ಸಾರಾಂಶ
ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಸೋಮವಾರ ಸಂಜೆ ಬೆಂಗಳೂರಲ್ಲಿ ನಡೆದ ಸಿಎಲ್‌ಪಿ ಸಭೆಯಲ್ಲಿ ಸಚಿವರು - ಶಾಸಕರಿಗೆ ಖಡಕ್ ಎಚ್ಚರಿಕೆ ನೀಡಿದ ಮರುದಿನವೇ ಇಬ್ಬರು ನಾಯಕರು ಎಚ್ಚರಿಕೆ ಧಿಕ್ಕರಿಸಿ ಹೇಳಿಕೆ ಮುಂದುವರಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ಮುಖ್ಯಮಂತ್ರಿ ಬದಲಾವಣೆ ಮತ್ತು ಡಿನ್ನರ್ ಮೀಟಿಂಗ್ ಸೇರಿದಂತೆ ಮಾಧ್ಯಮಗಳಿಗೆ ಯಾವುದೇ ರಾಜಕೀಯ ಹೇಳಿಕೆ ನೀಡಿದರೆ ಪಕ್ಷದಿಂದ ಶಿಸ್ತು ಕ್ರಮ ನಿಶ್ಚಿತ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಸೋಮವಾರ ಸಂಜೆ ಬೆಂಗಳೂರಲ್ಲಿ ನಡೆದ ಸಿಎಲ್‌ಪಿ ಸಭೆಯಲ್ಲಿ ಸಚಿವರು - ಶಾಸಕರಿಗೆ ಖಡಕ್ ಎಚ್ಚರಿಕೆ ನೀಡಿದ ಮರುದಿನವೇ ಇಬ್ಬರು ನಾಯಕರು ಎಚ್ಚರಿಕೆ ಧಿಕ್ಕರಿಸಿ ಹೇಳಿಕೆ ಮುಂದುವರಿಸಿದ್ದಾರೆ.ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಅವರು ಮುಖ್ಯಮಂತ್ರಿಯಾಗುವ ಆಸೆ ಯಾರಿಗಿರುವುದಿಲ್ಲ? ದಲಿತರು ಮುಖ್ಯಮಂತ್ರಿ ಆಗಬಾರದೇ? ನಾನು ಸಹ ದಲಿತನಾಗಿದ್ದು ಮುಖ್ಯಮಂತ್ರಿ ಆದರೆ ತಪ್ಪೇನು? ಎಂದು ಪ್ರಶ್ನಿಸಿದ್ದಾರೆ. ಇನ್ನೊಬ್ಬ ನಾಯಕ ಮಾಜಿ ಸಚಿವ ಎಸ್.ಆರ್. ಪಾಟೀಲ, ಉತ್ತರ ಕರ್ನಾಟಕದವರು ಮುಖ್ಯಮಂತ್ರಿಗಳಾದರೆ ಹೃತ್ಪೂರ್ವಕವಾಗಿ ಸ್ವಾಗತಿಸುವೆ ಎಂದು ತಿಳಿಸಿದ್ದಾರೆ.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ, ‘ಗೃಹ ಸಚಿವ ಡಾ. ಜಿ. ಪರಮೇಶ್ವರ ನಿವಾಸದಲ್ಲಿ ನಡೆಯಬೇಕಾಗಿದ್ದ ದಲಿತರ ಸಭೆ ರದ್ದುಗೊಳಿಸಿಲ್ಲ, ಕಾರಣಾಂತರಗಳಿಂದ ಮುಂದೂಡಲಾಗಿದೆ. ದಲಿತ ಶಾಸಕರು ಹಾಗೂ ಸಚಿವರು ತಮ್ಮ ಕ್ಷೇತ್ರದಲ್ಲಿ ನಡೆಯುತ್ತಿರುವ ಅಭಿವೃದ್ಧಿ ವಿಚಾರ ಹಾಗೂ ಸಮಸ್ಯೆ ಹೇಳಿಕೊಳ್ಳುವ ಉದ್ದೇಶದಿಂದ ಈ ಸಭೆ ಕರೆಯಲಾಗಿತ್ತು. ದೆಹಲಿಯಿಂದ ಸಭೆ ರದ್ದು ಮಾಡಿಸಲಾಗಿದೆ ಎನ್ನುವುದೆಲ್ಲವೂ ಮಾಧ್ಯಮ ಸೃಷ್ಟಿ’ ಎಂದು ಹೇಳಿದರು.ಮಾಜಿ ಸಚಿವ ಎಸ್.ಆರ್. ಪಾಟೀಲ ಮಾತನಾಡಿ, ಉತ್ತರ ಕರ್ನಾಟಕದವರು ಮುಖ್ಯಮಂತ್ರಿಗಳಾದರೆ ಹೃತ್ಪೂರ್ವಕವಾಗಿ ಸ್ವಾಗತಿಸುವೆ. ಇನ್ನು ಮುಖ್ಯಮಂತ್ರಿಗಳ ಬದಲಾವಣೆ ವರಿಷ್ಠರಿಗೆ ಬಿಟ್ಟ ವಿಚಾರ. ಇಲ್ಲಿ ಯಾರೂ ಕೂಡ ಸನ್ಯಾಸಿಗಳಲ್ಲ. ಪ್ರತಿಯೊಬ್ಬ ಶಾಸಕರಿಗೂ ಸಚಿವನಾಗುವ ಬಗ್ಗೆ ಆಸೆ ಇದ್ದೆ ಇರುತ್ತದೆ. ನಮಗೂ ಅವಕಾಶ ಮಾಡಿಕೊಡಿ ಎಂದು ಹೈಕಮಾಂಡ್‌ಗೆ ಸಹಜವಾಗಿ ಕೇಳುತ್ತಾರೆ. ಇದರಲ್ಲಿ ತಪ್ಪೇನಿದೆ? ಅಧಿಕಾರ ಹಂಚಿಕೆ ಮಾತುಕತೆ ಕುರಿತು ನನಗೆ ಮಾಹಿತಿಯಿಲ್ಲ ಎಂದರು.
ಅಧಿಕಾರ ಹಂಚಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ರಾಜಕೀಯದಲ್ಲಿ ಕಾರ್ಯಕರ್ತರು ಶಾಸಕರಾಗಬೇಕು ಎನ್ನುತ್ತಾರೆ. ಶಾಸಕರು ಮಂತ್ರಿಯಾಗಬೇಕು, ಮಂತ್ರಿಗಳು ಮುಖ್ಯಮಂತ್ರಿಗಳಾಗಬೇಕು ಎನ್ನುತ್ತಾರೆ. ಇದು ಸಹಜ ಪ್ರಕ್ರಿಯೆ ಎಂದು ಮಾರ್ಮಿಕವಾಗಿ ಹೇಳಿದರು.