ಎಂಡಿಎಚ್‌, ಎವರೆಸ್ಟ್‌ ಮಸಾಲಾ ಅಸುರಕ್ಷಿತ: ರಾಜಸ್ಥಾನ ಸರ್ಕಾರ

| Published : Jun 15 2024, 01:07 AM IST / Updated: Jun 15 2024, 05:28 AM IST

ಎಂಡಿಎಚ್‌, ಎವರೆಸ್ಟ್‌ ಮಸಾಲಾ ಅಸುರಕ್ಷಿತ: ರಾಜಸ್ಥಾನ ಸರ್ಕಾರ
Share this Article
  • FB
  • TW
  • Linkdin
  • Email

ಸಾರಾಂಶ

ಕೇಂದ್ರ ಸರ್ಕಾರಕ್ಕೆ ರಾಜಸ್ಥಾನದ ಆರೋಗ್ಯ ಅಧಿಕಾರಿಯಿಂದ ಪತ್ರ ಬಂದಿದ್ದು, ಅದರಲ್ಲಿ ಎಂಡಿಎಚ್‌, ಎವರೆಸ್ಟ್‌ ಮಸಾಲಾ ಅಸುರಕ್ಷಿತ ಎಂದು ರಾಜಸ್ಥಾನ ಸರ್ಕಾರ ವರದಿ ನೀಡಿರುವುದಾಗಿ ತಿಳಿಸಿದ್ದಾರೆ.

ಜೈಪುರ: ದೇಶದಲ್ಲಿ ಹೆಚ್ಚು ಮಾರಾಟವಾಗುವ ಜನಪ್ರಿಯ ಸಂಬಾರ ಪದಾರ್ಥಗಳಾದ ಎಂಡಿಎಚ್‌ ಹಾಗೂ ಎವರೆಸ್ಟ್‌ ಬ್ರ್ಯಾಂಡ್‌ನ ಕೆಲವೊಂದು ಉತ್ಪನ್ನಗಳು ಬಳಕೆಗೆ ಸುರಕ್ಷಿತವಲ್ಲ ಎಂದು ರಾಜಸ್ಥಾನ ಸರ್ಕಾರ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಮಾಹಿತಿ ನೀಡಿದೆ.

ಈ ಎರಡೂ ಕಂಪನಿಗಳ ಉತ್ಪನ್ನಗಳ ಬಗ್ಗೆ ಸ್ವದೇಶ ಹಾಗೂ ವಿದೇಶಗಳಲ್ಲೂ ಕೆಲ ದಿನಗಳಿಂದ ದೂರುಗಳು ಇವೆ. ಇದರ ಬೆನ್ನಲ್ಲೇ ರಾಜಸ್ಥಾನ ಸರ್ಕಾರ ಪತ್ರ ಬರೆದಿರುವುದು ಗಮನಾರ್ಹವಾಗಿದೆ.

ಈ ಎರಡೂ ಕಂಪನಿಗಳ ಕೆಲವೊಂದು ಉತ್ಪನ್ನಗಳ ಮಾದರಿಗಳನ್ನು ರಾಜಸ್ಥಾನ ಸರ್ಕಾರ ಪರೀಕ್ಷೆಗೆ ಒಳಪಡಿಸಿದೆ. ಅವು ಬಳಕೆಗೆ ಸುರಕ್ಷಿತವಲ್ಲ ಎಂಬ ಅಂಶ ಕಂಡುಬಂದಿದೆ. ಹೀಗಾಗಿ ರಾಜಸ್ಥಾನದ ಹಿರಿಯ ಆರೋಗ್ಯ ಅಧಿಕಾರಿ ಶುಭ್ರಾ ಸಿಂಗ್‌ ಅವರು ಕೇಂದ್ರ ಸರ್ಕಾರದ ಭಾರತೀಯ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ)ಗೆ ಪತ್ರ ಬರೆದಿದ್ದಾರೆ ಎಂದು ವರದಿಗಳು ತಿಳಿಸಿವೆ.

ಎಂಡಿಎಚ್‌ ಕಂಪನಿಯ 2 ಹಾಗೂ ಎವರೆಸ್ಟ್‌ ಕಂಪನಿಯ ಒಂದು ಮಸಾಲಾ ಉತ್ಪನ್ನಗಳ ಮಾರಾಟವನ್ನು ಹಾಂಕಾಂಗ್ ಏಪ್ರಿಲ್‌ನಲ್ಲಿ ಸ್ಥಗಿತಗೊಳಿಸಿತ್ತು. ಕ್ಯಾನ್ಸರ್‌ಕಾರಕ ಕ್ರಿಮಿನಾಶಕವಾಗಿರುವ ಎಥಿಲಿನ್‌ ಆಕ್ಸೈಡ್‌ ಈ ಉತ್ಪನ್ನಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿದೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದರು.