ಟಿಎಂಸಿ ಫೈರ್‌ಬ್ರಾಂಡ್‌ ಮಹುವಾಗೆ ರಾಜಮಾತೆ ಸವಾಲು

| Published : Apr 07 2024, 01:51 AM IST / Updated: Apr 07 2024, 05:22 AM IST

ಸಾರಾಂಶ

ಬಾಂಗ್ಲಾದೇಶದ ಜೊತೆ ಗಡಿ ಹಂಚಿಕೊಂಡಿರುವ ಪಶ್ಚಿಮ ಬಂಗಾಳದ ಕೃಷ್ಣಾನಗರ ಕ್ಷೇತ್ರ ಈ ಬಾರಿ ಮಹಿಳಾ ಕದನಕ್ಕೆ ಸಾಕ್ಷಿಯಾಗುತ್ತಿದೆ.

ಬಾಂಗ್ಲಾದೇಶದ ಜೊತೆ ಗಡಿ ಹಂಚಿಕೊಂಡಿರುವ ಪಶ್ಚಿಮ ಬಂಗಾಳದ ಕೃಷ್ಣಾನಗರ ಕ್ಷೇತ್ರ ಈ ಬಾರಿ ಮಹಿಳಾ ಕದನಕ್ಕೆ ಸಾಕ್ಷಿಯಾಗುತ್ತಿದೆ. ಪ್ರಶ್ನೆಗಾಗಿ ಲಂಚ ಪ್ರಕರಣದಲ್ಲಿ ಅನರ್ಹ ಸಂಸದೆ ಮಹುವಾ ಕುರಿತು ಬಿಜೆಪಿ ಹರಿಹಾಯುತ್ತಿದ್ದರೆ ರಾಜಕುಟುಂಬದ ಅಮೃತಾ ರಾಯ್‌ ಪೂರ್ವಜರು ಬ್ರಿಟಿಷರಿಗೆ ಬೆಂಬಲಿಸಿದ್ದರು ಎಂದು ಟಿಎಂಸಿ ತಿರುಗೇಟು ನೀಡುತ್ತಿದೆ. ಈ ನಡುವೆ ಕ್ಷೇತ್ರದಲ್ಲಿ ಕಾಂಗ್ರೆಸ್‌ ಮತ್ತು ಎಡಪಕ್ಷ ಒಂದಾಗಿರುವುದು ತ್ರಿಕೋನ ಸ್ಪರ್ಧೆ ಏರ್ಪಡುವಂತೆ ಮಾಡಿದೆ.

1967ರಲ್ಲಿ ಇಲ್ಲಿ ನಡೆದ ಮೊದಲ ಚುನಾವಣೆಯಿಂದ ಇದುವರೆಗೆ ಒಮ್ಮೆ ಪಕ್ಷೇತರ, 9 ಬಾರಿ ಎಡಪಕ್ಷಗಳು, ಒಮ್ಮೆ ಬಿಜೆಪಿ ಗೆದ್ದಿವೆ. 2009ರ ಬಳಿಕ ಕ್ಷೇತ್ರ ಸತತವಾಗಿ ಟಿಎಂಸಿಗೆ ಒಲಿಯುತ್ತಲೇ ಬಂದಿದೆ. ಕ್ಷೇತ್ರದ ವ್ಯಾಪ್ತಿಯ ಎಲ್ಲಾ 7 ವಿಧಾನಸಭಾ ಕ್ಷೇತ್ರಗಳಲ್ಲೂ ಟಿಎಂಸಿ ಶಾಸಕರು ಇದ್ದಾರೆ.

ಕೇಂದ್ರ ಸರ್ಕಾರ ಇತ್ತೀಚೆಗೆ ಜಾರಿ ಮಾಡಿರುವ ಪೌರತ್ವ ತಿದ್ದುಪಡಿ ಕಾಯ್ದೆ ಪ್ರಸ್ತುತ ಚುನಾವಣೆಯಲ್ಲಿ ಹೆಚ್ಚಿನ ಪ್ರಭಾವ ಬೀರುವ ಸಾಧ್ಯತೆಯಿದೆ. ಬಾಂಗ್ಲಾದೇಶದ ವಲಸಿಗ ಮತುವಾ ಸಮುದಾಯದ ಶೇ.10 ಮತದಾರರು ಕ್ಷೇತ್ರದಲ್ಲಿದ್ದು, ನಿರ್ಣಾಯಕ ಪಾತ್ರ ವಹಿಸುವ ಸಾಧ್ಯತೆಯಿದೆ. ಜೊತೆಗೆ ಕಾಂಗ್ರೆಸ್‌ ಮತ್ತು ಸಿಪಿಎಂ ಒಂದಾಗಿದ್ದು, ಟಿಎಂಸಿ ಪಡೆಯುತ್ತಿದ್ದ ಒಂದಷ್ಟು ಮತಗಳನ್ನು ಕಸಿಯಬಹುದು. ಆಗ ಬಿಜೆಪಿ ಅಭ್ಯರ್ಥಿಗೆ ಲಾಭವಾಗಬಹುದು ಎಂದು ನಿರೀಕ್ಷಿಸಲಾಗಿದೆ.

ಫೈರ್‌ಬ್ರಾಂಡ್‌ ನಾಯಕಿ:

ಮಹುವಾ ಮೊಯಿತ್ರಾ ಟಿಎಂಸಿಯ ಫೈರ್‌ಬ್ರಾಂಡ್‌ ನಾಯಕಿ ಎಂದೇ ಗುರುತಿಸಿಕೊಂಡವರು. ಪ್ರಧಾನಿ ಮೋದಿ ಮತ್ತು ಬಿಜೆಪಿ ಸರ್ಕಾರದ ವಿರುದ್ಧ ಸಂಸತ್ತಿನ ಒಳಗೂ- ಹೊರಗೂ ಅಂಕಿ ಅಂಶ ಸಮೇತ ವಾಗ್ದಾಳಿ ನಡೆಸಿ ಗಮನ ಸೆಳೆದವರು. ಆದರೆ ಇತ್ತೀಚೆಗೆ ಪ್ರಶ್ನೆ ಕೇಳಲು ಲಂಚ ಸ್ವೀಕರಿಸಿದ ಪ್ರಕರಣದಲ್ಲಿ ಸಂಸತ್‌ ಸದಸ್ಯತ್ವದಿಂದ ಅನರ್ಹಗೊಂಡಿದ್ದಾರೆ. ಆದರೂ ಅವರ ಮೇಲೆ ವಿಶ್ವಾಶ ಇಟ್ಟು ಮಮತಾ ಮತ್ತೆ ಸೀಟು ನೀಡಿದ್ದಾರೆ.

ರಾಜಮಾತೆಗೆ ಮೋದಿ ಬಲ:

ಮಹುವಾಗೆ ಸಡ್ಡು ಹೊಡೆಯಲು ಕ್ಷೇತ್ರದಲ್ಲಿ ಪ್ರಭಾವಿಯಾಗಿರುವ ರಾಜಮಾತೆ ಅಮೃತಾರಾಯ್‌ಗೆ ಬಿಜೆಪಿ ಟಿಕೆಟ್‌ ನೀಡಿದೆ. ಸ್ಥಳೀಯವಾಗಿ ಸಾಕಷ್ಟು ಪ್ರಭಾವ ಹೊಂದಿರುವ ಅಮೃತಾ ಜನರ ಗಮನ ಸೆಳೆಯುವ ವಿಶ್ವಾಸದಲ್ಲಿ ಬಿಜೆಪಿ ಇದೆ. ಪಕ್ಷ ಅಧಿಕಾರಕ್ಕೆ ಬಂದರೆ ಜನರಿಂದ ಮಮತಾ ಲೂಟಿ ಹೊಡೆದ ಹಣ ಮರಳಿಸುವ ಭರವಸೆಯನ್ನು ರಾಯ್‌ ನೀಡುತ್ತಿದ್ದಾರೆ.

ಸ್ಟಾರ್‌ ಕ್ಷೇತ್ರ: ಕೃಷ್ಣಾನಗರ

ರಾಜ್ಯ: ಪಶ್ಚಿಮ ಬಂಗಾಳ

ಮತದಾನ ನಡೆಯುವ ದಿನ: ಮೇ 13

ವಿಧಾನಸಭಾ ಕ್ಷೇತ್ರಗಳು: 7 (ಟಿಎಂಸಿ)

ಪ್ರಮುಖ ಅಭ್ಯರ್ಥಿಗಳು:

ಬಿಜೆಪಿಅಮೃತಾ ರಾಯ್‌

ಟಿಎಂಸಿಮಹುವಾ ಮೊಯಿತ್ರಾ

ಸಿಪಿಎಂಎಸ್‌ ಎಂ ಸಾದಿ

2019ರ ಚುನಾವಣೆ ಫಲಿತಾಂಶ

ಗೆಲುವುಮಹುವಾ ಮೊಯಿತ್ರಾಟಿಎಂಸಿ

ಸೋಲುಕಲ್ಯಾಣ್‌ ಚೌಬೆಬಿಜೆಪಿ

ಚುನಾವಣಾ ವಿಷಯಗಳು

-ಸಿಎಎ ಜಾರಿ

-ದೇಶವಿರೋಧಿ ಅಸ್ಮಿತೆ

-ಮಹುವಾ ಅನರ್ಹತೆ

-ರಾಜಭಕ್ತಿ