ಲೋಕಸಭೆ ವಿರೋಧ ಪಕ್ಷ ನಾಯಕ ರಾಹುಲ್‌ ಗಾಂಧಿ, ವಿದೇಶಾಂಗ ವ್ಯವಹಾರಗಳ ಸಚಿವ ಜೈಶಂಕರ್‌ ಭೇಟಿ

| Published : Aug 06 2024, 12:37 AM IST / Updated: Aug 06 2024, 06:10 AM IST

Rahul Gandhi

ಸಾರಾಂಶ

ಲೋಕಸಭೆ ವಿರೋಧ ಪಕ್ಷ ನಾಯಕ ರಾಹುಲ್‌ ಗಾಂಧಿ ಸೋಮವಾರ ಸಂಸತ್‌ ಭವನದಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌. ಜೈಶಂಕರ್‌ ಅವರನ್ನು ಭೇಟಿ ಮಾಡಿ ಬಾಂಗ್ಲಾದೇಶದ ಬೆಳವಣಿಗೆ ಬಗ್ಗೆ ಚರ್ಚೆಸಿದರು.

ನವದೆಹಲಿ: ಲೋಕಸಭೆ ವಿರೋಧ ಪಕ್ಷ ನಾಯಕ ರಾಹುಲ್‌ ಗಾಂಧಿ ಸೋಮವಾರ ಸಂಸತ್‌ ಭವನದಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌. ಜೈಶಂಕರ್‌ ಅವರನ್ನು ಭೇಟಿ ಮಾಡಿ ಬಾಂಗ್ಲಾದೇಶದ ಬೆಳವಣಿಗೆ ಬಗ್ಗೆ ಚರ್ಚೆಸಿದರು. 

ಈ ಭೇಟಿ ವೇಳೆ ಬಾಂಗ್ಲಾದಲ್ಲಿನ ವಿದ್ಯಾರ್ಥಿ ಪ್ರತಿಭಟನೆ, ಸೇನಾ ಸರ್ಕಾರ ರಚನೆ, ಪ್ರಧಾನಿ ಶೇಖ್‌ ಹಸೀನಾ ರಾಜೀನಾಮೆ, ಬಾಂಗ್ಲಾದಲ್ಲಿನ ಭಾರತೀಯರ ಸುರಕ್ಷತೆ ಮೊದಲಾದ ವಿಷಯಗಳ ಕುರಿತು ಉಭಯ ನಾಯಕರು ಚರ್ಚೆ ನಡೆಸಿದರು ಎನ್ನಲಾಗಿದೆ.

ಢಾಕಾ ಏರ್ಪೋರ್ಟ್‌ ಕಾರ್‍ಯಾಚರಣೆ ಸ್ಥಗಿತ

ಢಾಕಾ: ಬಾಂಗ್ಲಾದೇಶದ ಪ್ರಮುಖ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿರುವ ಢಾಕಾದ ಹಜ಼್ರತ್‌ ಶಾಹ್‌ಜಲಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ತನ್ನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದೆ. ಹಿಂಸಾಚಾರ ತೀವ್ರಗೊಂಡು ಪ್ರತಿಭಟನಾಕಾರರು ವಿಮಾನ ನಿಲ್ದಾಣಕ್ಕೆ ಮುತ್ತಿಗೆ ಹಾಕಿದ್ದಾರೆ. ಹೀಗಾಗಿ ವಿಮಾನಗಳ ಹಾರಾಟಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ನಿಲ್ದಾಣದ ಕಾರ್ಯನಿರ್ವಹಕ ನಿರ್ದೇಶಕ ಕ್ಯಾಪ್ಟನ್‌ ಕಮ್ರುಲ್‌ ಇಸ್ಲಾಂ ಹೇಳಿದ್ದಾರೆ.

ಢಾಕಾಗೆ ಏರ್‌ ಇಂಡಿಯಾ ವಿಮಾನ ಹಾರಾಟ ರದ್ದು

ನವದೆಹಲಿ: ಬಾಂಗ್ಲಾ ಹಿಂಸಾಚಾರ ಹಿನ್ನೆಲೆ ಏರ್‌ಇಂಡಿಯಾ ವಿಮಾನಯಾನ ಸಂಸ್ಥೆ ಸೋಮವಾರ ಢಾಕಾಗೆ ತನ್ನ ವಿಮಾನ ಹಾರಾಟವನ್ನು ರದ್ದುಗೊಳಿಸಿದೆ. ದೆಹಲಿಯಿಂದ ಢಾಕಾಗೆ ಪ್ರತಿದಿನ ಎರಡು ಏರ್‌ಇಂಡಿಯಾ ವಿಮಾನಗಳು ಹಾರಾಡುತ್ತಿದ್ದವು. ಬಾಂಗ್ಲಾದ ಉದ್ವಿಗ್ನ ಪರಿಸ್ಥಿತಿ ಕಾರಣ ಈ ಸೇವೆಯನ್ನು ರದ್ದುಗೊಳಿಸಿದೆ. ಇದೇ ವೇಳೆ ಇಂಡಿಗೋ ಕೂಡಾ ಢಾಕಾದ ತನ್ನ ವಿಮಾನಗಳ ಸಂಚಾರ ರದ್ದುಪಡಿಸಿತು.

ಬಾಂಗ್ಲಾದಲ್ಲಿನ ಎಲ್‌ಐಸಿ ಕಚೇರಿ 2 ದಿನ ಬಂದ್‌

ನವದೆಹಲಿ: ಬಾಂಗ್ಲಾದಲ್ಲಿ ಹಿಂಸಾಚಾರ ಜೋರಾದ ಬೆನ್ನಲ್ಲೇ ಭಾರತೀಯ ಜೀವ ವಿಮಾ ಕಂಪನಿ (ಎಲ್‌ಐಸಿ) ಢಾಕಾದಲ್ಲಿರುವ ತನ್ನ ಶಾಖೆಯನ್ನು 2 ದಿನ ಬಂದ್‌ ಮಾಡಲು ನಿರ್ಧರಿಸಿದೆ. ದೇಶಾದ್ಯಂತ ಸಾಮಾಜಿಕ ಆರ್ಥಿಕ ಸಂಘರ್ಷ ಜೋರಾಗಿ ಆ.7ರವರೆಗೆ ದೇಶಾದ್ಯಂತ ನಿಷೇಧಾಜ್ಞೆ ಜಾರಿಯಾದ ಕಾರಣ ಮುಂಜಾಗ್ರತಾ ಕ್ರಮವಾಗಿ ಆ.5ರಿಂದ ಆ.7ರವರೆಗೆ ಮುಚ್ಚಿರಲಿದೆ ಎಂದು ಹೇಳಿಕೆ ಬಿಡುಗಡೆ ಮಾಡಿದೆ.

ಬಾಂಗ್ಲಾ ಗಡಿಯಲ್ಲಿ ಬಿಎಸ್‌ಎಫ್‌ ಹೈ ಅಲರ್ಟ್‌

ನವದೆಹಲಿ: ಬಾಂಗ್ಲಾದೇಶದಲ್ಲಿ ಹಿಂಸಾಚಾರ ತೀವ್ರಗೊಂಡಿರುವ ಪರಿಣಾಮ ಭಾರತೀಯ ಗಡಿ ಭದ್ರತಾ ಪಡೆ ಬಾಂಗ್ಲಾಗೆ ಹೊಂದಿಕೊಂಡಿರುವ ತನ್ನ 4096 ಕಿಲೋಮೀಟರ್‌ ಗಡಿಯಲ್ಲಿಯೂ ಬಿಗಿ ಬಂದೋಬಸ್ತ್‌ ಕೈಗೊಂಡಿದೆ. ಜೊತೆಗೆ ರಜೆಯಲ್ಲಿರುವ ಸಿಬ್ಬಂದಿಗಳನ್ನು ಮರಳಿ ಸೇವೆಗೆ ಬರುವಂತೆ ಸೂಚನೆ ನೀಡಿದೆ. ಬಿಎಸ್‌ಎಫ್‌ನ ಹಂಗಾಮಿ ಡಿಜಿ ದಲ್ಜಿತ್‌ ಸಿಂಗ್‌ ಚೌಧರಿ ಭದ್ರತಾ ಪರಿಶೀಲನೆಗೆಂದು ಈಗಾಗಲೇ ಕೋಲ್ಕತಾಗೆ ಬಂದಿದ್ದಾರೆ. ಪ್ರಸ್ತುತ ಪಶ್ಚಿಮ ಬಂಗಾಳ 2217 ಕಿ.ಮಿ., ತ್ರಿಪುರ 856 ಕಿ.ಮಿ., ಮೇಘಾಲಯ 443 ಕಿ.ಮಿ., ಅಸ್ಸಾಂ 262 ಕಿ.ಮಿ. ಹಾಗೂ ಮಿಜೋರಂ 318 ಕಿ.ಮಿ., ಬಾಂಗ್ಲಾದೇಶದೊಂದಿಗೆ ಗಡಿ ಹೊಂದಿದೆ.

ಕೋಲ್ಕತಾ - ಢಾಕಾ ಮೈತ್ರಿ ಎಕ್ಸ್‌ಪ್ರೆಸ್‌ ರೈಲು ರದ್ದು

ಕೋಲ್ಕತಾ: ಬಾಂಗ್ಲಾದೇಶದಲ್ಲಿ ಹಿಂಸಾಚಾರ ತೀವ್ರಗೊಂಡಿರುವುದರಿಂದ ಕೋಲ್ಕತಾ ಹಾಗೂ ಢಾಕಾ ನಡುವೆ ಸಂಚರಿಸುತ್ತಿದ್ದ ‘ಮೈತ್ರಿ ಎಕ್ಸ್‌ಪ್ರೆಸ್‌’ ರೈಲಿನ ಸೇವೆ ಮಂಗಳವಾರೂ ರದ್ದಾಗಿರಲಿದೆ ಎಂದು ಭಾರತೀಯ ರೈಲ್ವೆ ಹೇಳಿದೆ. ಬಾಂಗ್ಲಾದಲ್ಲಿ ವಿದ್ಯಾರ್ಥಿ ಸಂಘರ್ಷ ಜೋರಾದ ಬೆನ್ನಲ್ಲೇ ಈ ರೈಲು ಜು.19ರಿಂದಲೇ ತನ್ನ ಸಂಚಾರವನ್ನು ನಿಲ್ಲಿಸಿತ್ತು. ಆದರೆ ಬಾಂಗ್ಲಾದಲ್ಲಿನ ಅಧಿಕಾರಿಗಳ ಸೂಚನೆ ಮೇರೆಗೆ ಸಂಚಾರವನ್ನು ರದ್ದುಗೊಳಿಸಲಾಗಿದೆ ಎಂದು ಪೂರ್ವ ರೈಲ್ವೆ ಹೇಳಿದೆ. ಈ ರೈಲು ವಾರಕ್ಕೆ ಎರಡು ಬಾರಿ ಕೋಲ್ಕತಾದಿಂದ ಹೊರಟು ಬಾಂಗ್ಲಾದೇಶದ ರಾಜಧಾನಿ ಢಾಕಾಗೆ ತಲುಪುತ್ತಿತ್ತು. 2008ರಲ್ಲಿ ಲಾಲು ಪ್ರಸಾದ್‌ ಯಾದವ್‌ ಅವರು ರೈಲ್ವೆ ಸಚಿವರಾಗಿದ್ದಾಗ ಉದ್ಘಾಟಿಸಿದ್ದರು.