ಮಾಜಿ ಪ್ರಧಾನಿ ಸಿಂಗ್‌ ಅಗಲಿಕೆ ಶೋಕದ ನಡುವೆಯೂ ರಾಹುಲ್‌ ವಿದೇಶಕ್ಕೆ : ಬಿಜೆಪಿ ಆಕ್ರೋಶ

| Published : Dec 31 2024, 04:47 AM IST

Manmohan Singh Funeral Rahul Gandhi

ಸಾರಾಂಶ

ಇಡೀ ದೇಶ ಇತ್ತೀಚೆಗೆ ನಿಧನರಾದ ಮಾಜಿ ಪ್ರಧಾನಿ ಮಹಮೋಹನ ಸಿಂಗ್‌ ಅವರ ಅಗಲಿಕೆಯ ಶೋಕದಲ್ಲಿ ಮುಳುಗಿದ್ದರೆ, ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಮಾತ್ರ ಹೊಸ ವರ್ಷದ ಆಚರಣೆಗೆ ವಿಯೆಟ್ನಾಂಗೆ ತೆರಳಿದ್ದಾರೆ ಎಂದು ಬಿಜೆಪಿ ಟೀಕಿಸಿದೆ.

ನವದೆಹಲಿ : ಇಡೀ ದೇಶ ಇತ್ತೀಚೆಗೆ ನಿಧನರಾದ ಮಾಜಿ ಪ್ರಧಾನಿ ಮಹಮೋಹನ ಸಿಂಗ್‌ ಅವರ ಅಗಲಿಕೆಯ ಶೋಕದಲ್ಲಿ ಮುಳುಗಿದ್ದರೆ, ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಮಾತ್ರ ಹೊಸ ವರ್ಷದ ಆಚರಣೆಗೆ ವಿಯೆಟ್ನಾಂಗೆ ತೆರಳಿದ್ದಾರೆ ಎಂದು ಬಿಜೆಪಿ ಟೀಕಿಸಿದೆ.

ಸಿಂಗ್‌ ಸಾವಿನಲ್ಲೂ ರಾಹುಲ್‌ ರಾಜಕೀಯ ಮಾಡಿದ್ದರು ಎಂದು ಆರೋಪಿಸಿರುವ ಬಿಜೆಪಿಯ ಐಟಿ ಸೆಲ್‌ ಮುಖ್ಯಸ್ಥ ಅಮಿತ್‌ ಮಾಳವೀಯ, ‘7 ದಿನಗಳ ಶೋಕಾಚರಣೆ ವೇಳೆಯೂ ಹೊಸ ವರ್ಷಾಚರಣೆಗೆ ರಾಹುಲ್‌ ವಿಯೆಟ್ನಾಂಗೆ ತೆರಳಿದ್ದು ಸರಿಯೆ? ಕಾಂಗ್ರೆಸ್‌ ಹಾಗೂ ಗಾಂಧಿ ಪರಿವಾರವು ಸಿಖ್ಖರನ್ನು ದ್ವೇಷಿಸುತ್ತದೆ. ಇಂದಿರಾ ಗಾಂಧಿ ತಮ್ಮ ಅವಧಿಯಲ್ಲಿ ಅವರ ಪವಿತ್ರ ಸ್ಥಳವಾದ ದರ್ಬಾರ್‌ ಸಾಹಿಬ್‌ ಅನ್ನು ಅಪವಿತ್ರಗೊಳಿಸಿದ್ದನ್ನು ಮರೆಯಬೇಡಿ’ ಎಂದಿದ್ದಾರೆ.

ಇದಕ್ಕೆ ತಿರುಗೇಟು ನೀಡಿರುವ ಕಾಂಗ್ರೆಸ್‌ ಮುಖಂಡ ಮಾಣಿಕ್ಯ ಟ್ಯಾಗೋರ್‌, ‘ರಾಹುಲ್‌ ವಿದೇಶಕ್ಕೆ ವೈಯಕ್ತಿಕ ಪ್ರವಾಸ ಕೈಗೊಂಡಿದ್ದಾರೆ. ಇದು ಬಿಜೆಪಿಗೇಕೆ ಸಮಸ್ಯೆಯುಂಟು ಮಾಡುತ್ತಿದೆ’ ಎಂದಿದ್ದಾರೆ.

ಈ ಮೊದಲು, ಅಂತ್ಯಸಂಸ್ಕಾರದ ಬಳಿಕ ಸಿಂಗ್‌ ಅವರ ಅಸ್ಥಿಯನ್ನು ಸಂಗ್ರಹಿಸಲೂ ಗಾಂಧಿ ಪರಿವಾರ ಬರಲಿಲ್ಲ ಎಂದು ಬಿಜೆಪಿ ಆಪಾದಿಸಿತ್ತು.

ಡಿ.27ರ ಸಮಾರಂಭ ರದ್ದು ಮಾಡಿದ್ದ ಮೋದಿ

ನವದೆಹಲಿ: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ನಿಧನದ 7 ದಿನಗಳ ಶೋಕಾಚರಣೆಯ ಸಮಯದಲ್ಲಿ ವಿಯೆಟ್ನಾಂಗೆ ರಾಹುಲ್ ಗಾಂಧಿ ಅವರ ‘ಖಾಸಗಿ ಭೇಟಿ’ ಪ್ರಧಾನಿ ನರೇಂದ್ರ ಮೋದಿ ಅವರ ನಡೆಗೆ ವ್ಯತಿರಿಕ್ತವಾಗಿದೆ. ಏಕೆಂದರೆ ಅವರು ಮಾಜಿ ಪ್ರಧಾನಿಗೆ ಸಂಬಂಧಿಸಿದಂತೆ ಶುಕ್ರವಾರದ ಪ್ರಮುಖ ಕಾರ್ಯಕ್ರಮವೊಂದನ್ನು ರದ್ದುಗೊಳಿಸಿದ್ದರು.

ಸಿಂಗ್‌ ನಿಧನದ ದಿನವಾದ ಡಿ.26ರ ಮರುದಿನ ಡಿ. 27 ರಂದು, ಮಧ್ಯಾಹ್ನ 12:30 ಕ್ಕೆ ಪ್ರಧಾನಿ ಮೋದಿ ಅವರು ಸ್ವಾಮಿತ್ವ ಯೋಜನೆ 50 ಲಕ್ಷಕ್ಕೂ ಹೆಚ್ಚು ಜನರಿಗೆ ಆಸ್ತಿ ಕಾರ್ಡ್‌ ವಿತರಿಸಬೇಕಿತ್ತು. ಈ ಕಾರ್ಯಕ್ರಮಕ್ಕೆ ದೇಶದ ಅನೇಕ ಭಾಗಗಳ ಜನರು ಭಾಗವಹಿಸುವವರಿದ್ದರು. ಆದರೆ ಮನಮೋಹನ್ ಸಿಂಗ್ ಅವರಿಗೆ ಗೌರವ ಸೂಚಕವಾಗಿ ಪ್ರಧಾನಿಯವರ ಕಾರ್ಯಕ್ರಮ ರದ್ದು ಮಾಡಲಾಗಿತ್ತು ಎಂದು ಮಾಧ್ಯಮವೊಂದು ವರದಿ ಮಾಡಿದೆ.