ಗಡೀಪಾರಾಗಿ ಭಾರತಕ್ಕೆ ಬಂದಿರುವ 26/11 ಮುಂಬೈ ದಾಳಿಯ ಮಾಸ್ಟರ್‌ ಮೈಂಡ್‌ ತಹಾವೂರ್‌ ರಾಣಾನನ್ನು ವಿಚಾರಣೆಯ ಸಂದರ್ಭದಲ್ಲಿ ಮುಂಬೈನ ಆರ್ಥರ್‌ ರಸ್ತೆ ಜೈಲಿನಲ್ಲಿರುವ ಬ್ಯಾರಕ್‌ ನಂ.12ರಲ್ಲಿ ವಿಚಾರಣೆ ನಡೆಸುವ ಸಾಧ್ಯತೆಯಿದೆ. 

ನವದೆಹಲಿ: 2008ರ ಮುಂಬೈ ಹತ್ಯಾಕಾಂಡದ ಆರೋಪಿ ತಹಾವುರ್‌ ರಾಣಾಗೆ ಭಾರತದ ನ್ಯಾಯಾಲಯದಲ್ಲಿ ಗಲ್ಲು ಶಿಕ್ಷೆ ಜಾರಿಯಾಗುವ ಸಾಧ್ಯತೆ ಇದೆ ಎಂದು ಕೇಂದ್ರ ಗೃಹ ಸಚಿವಾಲಯದ ಮಾಜಿ ಕಾರ್ಯದರ್ಶಿ ಗೋಪಾಲ ಕೃಷ್ಣ ಪಿಳ್ಳೈ ಹೇಳಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಪಿಳ್ಳೈ, ‘‘ರಾಣಾ ಖುದ್ದಾಗಿ ತಾಜ್‌ ಹೋಟೆಲ್‌ ಹಾಗೂ ಅನ್ಯ ಪ್ರದೇಶಗಳ ಸಮೀಕ್ಷೆ ನಡೆಸದಿದ್ದರೂ, ಆ ಕೆಲಸ ಮಾಡಿ ಪಾಕಿಸ್ತಾನದಲ್ಲಿದ್ದ ಉಗ್ರರಿಗೆ ಮಾಹಿತಿ ಒದಗಿಸುತ್ತಿದ್ದ ಹೆಡ್ಲಿಗೆ ಸಹಾಯ ಮಾಡಿದ್ದ. ಇದಕ್ಕಾಗಿ ರಾಣಾನಿಗೆ ಮರಣದಂಡನೆ ಅಥವಾ 10 ಅಥವಾ ಅದಕ್ಕಿಂತ ಅಧಿಕ ವರ್ಷ ಸೆರೆವಾಸದ ಶಿಕ್ಷೆ ಸಿಗುವುದು ಖಚಿತ. ಜೊತೆಗೆ ದಾಳಿಯ ಸಂಚುಕೋರ ಡೇವಿಡ್‌ ಹೆಡ್ಲಿಗೆ ಭಾರತಕ್ಕೆ ಬರಲು ಸಹಾಯವಾಗುವಂತೆ ರಾಣಾ ತನ್ನ ಕಂಪನಿಯ ವಲಸೆ ಕಚೇರಿಯನ್ನು ಮುಂಬೈನಲ್ಲಿ ಸ್ಥಾಪಿಸಿ, ಆತನಿಗೆ ರಕ್ಷಣೆ ಹಾಗೂ ಸಹಕಾರ ನೀಡಿದ್ದ. ಅವರಿಬ್ಬರು ಆಪ್ತರಾಗಿದ್ದು, ದಾಳಿಯ ಬಗ್ಗೆ ಎಲ್ಲಾ ವಿಷಯ ತಿಳಿದಿದ್ದರು. ಈ ಬಗ್ಗೆ ಭಾರತದಲ್ಲಿ ನಡೆಯುವ ವಿಚಾರಣೆಯಲ್ಲಿ ಬಾಯಿ ಬಿಡಿಸಲಾಗುವುದು’ ಎಂದು ಹೇಳಿದ್ದಾರೆ.

ಇನ್ನು ಇನ್ನೋರ್ವ ಮಾಜಿ ಗೃಹ ಕಾರ್ಯದರ್ಶಿ ಆರ್‌.ಕೆ. ಸಿಂಗ್‌ ಮಾತನಾಡಿ, ‘ರಾಣಾನಿಂದಾಗಿ ಭಾರತೀಯ ಅಧಿಕಾರಿಗಳಿಗೆ ಈವರೆಗೆ ತಿಳಿದಿರದ ವಿಷಯಗಳು ಅರಿವಾಗಬಹುದು. ಇದರಿಂದ ಪಾಕಿಸ್ತಾನದಲ್ಲಿ ಅಡಗಿರುವ ಉಗ್ರಕ್ರಿಮಿಗಳ ಪತ್ತೆ ಸುಲಭವಾಗಬಹುದು’ ಎಂದಿದ್ದಾರೆ. ಅಂತೆಯೇ, ಹಲವು ಬಾರಿ ಭಾರತಕ್ಕೆ ಬಂದು ಹೋಗುತ್ತಿದ್ದ ರಾಣಾ ಹಾಗೂ ಹೆಡ್ಲಿಗೆ ಅವರ ಕಡೆಯವರು ಅಥವಾ ಪಾಕಿಸ್ತಾನದ ಐಎಸ್‌ಐ ಏಜೆಂಟ್‌ಗಳು ಸಹಾಯ ಮಾಡುತ್ತಿದ್ದರೇ ಎಂಬುದೂ ತಿಳಿಯಬೇಕಿದೆ’ ಎಂದರು.

ಉಗ್ರ ಕಸಬ್‌ ಇದ್ದ ಸೆಲ್‌ನಲ್ಲಿ ರಾಣಾ ಜೈಲು ವಾಸ?

ಮುಂಬೈ: ಗಡೀಪಾರಾಗಿ ಭಾರತಕ್ಕೆ ಬಂದಿರುವ 26/11 ಮುಂಬೈ ದಾಳಿಯ ಮಾಸ್ಟರ್‌ ಮೈಂಡ್‌ ತಹಾವೂರ್‌ ರಾಣಾನನ್ನು ವಿಚಾರಣೆಯ ಸಂದರ್ಭದಲ್ಲಿ ಮುಂಬೈನ ಆರ್ಥರ್‌ ರಸ್ತೆ ಜೈಲಿನಲ್ಲಿರುವ ಬ್ಯಾರಕ್‌ ನಂ.12ರಲ್ಲಿ ವಿಚಾರಣೆ ನಡೆಸುವ ಸಾಧ್ಯತೆಯಿದೆ. ವಿಶೇಷವೆಂದರೆ ಉಗ್ರ ಕಸಬ್‌ನನ್ನು ಗಲ್ಲಿಗೇರಿಸುವ ಮುನ್ನ ಇದೇ ಬ್ಯಾರಕ್‌ನಲ್ಲಿ ಇರಿಸಲಾಗಿತ್ತು.ಈ ಬ್ಯಾರಕ್‌ ನಂ.12 ವಿಶೇಷವಾಗಿದ್ದು, ಇದು ಸಾಮಾನ್ಯ ಬ್ಯಾರಕ್‌ಗಳಿಗಿಂತ ಹೆಚ್ಚಿನ ಭದ್ರತೆಯನ್ನು ಹೊಂದಿದೆ. ಇನ್ನು ಕಸಬ್‌ ಇದ್ದ ಸಂದರ್ಭದಲ್ಲಿ ಈ ಸೆಲ್ ಪ್ರತ್ಯೇಕ ಅಡುಗೆ ಮನೆಯನ್ನು ಸಹ ಹೊಂದಿತ್ತು. ಆದರೆ ಇದೇ ಬ್ಯಾರಕ್‌ನಲ್ಲಿ ರಾಣಾನನ್ನು ಇರಿಸುವ ಬಗ್ಗೆ ಯಾವುದೇ ಸೂಚನೆಗಳು ಬಂದಿಲ್ಲ. ಅವರನ್ನು ಇಲ್ಲಿಗೆ ಕರೆತಂದ ನಂತರ ಎಲ್ಲಿ ಇರಿಸಬೇಕು ಎಂದು ನೋಡುತ್ತೇವೆ ಎಂದು ಜೈಲಿನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆದರೆ ಮೂಲಗಳ ಮಾಹಿತಿ ಪ್ರಕಾರ ರಾಣಾನನ್ನು ಬ್ಯಾರಕ್‌ 12ನ ನೆಲ ಮಹಡಿಯಲ್ಲಿರುವ ಮೂರು ಸೆಲ್‌ಗಳಲ್ಲಿ ಒಂದರಲ್ಲಿ ಇರಿಸುವ ಸಾಧ್ಯತೆಯಿದೆ ಎನ್ನಲಾಗಿದೆ.