ಸಾರಾಂಶ
ಇತ್ತೀಚಿನ ನೀಟ್, ನೆಟ್ ಪ್ರವೇಶ ಪರೀಕ್ಷೆಯಲ್ಲಿನ ಅಕ್ರಮಗಳ ಕುರಿತು ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ, ದೇಶದಲ್ಲೀಗ ‘ದುಡ್ಡಿದ್ದರೆ ಪರೀಕ್ಷಾ ವ್ಯವಸ್ಥೆಯನ್ನು ಖರೀದಿಸಬಹುದು’ ಎಂಬ ವ್ಯವಸ್ಥೆ ಇದೆ ಎಂದು ಕಿಡಿಕಾರಿದ್ದಾರೆ.
ನವದೆಹಲಿ: ಇತ್ತೀಚಿನ ನೀಟ್, ನೆಟ್ ಪ್ರವೇಶ ಪರೀಕ್ಷೆಯಲ್ಲಿನ ಅಕ್ರಮಗಳ ಕುರಿತು ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ, ದೇಶದಲ್ಲೀಗ ‘ದುಡ್ಡಿದ್ದರೆ ಪರೀಕ್ಷಾ ವ್ಯವಸ್ಥೆಯನ್ನು ಖರೀದಿಸಬಹುದು’ ಎಂಬ ವ್ಯವಸ್ಥೆ ಇದೆ ಎಂದು ಕಿಡಿಕಾರಿದ್ದಾರೆ.
ಸಂಸತ್‌ನಲ್ಲಿ ಪರೀಕ್ಷಾ ಅಕ್ರಮದ ವಿಚಾರ ಪ್ರಸ್ತಾಪಿಸಿದ ರಾಹುಲ್ ಗಾಂಧಿ, ‘ನೀಟ್ ಪರೀಕ್ಷೆ ಮಾತ್ರವಲ್ಲ ದೇಶದ ಹಲವು ಮುಖ್ಯ ಪರೀಕ್ಷೆಗಳ ವ್ಯವಸ್ಥೆಯಲ್ಲಿ ಗಂಭೀರ ಸಮಸ್ಯೆಯಿದೆ. ಆದರೆ ಶಿಕ್ಷಣ ಸಚಿವರು ಮಾತ್ರ, ತಮ್ಮನ್ನು ಹೊರತುಪಡಿಸಿ ಉಳಿದೆಲ್ಲವನ್ನೂ ಸಮಸ್ಯೆಗೆ ದೂಷಿಸುತ್ತಾರೆ. ಇಲ್ಲಿ ಏನಾಗುತ್ತಿದೆ ಎನ್ನುವುದರ ಮೂಲಭೂತ ಅಂಶಗಳನ್ನು ಅವರು ಅರ್ಥ ಮಾಡಿಕೊಳ್ಳುತ್ತಾರೆಯೇ ಎನ್ನುವುದು ತಿಳಿದಿಲ್ಲ. ದೇಶದ ಲಕ್ಷಾಂತರ ವಿದ್ಯಾರ್ಥಿಗಳು, ಪರೀಕ್ಷಾ ವ್ಯವಸ್ಥೆಯಲ್ಲಿ ಏನಾಗುತ್ತಿದೆ. ಯಾರು ಆರೋಪಿಗಳು ಎನ್ನುವುದರ ಬಗ್ಗೆ ಚಿಂತಿಸುತ್ತಿದ್ದಾರೆ. ನೀವು ಶ್ರೀಮಂತರಾಗಿದ್ದರೆ, ನಿಮ್ಮ ಬಳಿ ಹಣವಿದ್ದರೆ ದೇಶದ ಪರೀಕ್ಷಾ ವ್ಯವಸ್ಥೆಯನ್ನು ಖರೀದಿಸಬಹುದು. ಇದೊಂದು ವ್ಯವಸ್ಥಿತ ಸಮಸ್ಯೆ, ಇದನ್ನು ಸರಿ ಪಡಿಸಲು ಯಾವ ಕ್ರಮ ತೆಗೆದುಕೊಳ್ಳುತ್ತೀರಿ?’ ಎಂದು ರಾಹುಲ್ ಪ್ರಶ್ನಿಸಿದರು.ವಿಪಕ್ಷ ನಾಯಕರ ಆರೋಪಕ್ಕೆ ಧರ್ಮೇಂದ್ರ ಪ್ರಧಾನ್ ತಿರುಗೇಟು ನೀಡಿದ್ದು‘ಕಳೆದ ಏಳು ವರ್ಷಗಳಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವುದರ ಬಗ್ಗೆ ಯಾವುದೇ ಆಧಾರವಿಲ್ಲ. ಎನ್‌ಟಿಎ ಸ್ಥಾಪನೆ ಬಳಿಕ 240 ಪರೀಕ್ಷೆ ನಡೆಸಲಾಗಿದೆ.4.5 ಕೋಟಿಗೂ ಹೆಚ್ಚು ವಿದ್ಯಾರ್ಥಿಗಳು ವಿವಿಧ ಪರೀಕ್ಷೆ ಬರೆದಿದ್ದಾರೆ. ಇದೆಲ್ಲದರ ಹೊರತಾಗಿಯೂ ಇಡೀ ಪರೀಕ್ಷಾ ವ್ಯವಸ್ಥೆಯೇ ಕಳಪೆ ಎಂದು ಟೀಕಿಸಲಾಗುತ್ತಿದೆ’ ಎಂದು ವಿಪಕ್ಷ ನಾಯಕರ ವಿರುದ್ಧ ಕಿಡಿಕಾರಿದರು.