ಒಳ್ಳೆಯ ಹೆಸರಿದೆ, ಸರಿಯಾಗಿ ಬಳಸಿ: ರಾಮದೇವ್‌ಗೆ ಸುಪ್ರೀಂ

| Published : May 15 2024, 01:38 AM IST

ಸಾರಾಂಶ

ಯೋಗ ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡಿದ್ದೀರಿ. ಆದರೆ ಪತಂಜಲಿ ಉತ್ಪನ್ನ ಬೇರೆಯದ್ದೇ ವಿಷಯ ಎಂದು ತಿಳಿಸಿ ನ್ಯಾಯಾಂಗ ನಿಂದನೆ ಕೇಸ್‌ ವಿಚಾರಣೆಯನ್ನು ನ್ಯಾಯಾಲಯ ಪೂರ್ಣಗೊಳಿಸಿದೆ

ನವದೆಹಲಿ: ಪತಂಜಲಿ ಉತ್ಪನ್ನಗಳಿಗೆ ಸಂಬಂಧಿಸಿದಂತೆ ದಾರಿ ತಪ್ಪಿಸುವ ಜಾಹೀರಾತು ನೀಡಿದ ಹಿನ್ನೆಲೆಯಲ್ಲಿ ಪ್ರಖ್ಯಾತ ಯೋಗಗುರು ಬಾಬಾ ರಾಮದೇವ್‌ ವಿರುದ್ಧ ತೀಕ್ಷ್ಣ ಟೀಕೆಗಳನ್ನು ಮಾಡುತ್ತಲೇ ಬಂದಿರುವ ಸುಪ್ರೀಂಕೋರ್ಟ್‌ ಮಂಗಳವಾರ ಮತ್ತೊಮ್ಮೆ ಚಾಟಿ ಬೀಸಿದೆ. ರಾಮದೇವ್‌ ಅವರಿಗೆ ಒಳ್ಳೆಯ ಪ್ರಭಾವವಿದೆ. ಆದರೆ ಅವರು ಅದನ್ನು ಸರಿಯಾಗಿ ಬಳಸಬೇಕು ಎಂದು ಕಿವಿ ಮಾತು ಹೇಳಿದೆ.ಇದೇ ವೇಳೆ, ರಾಮದೇವ್‌ ಅವರು ಯೋಗ ಕ್ಷೇತ್ರದಲ್ಲಿ ಅತ್ಯುತ್ತಮ ಕೆಲಸ ಮಾಡಿದ್ದಾರೆ ಎಂದು ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರು ನ್ಯಾಯಾಲಯದ ಗಮನಕ್ಕೆ ತಂದಾಗ, ‘ಯೋಗ ಕ್ಷೇತ್ರಕ್ಕಾಗಿ ಅವರು ಏನೇನು ಮಾಡಿದ್ದಾರೋ ಅದು ಒಳ್ಳೆಯದೆ. ಆದರೆ ಪತಂಜಲಿ ಉತ್ಪನ್ನಗಳಿಗೆ ಸಂಬಂಧಿಸಿದ ವಿಷಯವೇ ಬೇರೆ’ ಎಂದು ಕಿಡಿಕಾರಿದೆ.

ಮತ್ತೊಂದೆಡೆ, ಬಾಬಾ ರಾಮದೇವ್‌, ಅವರ ಪತಂಜಲಿ ಕಂಪನಿ ಹಾಗೂ ಆ ಕಂಪನಿಯ ಮುಖ್ಯಸ್ಥ ಆಚಾರ್ಯ ಬಾಲಕೃಷ್ಣ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕರಣದ ವಿಚಾರಣೆಯನ್ನು ನ್ಯಾಯಾಲಯ ಪೂರ್ಣಗೊಳಿಸಿದ್ದು, ತೀರ್ಪನ್ನು ಕಾದಿರಿಸಿದೆ.

ಐಎಂಎ ಅಧ್ಯಕ್ಷ ಕ್ಷಮೆ ಯಾಚನೆ:

ಈ ನಡುವೆ, ಪತಂಜಲಿ ಜಾಹೀರಾತು ಪ್ರಕರಣಕ್ಕೆ ಸಂಬಂಧಿಸಿದ ಸಂದರ್ಶನದ ವೇಳೆ ನ್ಯಾಯಾಲಯದ ಬಗ್ಗೆ ಪ್ರತಿಕೂಲ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದ ಭಾರತೀಯ ವೈದ್ಯ ಸಂಘ (ಐಎಂಎ)ದ ಅಧ್ಯಕ್ಷ ಆರ್‌.ವಿ. ಅಶೋಕನ್‌ ಅವರು ಸುಪ್ರೀಂಕೋರ್ಟ್‌ನ ಬೇಷರತ್‌ ಕ್ಷಮೆ ಕೇಳಿದರು. ಸುಖಾಸನದ ಮೇಲೆ ಕುಳಿತು ಸಂದರ್ಶನ ನೀಡುತ್ತಾ, ಕೋರ್ಟ್‌ ಬಗ್ಗೆ ವ್ಯಂಗ್ಯ ಮಾಡಬೇಡಿ ಎಂದು ತಾಕೀತು ಮಾಡಿದ ನ್ಯಾಯಪೀಠ ಐಎಂಎ ಅಧ್ಯಕ್ಷ ಕ್ಷಮಾಪಣೆ ಅಫಿಡವಿಟ್‌ ಅನ್ನು ಸ್ವೀಕರಿಸಲು ನಿರಾಕರಿಸಿತು.

ಏನಿದು ಪ್ರಕರಣ?:

ಬಾಬಾ ರಾಮದೇವ್‌ ಅವರ ಪತಂಜಲಿ ಉತ್ಪನ್ನಗಳು ಆಧುನಿಕ ಔಷಧ ಪದ್ಧತಿ ಬಗ್ಗೆ ಅಪಪ್ರಚಾರ ಮಾಡುತ್ತಿವೆ. ರೋಗಗಳನ್ನು ವಾಸಿ ಮಾಡುವುದಾಗಿ ಬಿಂಬಿಸಿಕೊಳ್ಳುತ್ತಿವೆ ಎಂದು ಐಎಂಎ ಸುಪ್ರೀಂಕೋರ್ಟ್‌ ಪದ ಬಡಿದಿತ್ತು. ಅಂತಹ ಹೇಳಿಕೆಗಳ ಬಗೆಗಿನ ಗೊಂದಲ ನಿವಾರಿಸುವುದಾಗಿ ಪತಂಜಲಿ ಸಂಸ್ಥೆ ಹೇಳಿತ್ತು. ಆದರೆ ಅದನ್ನು ಉಲ್ಲಂಘಿಸಿತ್ತು. ಈ ಹಿನ್ನೆಲೆಯಲ್ಲಿ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಾಗಿತ್ತು.