ದಿಬ್ಬಣದ ತಂಡಕ್ಕಾಗಿ ಹೌರಾದಿಂದ- ಅಸ್ಸಾಂನ ಗುವಾಹಟಿಗೆ ಹೊರಟಿದ್ದ ರೈಲನ್ನೇ ತಡೆಹಿಡಿದ ರೈಲ್ವೆ!

| Published : Nov 18 2024, 12:04 AM IST / Updated: Nov 18 2024, 04:57 AM IST

ಸಾರಾಂಶ

ವರ ಸರಿಯಾಗಿ ಮದುವೆ ಸ್ಥಳಕ್ಕೆ ತಲುಪುವುದನ್ನು ಖಾತರಿ ಪಡಿಸುವ ಸಲುವಾಗಿ ರೈಲ್ವೆ ಸಿಬ್ಬಂದಿ, ಹೌರಾದಿಂದ- ಅಸ್ಸಾಂನ ಗುವಾಹಟಿಗೆ ಹೊರಟಿದ್ದ ರೈಲೊಂದನ್ನು ಕೆಲ ಕಾಲ ತಡೆಹಿಡಿದ ಘಟನೆ ಪಶ್ಚಿಮ ಬಂಗಾಳದ ಹೌರಾದಲ್ಲಿ ನಡೆದಿದೆ.

ಕೋಲ್ಕತಾ: ವರ ಸರಿಯಾಗಿ ಮದುವೆ ಸ್ಥಳಕ್ಕೆ ತಲುಪುವುದನ್ನು ಖಾತರಿ ಪಡಿಸುವ ಸಲುವಾಗಿ ರೈಲ್ವೆ ಸಿಬ್ಬಂದಿ, ಹೌರಾದಿಂದ- ಅಸ್ಸಾಂನ ಗುವಾಹಟಿಗೆ ಹೊರಟಿದ್ದ ರೈಲೊಂದನ್ನು ಕೆಲ ಕಾಲ ತಡೆಹಿಡಿದ ಘಟನೆ ಪಶ್ಚಿಮ ಬಂಗಾಳದ ಹೌರಾದಲ್ಲಿ ನಡೆದಿದೆ.

ಶುಕ್ರವಾರ ವರನ ಕಡೆಯ 34 ಜನರ ದಿಬ್ಬಣದ ತಂಡವೊಂದು ಮುಂಬೈ- ಹೌರಾ ಗೀತಾಂಜಲಿ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಪ್ರಯಾಣಿಸುತ್ತಿತ್ತು. ರೈಲು ಮಧ್ಯಾಹ್ನ 1.05ಕ್ಕೆ ಹೌರಾ ತಲುಪಬೇಕಿತ್ತು. ಬಳಿಕ ಈ ತಂಡ ಸಂಜೆ 4 ಗಂಟೆಗೆ ಹೌರಾ- ಗುವಾಹಟಿ ಸರಾಯ್‌ಘಾಟ್‌ ಎಕ್ಸ್‌ಪ್ರೆಸ್ ರೈಲು ಏರಬೇಕಿತ್ತು.

ಆದರೆ ಗೀತಾಂಜಲಿ ಎಕ್ಸಪ್ರೆಸ್‌ ರೈಲಿನ ಪ್ರಯಾಣ ತಡವಾದ ಕಾರಣ, ದಿಬ್ಬಣದ ತಂಡಕ್ಕೆ ಸಂಜೆಯ 4 ಗಂಟೆಯ ರೈಲು ಮಿಸ್‌ ಆಗುವ ಆತಂಕ ಕಾಡಿತ್ತು. ಹೀಗಾಗಿ ದಿಬ್ಬಣದ ತಂಡದಲ್ಲಿದ್ದ ಚಂದ್ರಶೇಖರ್‌ ವಾಘ್‌ ಎನ್ನುವವರು ಟ್ವೀಟರ್‌ ಮೂಲಕ ರೈಲ್ವೆಯ ನೆರವು ಕೋರಿದ್ದರು.

ಇದಕ್ಕೆ ತಕ್ಷಣವೇ ಸ್ಪಂದಿಸಿದ ರೈಲ್ವೆಯ ಹಿರಿಯ ಅಧಿಕಾರಿಗಳು ದಿಬ್ಬಣದ ತಂಡಕ್ಕೆ ಅಗತ್ಯ ನೆರವು ನೀಡುವಂತೆ ಹೌರಾ ಡಿಆರ್‌ಎಂಗೆ ಸೂಚಿಸಿದ್ದರು. ಕೂಡಲೇ ಕಾರ್ಯಪ್ರವೃತ್ತರಾದ ಅಧಿಕಾರಿಗಳು ಗೀತಾಜಲಿ ರೈಲಿನ ತ್ವರಿತ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದ್ದೂ ಅಲ್ಲದೆ, ಹೌರಾ- ಗುವಾಹಟಿ ರೈಲನ್ನು ಕೆಲ ಕಾಲ ತಡೆಹಿಡಿದರು.

ಹೀಗಾಗಿ ಗೀತಾಂಜಲಿ ಎಕ್ಸ್‌ಪ್ರೆಸ್‌ ರೈಲು ಸಂಜೆ 4.08ಕ್ಕೆ ಹೌರಾ ತಲುಪಿದ ಕೂಡಲೇ ಕೂಡಲೇ ಬ್ಯಾಟರಿ ಚಾಲಿತ ವಾಹನಗಳ ಮೂಲಕ ಎಲ್ಲಾ ದಿಬ್ಬಣದ ತಂಡ 34 ಜನರನ್ನು ಫ್ಲ್ಯಾಟ್‌ಫಾರಂ 24ರಿಂದ ಗುವಾಹಟಿ ರೈಲು ನಿಂತಿದ್ದ ಫ್ಲ್ಯಾಟ್‌ಫಾರಂ 9 ಕರೆದೊಯ್ಯಲಾಯಿತು. ಬಳಿಕ ದಿಬ್ಬಣವನ್ನು ಹೊತ್ತ ರೈಲು ಕೆಲವೇ ಕ್ಷಣಗಳ ವಿಳಂಬದ ಬಳಿಕ ಗುವಾಹಟಿಯತ್ತ ಪ್ರಯಾಣ ಬೆಳೆಸಿತು. ವರ ಸಮಯಕ್ಕೆ ಸರಿಯಾಗಿ ಮದುವೆ ಮಂಟಪ ತಲುಪಲು ರೈಲ್ವೆ ಸಿಬ್ಬಂದಿ ನೀಡಿದ ನೆರವು ಫಲಕೊಟ್ಟಿತು.

ಈ ನಡುವೆ ಸಕಾಲಕ್ಕೆ ಭಾನುವಾರ ಮದುವೆ ನಡೆದಿದ್ದು, ವರನ ಕಡೆಯವರು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ಗೆ ಧನ್ಯವಾದ ಸಲ್ಲಿಸಿದ್ದಾರೆ.

ಹಳಿ ಮೇಲೆ ಸಿಮೆಂಟ್‌ ಕಂಬ ಇಟ್ಟು ರೈಲು ಹಳಿ ತಪ್ಪಿಸಲು ಯತ್ನ

ಬರೇಲಿ (ಉ.ಪ್ರ): ದೇಶದಲ್ಲಿ ರೈಲು ಹಳಿ ತಪ್ಪಿಸಿ ದುಷ್ಕೃತ್ಯ ಎಸಗುವ ಯತ್ನಗಳು ಮುಂದುವರೆದಿವೆ. ಉತ್ತರ ಪ್ರದೇಶದ ದಿಬ್ನಾಪುರ ರೈಲ್ವೆ ನಿಲ್ದಾಣದ ಬಳಿ ಹಳಿಗಳ ಮೇಲೆ ಕಬ್ಬಿಣ ತೀರು ಹಾಗೂ ಸಿಮೆಂಟ್‌ ಕಂಬಗಳನ್ನು ಇಟ್ಟು ಕಿಡಿಕೇಡಿಗಳು ಗೂಡ್ಸ್‌ ರೈಲನ್ನು ಹಳಿ ತಪ್ಪಿಸುವ ಯತ್ನ ಮಾಡಿದ್ದಾರೆಪೀಲಿಭಿತ್‌ನಿಂದ ಬರೇಲಿಗೆ ತೆರಳುತ್ತಿದ್ದ ಗೂಡ್ಸ್‌ ರೈಲಿನ ಚಾಲಕ, ಹಳಿ ಮೇಲೆ ಇರುವ ಕಬ್ಬಿಣದ ತೀರು (ಐರನ್ ಗಾರ್ಟರ್‌) ಹಾಗೂ ಸಿಮೆಂಟ್‌ ಕಂಬಗಳನ್ನು ಗಮನಿಸಿದ್ದಾನೆ ಹಾಘೂ ತುರ್ತು ಬ್ರೇಕ್‌ ಹಾಕಿದ್ದಾನೆ. ಇದರಿಂದ ಸಂಭವಿಸಬಹುದಾದ ದೊಡ್ಡ ಅಪಘಾತ ತಪ್ಪಿಸಿದ್ದಾನೆ.

ಈ ಬಗ್ಗೆ ರೈಲ್ವೆ ಅಧಿಕಾರಿಗಳು ಸೂಕ್ತ ತನಿಖೆಗೆ ಆದೇಶಿಸಿದ್ದು, ಹಫೀಜ್‌ಗಂಜ್‌ ಪೊಲೀಸರು ಹಾಗೂ ರೈಲ್ವೆ ಪೊಲೀಸರು ಜಂಟಿಯಾಗಿ ತನಿಖೆ ನಡೆಸಲಿದ್ದಾರೆ ಎಂದಿದ್ದಾರೆ.

ಆರ್ಥಿಕ ನಷ್ಟ: ಬೋಯಿಂಗ್‌ನಿಂದ 400 ನೌಕರರಿಗೆ ಕೊಕ್

ಸಿಯಾಟಲ್: ವಿಮಾನ ತಯಾರಕ ಕಂಪನಿ ಬೋಯಿಂಗ್ ಆರ್ಥಿಕ ನಷ್ಟದ ಕಾರಣಕ್ಕೆ ಸಂಸ್ಥೆಯಲ್ಲಿ ಉದ್ಯೋಗ ಕಡಿತಕ್ಕೆ ಮುಂದಾಗಿದೆ. ತನ್ನ ಕಂಪನಿಯ 400 ನೌಕರರಿಗೆ ಕೆಲಸದಿಂದ ವಜಾಗೊಳಿಸಲಾಗುತ್ತದೆ ಎಂದು ನೋಟಿಸ್‌ ನೀಡಿದೆ.ಈಗಾಗಲೇ ವಜಾಗೊಳಿಸುವಿಕೆ ನೋಟಿಸ್ ಪಡೆದುಕೊಂಡಿರುವ ಉದ್ಯೋಗಿಗಳ ಜನವರಿ ಮಧ್ಯದ ತನಕ ವೇತನ ಪಟ್ಟಿಯಲ್ಲಿ ಉಳಿಯಲಿದ್ದಾರೆ. ಬೋಯಿಂಗ್ ಸಂಸ್ಥೆ ಆರ್ಥಿಕ ಸಮಸ್ಯೆಯ ಜೊತೆಗೆ ನಿಯಂತ್ರಕ ತೊಂದರೆಗಳನ್ನು ಎದುರಿಸುತ್ತಿದ್ದು, ಅದರಿಂದ ಸುಧಾರಿಸಿಕೊಳ್ಳಲು ಸಾವಿರಾರು ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಲು ಮುಂದಾಗಿದೆ. ಕಳೆದ ಅಕ್ಟೋಬರ್‌ನಲ್ಲಿಯೇ ಶೇ.10ರಷ್ಟು ಅಂದರೆ 17 ಸಾವಿರ ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಲಾಗುತ್ತದೆ ಎಂದು ಬೋಯಿಂಗ್ ಘೋಷಿಸಿತ್ತು.