ಸಾರಾಂಶ
ಕೋಲ್ಕತಾ: ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ನಾಯಕಿ ಅಮೃತಾ ಎಕ್ಕಾ ಅವರ ಪತಿಯ ಬಳಿ ಅಪರೂಪದ, ಅತ್ಯಂತ ದುಬಾರಿ ಮೌಲ್ಯದ ಹಾಗೂ ಬಲು ಅಪಾಯಕಾರಿಯಾದ ‘ಕ್ಯಾಲಿಫೋರ್ನಿಯಂ’ ಎಂಬ ವಿಕಿರಣಶೀಲ ರಾಸಾಯನಿಕ ವಸ್ತು ಪತ್ತೆಯಾಗಿದೆ. ಇದು ಭಾರಿ ವಿವಾದಕ್ಕೆ ಕಾರಣವಾಗಿದೆ. ಡಾರ್ಜಿಲಿಂಗ್ ಜಿಲ್ಲೆಯ ನಕ್ಸಲ್‌ಬರಿಯಲ್ಲಿರುವ ಫ್ರಾನ್ಸಿಸ್ ಎಕ್ಕಾ ನಿವಾಸದ ಮೇಲೆ ಪೊಲೀಸರು ನಡೆಸಿದ ದಾಳಿ ವೇಳೆ ರಕ್ಷಣಾ ಅಭಿವೃದ್ಧಿ ಹಾಗೂ ಸಂಶೋಧನೆ ಸಂಸ್ಥೆ (ಡಿಆರ್‌ಡಿಒ)ಗೆ ಸಂಬಂಧಿಸಿದ ದಾಖಲೆಗಳು ಕೂಡ ಸಿಕ್ಕಿವೆ.
ಫ್ರಾನ್ಸಿಸ್ ಮನೆಯಲ್ಲಿ ಪತ್ತೆಯಾದ ಕ್ಯಾಲಿಫೋರ್ನಿಯಂ ಎಷ್ಟು ಪ್ರಮಾಣದ್ದಾಗಿದೆ ಎಂಬುದನ್ನು ಅಧಿಕಾರಿಗಳು ಬಹಿರಂಗಪಡಿಸಿಲ್ಲ. ಅಣು ರಿಯಾಕ್ಟರ್‌ನಂತಹ ಅತ್ಯಂತ ಭದ್ರತಾ ಕ್ಷೇತ್ರಗಳಲ್ಲಿ ಸಾಮಾನ್ಯವಾಗಿ ಇದನ್ನು ಬಳಸಲಾಗುತ್ತದೆ. ಪ್ರತಿ ಗ್ರಾಂಗೆ 17 ಕೋಟಿ ರು.ವರೆಗೂ ಬೆಲೆ ಇದೆ.
ಬಂಗಾಳ ಪೊಲೀಸರು ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಜಂಟಿಯಾಗಿ ಶೋಧ ಕಾರ್ಯ ನಡೆಸಿ ರಾಸಾಯನಿಕ ಹಾಗೂ ಡಿಆರ್‌ಡಿಒ ದಾಖಲೆಗಳನ್ನು ವಶಪಡಿಸಿಕೊಂಡಿವೆ.
ತಮಗೆ ಹೇಗೆ ರಾಸಾಯನಿಕ ವಸ್ತು ಹಾಗೂ ಡಿಆರ್‌ಡಿಒ ದಾಖಲೆಗಳು ದೊರೆತವು ಎಂಬ ಬಗ್ಗೆ ಸ್ಪಷ್ಟ ಉತ್ತರ ಕೊಡದ ಕಾರಣ ಫ್ರಾನ್ಸಿಸ್ ಎಕ್ಕಾ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಅತ್ಯಂತ ಸೂಕ್ಷ್ಮವಾದ ವಸ್ತುಗಳು ಹಾಗೂ ರಹಸ್ಯ ದಾಖಲೆಗಳು ಫ್ರಾನ್ಸಿಸ್ ಮನೆಯಲ್ಲಿ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಆತನಿಗೆ ಭೂಗತ ಜಾಲ ಸಂಪರ್ಕ ಇರಬಹುದು ಅಥವಾ ರಾಷ್ಟ್ರೀಯ ಭದ್ರತೆಗೆ ಅಪಾಯ ಒಡ್ಡುವ ಬೃಹತ್ ಸಂಚಿನಲ್ಲಿ ಭಾಗಿಯಾಗಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ. ಫ್ರಾನ್ಸಿಸ್‌ಗೆ ವಿದೇಶಿ ಸಂಘಟನೆಗಳ ಜತೆಗೆ ನಂಟು ಇರಬಹುದು. ಹೀಗಾಗಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬಿಜೆಪಿ ವಾಗ್ದಾಳಿ:
ಈ ನಡುವೆ ರಾಷ್ಟ್ರೀಯ ಭದ್ರತೆಗೆ ಅಪಾಯ ತಂದೊಡ್ಡುವಂತಹ ಚಟುವಟಿಕೆಗಳಲ್ಲಿ ತೃಣಮೂಲ ಕಾಂಗ್ರೆಸ್ ಭಾಗಿಯಾಗಿದೆ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ. ಇಷ್ಟೊಂದು ಪ್ರಮಾಣದ ರಾಸಾಯನಿಕ ಹಾಗೂ ಡಿಆರ್‌ಡಿಒ ದಾಖಲೆಗಳು ಟಿಎಂಸಿ ನಾಯಕನ ಮನೆಯಲ್ಲಿ ಪತ್ತೆಯಾಗಲು ಹೇಗೆ ಸಾಧ್ಯ ಎಂದು ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನಾವಾಲಾ ಪ್ರಶ್ನಿಸಿದ್ದಾರೆ.