ಸಾರಾಂಶ
ತಿರುವನಂತಪುರ : ಲೋಕಸಭೆ ಚುನಾವಣೆಯಲ್ಲಿ ತಿರುವನಂತಪುರಂನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶಶಿ ತರೂರ್ ವಿರುದ್ಧ ಸೋಲು ಕಂಡಿರುವ ಬಿಜೆಪಿ ನಾಯಕ, ಮಾಜಿ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಅವರು, ಕೇರಳ ರಾಜಧಾನಿ ಪ್ರದೇಶದಲ್ಲಿ 100 ದಿನಗಳ ಕಾರ್ಯಸೂಚಿಯನ್ನು ಯೋಜಿಸಿರುವುದಾಗಿ ಸೋಮವಾರ ಘೋಷಿಸಿದ್ದಾರೆ.
‘ಪ್ರಧಾನಿ ನರೇಂದ್ರ ಮೋದಿ ಅವರು ನೇ ಅವಧಿಗೆ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ತಕ್ಷಣ, ನಾವು ತಿರುವನಂತಪುರಂನ ಜನರ ಸಮಸ್ಯೆಗಳ ಪರಿಹಾರಕ್ಕೆ ಕೆಲಸ ಆರಂಭಿಸುತ್ತೇವೆ ಎಂದು ಈ ಚುನಾವಣೆಯಲ್ಲಿ ನನಗೆ ಮತ ಹಾಕಿದ ಎಲ್ಲರಿಗೂ ನಾನು ಈ ಹಿಂದೆ ಹೇಳಿದ್ದೆ. ಅದರಂತೆ ನಾನು ಈಗ ಪ್ರಧಾನಿ ಜೊತೆ ಕೆಲಸ ಮಾಡುತ್ತೇನೆ ಹಾಗೂ ತಿರುವನಂತಪುರಕ್ಕಾಗಿ 100 ದಿನಗಳ ಅಜೆಂಡಾವನ್ನು ಯೋಜಿಸಿದ್ದೇನೆ’ ಎಂದು ಟ್ವೀಟ್ ಮಾಡಿದ್ದಾರೆ.
ಭಾನುವಾರ ಸಂಜೆ ಅವರು ಟ್ವೀಟ್ ಮಾಡಿ, ನಾನು ನನ್ನ ಸಾರ್ವಜನಿಕ ಜೀವನ ಅಂತ್ಯಗೊಳಿಸುತ್ತೇನೆ ಎಂದು ಟ್ವೀಟ್ ಮಾಡಿದ್ದರು. ಅದು ಸಂಚಲನ ಮೂಡಿಸಿತ್ತು. ಆದರೆ ಬಳಿಕ ಆ ಟ್ವೀಟ್ ಡಿಲೀಟ್ ಮಾಡಿ, ‘18 ವರ್ಷದ ನನ್ನ ಸಂಸದೀಯ ಜೀವನ ಅಂತ್ಯವಾಗಿದೆ ಎಂದಷ್ಟೇ ಹೇಳಬೇಕಿತ್ತು. ನನ್ನ ಟ್ವೀಟ್ ಅಪಾರ್ಥ ಸೃಷ್ಟಿಸಿತ್ತು’ ಎಂದು ಸ್ಪಷ್ಟನೆ ನೀಡಿದ್ದರು.