’ ಎಂದಿದ್ದಾರೆ. ಆದರೆ ಬಳಿ​ಕ ಠಾಕೂರ್‌ ‘ಹ​ನು​ಮಂತ ಮೊದಲ ಗಗ​ನ​ಯಾನಿ. ಭಾರ​ತದ ಸಾಂಸ್ಕೃ​ತಿಕ ಪರಂಪ​ರೆ​ ಯ​ನ್ನು ಮಕ್ಕಳು ಅರಿ​ಯ​ಲಿ’ ಎಂದಿ​ದ್ದಾರೆ. ಇದಕ್ಕೆ ಟ್ವೀಟ​ರ್‌​ನ ಅವರ ಖಾತೆ​ಯ​ಲ್ಲಿ​ನ ಅವರ ಹೇಳಿ​ಕೆಗೆ ಟಿಪ್ಪಣಿ ಬರೆ​ಯ​ಲಾಗಿದ್ದು, ‘ಹ​ನು​ಮಂತ ಎಂದು ಬರೆ​ದರೆ ಅಂಕ ಕಳೆ​ದು​ಕೊ​ಳ್ಳು​ತ್ತೀ​ರಿ’ ಎಂದು ಎಚ್ಚ​ರಿ​ಸ​ಲಾ​ಗಿ​ದೆ.

Read more Articles on