ಸಾರಾಂಶ
ಅಮೃತ್‌ಸರ/ಶಂಭು ಗಡಿ: ಕೃಷಿ ಉತ್ಪನ್ನಗಳ ಬೆಂಬಲ ಬೆಲೆಗೆ ಕಾಯ್ದೆ ರಚನೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ಪಂಜಾಬ್ ಮತ್ತು ಹರ್ಯಾಣದ 200 ರೈತ ಸಂಘಟನೆಗಳು ಕರೆಕೊಟ್ಟಿರುವ ‘ದೆಹಲಿ ಚಲೋ’ ಹೋರಾಟ ಸತತ 3ನೇ ದಿನವಾದ ಗುರುವಾರವೂ ಮುಂದುವರೆಯಿತು.
ತಮ್ಮನ್ನು ದೆಹಲಿಗೆ ಹೋಗದಂತೆ ಪೊಲೀಸರು ತಡೆದಿರುವ ಹಿನ್ನೆಲೆಯಲ್ಲಿ ಆಕ್ರೋಶಗೊಂಡಿರುವ ಸಾವಿರಾರು ರೈತರು ಗುರುವಾರ ಪಂಜಾಬ್‌ನ ವಿವಿಧ ರೈಲು ನಿಲ್ದಾಣಗಳಿಗೆ ನುಗ್ಗಿ ರೈಲು ಹಳಿಗಳ ಮೇಲೆ ಕುಳಿತು ಮಧ್ಯಾಹ್ನ 12 ರಿಂದ ಸಂಜೆ 4 ಗಂಟೆವರೆಗೆ ‘ರೈಲು ರೋಕೋ’ ಪ್ರತಿಭಟನೆ ನಡೆಸಿದರು. ಇದರಿಂದ ರೈಲು ಸೇವೆಗೆ ಅಡ್ಡಿ ಆಯಿತು.
ಇನ್ನು ಸರ್ಕಾರದ ವಿರುದ್ಧ ದೆಹಲಿಗೆ ಹೊರಟಿದ್ದ ತಮ್ಮನ್ನು ಪೊಲೀಸರು ತಡೆಹಿಡಿದ ಹಿನ್ನೆಲೆಯಲ್ಲಿ ಪಂಜಾಬ್ ಮತ್ತು ಹರ್ಯಾಣದ ಶಂಭು ಗಡಿ ಹಾಗೂ ಖನೌರಿ ಗಡಿಯಲ್ಲೇ ಉಳಿದುಕೊಂಡಿದ್ದಾರೆ.
ಸರ್ಕಾರ-ರೈತ ನಾಯಕರ ಸಂಧಾನ ಸಭೆ ಫಲಶ್ರುತಿ ಆಧರಿಸಿ ಮುಂದಿನ ನಡೆ ಕೈಗೊಳ್ಳುವುದಾಗಿ ಹೇಳಿದ್ದಾರೆ.
ಮೊಬೈಲ್ ಇಂಟರ್ನೆಟ್ ಬಂದ್: ಇನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಅಹಿತಕರ ಘಟನೆಗೆ ಕರೆ ಕೊಡುವ ಅಥವಾ ಸುದ್ದಿ ಹಬ್ಬಿಸುವುದನ್ನು ತಡೆಯಲು ಪಂಜಾಬ್ ಮತ್ತು ಹರ್ಯಾಣ ಸರ್ಕಾರಗಳು ಫೆ.16ರ ರಾತ್ರಿಯವರೆಗೆ ರಾಜ್ಯದ ಹಲವು ಭಾಗಗಳಲ್ಲಿ ಮೊಬೈಲ್ ಇಂಟರ್‌ನೆಟ್ ಅನ್ನು ಸ್ಥಗಿತಗೊಳಿಸಿವೆ.