ಸಾರಾಂಶ
ಜೈಪುರ : ಚುನಾವಣಾ ಅಧಿಕಾರಿಗೆ ಕಪಾಳಮೋಕ್ಷ ಮಾಡಿದ್ದ ರಾಜಸ್ಥಾನದ ದೇವಲಿ-ಉನಿಯಾರಾ ವಿಧಾನಸಭಾ ಪಕ್ಷೇತರ (ಕಾಂಗ್ರೆಸ್ ಬಂಡಾಯ) ಅಭ್ಯರ್ಥಿಯನ್ನು ಭಾರಿ ಹೈಡ್ರಾಮಾ ಬಳಿಕ ಗುರುವಾರ ಬಂಧಿಸಲಾಗಿದೆ. ಬಳಿಕ ಅವರ ಬೆಂಬಲಿಗರು ಪೊಲೀಸ್ ವಾಹನ ಸೇರಿ 60 ಬೈಕ್, 18 ಕಾರುಗಳಿಗೆ ಬೆಂಕಿ ಹಚ್ಚಿದ್ದಾರೆ.
ಕಪಾಳಮೋಕ್ಷ ಮಾಡಿದ ಕಾರಣ ಅಭ್ಯರ್ಥಿ ನರೇಶ್ ಮೀನಾ ಅವರನ್ನು ಬಂಧಿಸಲು ಪೊಲೀಸರು ಆಗಮಿಸುವ ಸೂಚನೆ ದೊರಕಿತ್ತು. ಆಗ ಅವರು, ‘ನಾನು ಶರಣಾಗಲ್ಲ’ ಎಂದು ಪತ್ರಕರ್ತರಿಗೆ ಹೇಳಿದರಲ್ಲದೆ, ‘ಪೊಲೀಸರನ್ನು ನನ್ನ ಹತ್ತಿರ ಸುಳಿಯಲು ಬಿಡಬೇಡಿ. ಅವರನ್ನು ಸುತ್ತುವರಿಯಿರಿ. ಟ್ರಾಫಿಕ್ ಜಾಂ ಮಾಡಿರಿ’ ಎಂದು ಬೆಂಬಲಿಗರಿಗೆ ಕರೆ ನೀಡಿದರು.
ಕೊನೆಗೆ ಡಜನ್‌ಗಟ್ಟಲೆ ಪೊಲೀಸರು, ಲಾಠಿ ಮತ್ತು ಶೀಲ್ಡ್‌ಗಳನ್ನು ಹೊತ್ತುಕೊಂಡು, ರಕ್ಷಣಾತ್ಮಕ ಜಾಕೆಟ್ ಮತ್ತು ಹೆಲ್ಮೆಟ್‌ಗಳನ್ನು ಧರಿಸಿ, ಮೀನಾ ಇದ್ದ ಸ್ಥಳಕ್ಕೆ ಆಗಮಿಸಿ ಅವರನ್ನು ಬಂಧಿಸಿದರು.
ಅವರ ಬಂಧನದ ಬಳಿಕ ಬೆಂಬಲಿಗರು ಮತ್ತು ಪೊಲೀಸರ ನಡುವೆ ಘರ್ಷಣೆ ನಡೆದಿದೆ. ಮೀನಾ ಬೆಂಬಲಿಗರು ಪೊಲೀಸರ ವಾಹನ ಸೇರಿ 18 ಕಾರು ಹಾಗೂ 60 ಬೈಕ್‌ಗಳಿಗೆ ಬೆಂಕಿ ಹಚ್ಚಿದ್ದಾರೆ. ಇದಾದ ನಂತರ 60 ಗಲಭೆಕೋರರನ್ನು ಬಂಧಿಸಲಾಗಿದೆ.
ಬುಧವಾರ ದೇವಲಿ ಕ್ಷೇತ್ರದ ಉಪಚುನಾವಣೆ ವೇಳೆ ಗ್ರಾಮವೊಂದರ ಮತದಾನ ಬಹಿಷ್ಕಾರ ವಿರೋಧಿಸಿದ್ದ ಚುನಾವಣಾಧಿಕಾರಿ ಅಮಿತ್ ಚೌಧರಿ ಅವರಿಗೆ ನರೇಶ್ ಮೀನಾ ಕಪಾಳಮೋಕ್ಷ ಮಾಡಿದ್ದರು.