ಬಂಗಾಳ ಕೊಲ್ಲಿಯಲ್ಲಿ ಸಂಭವಿಸಿರುವ ವಾಯುಭಾರ ಕುಸಿತ : ಒಡಿಶಾ, ಬಂಗಾಳದಲ್ಲಿ ಡಾನಾ ಚಂಡಮಾರುತ ಅಬ್ಬರ

| Published : Oct 25 2024, 01:14 AM IST / Updated: Oct 25 2024, 04:47 AM IST

ಸಾರಾಂಶ

ಬಂಗಾಳ ಕೊಲ್ಲಿಯಲ್ಲಿ ಸಂಭವಿಸಿರುವ ವಾಯುಭಾರ ಕುಸಿತದಿಂದಾಗಿ ಸೃಷ್ಟಿಯಾಗಿರುವ ಡಾನಾ ಚಂಡಮಾರುತ ಒಡಿಶಾ ಕರಾವಳಿಯನ್ನು ಸಮೀಪಿಸಿದ್ದು, ಶುಕ್ರವಾರ ನಸುಕಿನಲ್ಲಿ ರಾಜ್ಯಕ್ಕೆ ಅಪ್ಪಳಿಸುವ ನಿರೀಕ್ಷೆಯಿದೆ. ಇದರ ಪರಿಣಾಮವಾಗಿ ಒಡಿಶಾ ಹಾಗೂ ಪಕ್ಕದ ಪಶ್ಚಿಮ ಬಂಗಾಳದಲ್ಲಿ ಗುರುವಾರ ಭಾರಿ ಮಳೆ ಬೀಳುತ್ತಿದೆ.

ಕೋಲ್ಕತಾ/ಭುವನೇಶ್ವರ: ಬಂಗಾಳ ಕೊಲ್ಲಿಯಲ್ಲಿ ಸಂಭವಿಸಿರುವ ವಾಯುಭಾರ ಕುಸಿತದಿಂದಾಗಿ ಸೃಷ್ಟಿಯಾಗಿರುವ ಡಾನಾ ಚಂಡಮಾರುತ ಒಡಿಶಾ ಕರಾವಳಿಯನ್ನು ಸಮೀಪಿಸಿದ್ದು, ಶುಕ್ರವಾರ ನಸುಕಿನಲ್ಲಿ ರಾಜ್ಯಕ್ಕೆ ಅಪ್ಪಳಿಸುವ ನಿರೀಕ್ಷೆಯಿದೆ. ಇದರ ಪರಿಣಾಮವಾಗಿ ಒಡಿಶಾ ಹಾಗೂ ಪಕ್ಕದ ಪಶ್ಚಿಮ ಬಂಗಾಳದಲ್ಲಿ ಗುರುವಾರ ಭಾರಿ ಮಳೆ ಬೀಳುತ್ತಿದೆ.

ಚಂಡಮಾರುತದ ಕಾರಣ ಗುರುವಾರ ಸಂಜೆ 6ರಿಂದಲೇ ಒಡಿಶಾ ಹಾಗೂ ಪಶ್ಚಿಮ ಬಂಗಾಳದ ವಿಮಾನ ನಿಲ್ದಾಣಗಳು ಕಾರ್ಯನಿರ್ವಹಣೆ  ನಿಲ್ಲಿಸಿವೆ. ಹೀಗಾಗಿ 40 ವಿಮಾನ ರದ್ದಾಗಿವೆ. ಅಂತೆಯೇ ಪೂರ್ವ ಮತ್ತು ಆಗ್ನೇಯ ರೈಲ್ವೆಗಳ 200ಕ್ಕೂ ಅಧಿಕ ಎಕ್ಸ್‌ಪ್ರೆಸ್‌ ಮತ್ತು ಪ್ಯಾಸೆಂಜರ್‌ ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ.

ಒಡಿಶಾ ಹಾಗೂ ಪ.ಬಂಗಾಳದಲ್ಲಿ 13 ಲಕ್ಷ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿ ಜೀವಹಾನಿ ನಿಯಂತ್ರಣಕ್ಕೆ ಕ್ರಮ ಜರುಗಿಸಲಾಗಿದೆ.

ಗಂಟೆಗೆ 120 ಕಿ.ಮೀ. ಬಿರುಗಾಳಿ:

‘ಚಂಡಮಾರುತ ಒಡಿಶಾದ ಪುರಿ ಹಾಗೂ ಸಾಗರ್‌ ನಡುವೆ ಶುಕ್ರವಾರ ನಸುಕಿನ ಜಾವ ಅಪ್ಪಳಿಸಲಿದೆ. ಈ ವೇಳೆ ಗಂಟೆಗೆ 120 ಕಿಮೀ ವೇಗದಲ್ಲಿ ಗಾಳಿ ಬೀಸಲಿದ್ದು, ಒಡಿಶಾದ ಭಿತರ್‌ಕನಿಕಾ ರಾಷ್ಟ್ರೀಯ ಉದ್ಯಾನವನ ಹಾಗೂ ಧಮ್ರಾ ಬಂದರಿನ ನಡುವೆ ಭೂಕುಸಿತ ಸಂಭವಿಸುವ ಸಾಧ್ಯತೆಯಿದೆ’ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಅತ್ತ ಪಶ್ಚಿಮ ಬಂಗಾಳದ ದಕ್ಷಿಣದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆ ಆರಂಭವಾಗಿದ್ದು, ಶುಕ್ರವಾರವೂ ಮಳೆ ಮುನ್ನೆಚ್ಚರಿಕೆ ಇದೆ.

ಒಡಿಶಾದ ಹಾಗೂ ಪ.ಬಂಗಾಳದ ಕೆಲ ಜಿಲ್ಲೆಗಳಲ್ಲಿ ಕೆಂಪು ಹಾಗೂ ಹಳದಿ ಅಲರ್ಟ್‌ ಜಾರಿಗೊಳಿಸಲಾಗಿದೆ.

ಜನರ ರಕ್ಷಣೆಗೆ ಕ್ರಮ:

ಅನಾಹುತ ಪ್ರಮಾಣವನ್ನು ತಗ್ಗಿಸುವ ನಿಟ್ಟಿನಲ್ಲಿ ಒಡಿಶಾ ಸಿಎಂ ಮೋಹನ್‌ ಚರಣ್‌ ಮಾಂಝಿ ಪರಿಶೀಲನಾ ಸಭೆ ನಡೆಸಿದ್ದು, ಯಾವುದೇ ಸಾವು-ನೋವು ಸಂಭವಿಸದಂತೆ ವ್ಯವಸ್ಥೆ ಮಾಡಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಈ ಹಿನ್ನೆಲೆಯಲ್ಲಿ 7,285 ಆಶ್ರಯ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, 91 ವೈದ್ಯಕೀಯ ತಂಡಗಳನ್ನು ನಿಯೋಜಿಸಲಾಗಿದೆ. ಅಂತೆಯೇ 19 ರಾಷ್ಟ್ರೀಯ ಹಾಗೂ 51 ರಾಜ್ಯ ವಿಪತ್ತು ನಿರ್ವಹಣಾ ಪಡೆ, ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಾಂತರ ಪ್ರಕ್ರಿಯೆಯಲ್ಲಿ ತೊಡಗಿವೆ.

ಒಡಿಶಾದಲ್ಲಿ 10 ಲಕ್ಷ ಹಾಗೂ ಬಂಗಾಳದಲ್ಲಿ 3 ಲಕ್ಷ ಜನರನ್ನು ಸ್ಥಳಾಂತರಿಸಲಾಗಿದೆ.

ಜಗನ್ನಾಥ ದೇವಸ್ಥಾನ ರಕ್ಷಣೆಗೆ ಕ್ರಮ:

ಕಡಲತೀರದ ಪುರಿಯಲ್ಲಿರುವ ಜಗನ್ನಾಥ ದೇವಸ್ಥಾನವನ್ನು ಚಂಡಮಾರುತದ ಅಬ್ಬರದಿಂದ ರಕ್ಷಿಸುವ ಸಲುವಾಗಿ ಈ ಸಮಯದಲ್ಲಿ ಅಲ್ಲಿಗೆ ಭೇಟಿ ನೀಡದಂತೆ ಭಕ್ತರಿಗೆ ಸೂಚಿಸಲಾಗಿದೆ. ದೇವಸ್ಥಾನದ ಬಾಗಿಲು ಹಾಗೂ ಕಿಟಕಿಗಳನ್ನು ಪರಿಶೀಲಿಸಲಾಗಿದೆ. ಇವೆಲ್ಲದರ ನಡುವೆಯೂ ನಿತ್ಯ ಪೂಜೆ ನಡೆಯಲಿದೆ.-

ಕಂಟ್ರೋಲ್‌ ರೂಂನಲ್ಲಿ ರಾತ್ರಿಯಿಡೀ ದೀದಿ ಮೇಲ್ವಿಚಾರಣೆ

ಕೋಲ್ಕತಾ: ಪ.ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಇಡೀ ರಾತ್ರಿ ಕೋಲ್ಕತಾದ ಕಂಟ್ರೋಲ್‌ ರೂಂನಲ್ಲಿ ಇದ್ದು, ಚಂಡಮಾರುತ ಪರಿಸ್ಥಿತಿಯ ಮೇಲ್ವಿಚಾರಣೆ ನಡೆಸಿದರು. ಜೊತೆಗೆ ಎಲ್ಲಾ ಏಜೆನ್ಸಿಗಳಿಗೂ ಎಚ್ಚರಿಕೆ ನೀಡಲಾಗಿದ್ದು, ಸ್ಥಳಾಂತರ ಪ್ರಕ್ರಿಯೆ ಪೂರ್ಣಗೊಂಡಿದೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಸಚಿವ ಜಾವೇದ್‌ ಅಹ್ಮದ್‌ ಖಾನ್‌ ತಿಳಿಸಿದ್ದಾರೆ.