ಕಿಸಾನ್‌ ಘಾಟ್, ಸ್ಮೃತಿ ಸ್ಥಳದಲ್ಲಿ ಮಾಜಿ ಪ್ರಧಾನಿ ಮನಮೋಹನ ಸಿಂಗ್‌ ಅವರ ಸ್ಮಾರಕ ನಿರ್ಮಾಣ ?

| Published : Dec 31 2024, 01:03 AM IST / Updated: Dec 31 2024, 04:20 AM IST

manmohan singh

ಸಾರಾಂಶ

ನವದೆಹಲಿ: ಮಾಜಿ ಪ್ರಧಾನಿ ಮನಮೋಹನ ಸಿಂಗ್‌ ಅವರ ಸ್ಮಾರಕ ನಿರ್ಮಾಣಕ್ಕೆ ಸೂಕ್ತ ಸ್ಥಳದ ಹುಡುಕಾಟ ನಡೆದಿದ್ದು, ಅದಕ್ಕಾಗಿ ಯಮುನಾ ನದಿಯ ಸಮೀಪವಿರುವ ಕಿಸಾನ್‌ ಘಾಟ್‌ ಹಾಗೂ ರಾಷ್ಟ್ರೀಯ ಸ್ಮೃತಿ ಸ್ಥಳಗಳನ್ನು ಪರಿಗಣಿಸಲಾಗಿದೆ.

ನವದೆಹಲಿ: ಮಾಜಿ ಪ್ರಧಾನಿ ಮನಮೋಹನ ಸಿಂಗ್‌ ಅವರ ಸ್ಮಾರಕ ನಿರ್ಮಾಣಕ್ಕೆ ಸೂಕ್ತ ಸ್ಥಳದ ಹುಡುಕಾಟ ನಡೆದಿದ್ದು, ಅದಕ್ಕಾಗಿ ಯಮುನಾ ನದಿಯ ಸಮೀಪವಿರುವ ಕಿಸಾನ್‌ ಘಾಟ್‌ ಹಾಗೂ ರಾಷ್ಟ್ರೀಯ ಸ್ಮೃತಿ ಸ್ಥಳಗಳನ್ನು ಪರಿಗಣಿಸಲಾಗಿದೆ.

ಕಿಸಾನ್‌ ಘಾಟ್‌ ಎಂಬುದು ಮಾಜಿ ಪ್ರಧಾನಿ ಚರಣ್‌ ಸಿಂಗ್‌ ಅವರ ಸ್ಮಾರಕ ಇರುವ ಸ್ಥಳವಾಗಿದೆ. ರಾಷ್ಟ್ರೀಯ ಸ್ಮೃತಿ ಸ್ಥಳವು ರಾಷ್ಟ್ರಪತಿಗಳು, ಉಪರಾಷ್ಟ್ರಪತಿಗಳು ಹಾಗೂ ಪ್ರಧಾನಿಗಳ ಸ್ಮಾರಕ ನಿರ್ಮಾಣಕ್ಕೆ ಮೀಸಲಿರುವ ಜಾಗ.

ಅತ್ತ ಸಂದರ್ಶನವೊಂದರಲ್ಲಿ ಮಾತನಾಡಿದ ಕೇಂದ್ರ ಸಚಿವ ಹರ್ದೀಪ್‌ ಸಿಂಗ್‌ ಪುರಿ, ‘ಈಗಾಗಲೇ 4 ರಾಷ್ಟ್ರಪತಿಗಳು ಹಾಗೂ 3 ಪ್ರಧಾನಿಗಳ ಸ್ಮಾರಕಗಳಿರುವ ರಾಷ್ಟ್ರೀಯ ಸ್ಮೃತಿ ಸ್ಥಳದಲ್ಲಿ ಇಬ್ಬರಿಗಷ್ಟೇ ಜಾಗವಿದೆ. ಇನ್ನೂ ಅನೇಕರ ಸ್ಮಾರಕ ನಿರ್ಮಾಣಕ್ಕೆ ಸ್ಥಳಾವಕಾಶ ಒದಗಿಸುವಂತೆ ಕಾಂಗ್ರೆಸ್‌ ಕೋರಿದ್ದು, ಅದನ್ನು ಸ್ವೀಕರಿಸಿದ್ದೇವೆ’ ಎಂದಿದ್ದಾರೆ.

ದೇಶದ ಪ್ರಮುಖ ನಾಯಕರ ಸ್ಮಾರಕ ನಿರ್ಮಾಣಕ್ಕೆ ರಾಜ್‌ ಘಾಟ್‌, ಶಾಂತಿ ವನ, ಶಕ್ತಿ ಸ್ಥಳ, ವೀರ ಭೂಮಿ, ಏಕತಾ ಸ್ಥಳ ಸೇರಿದಂತೆ ದೆಹಲಿಯಲ್ಲಿ 245 ಎಕರೆ ಜಾಗವನ್ನು ಮೀಸಲಿಡಲಾಗಿದೆ.

ಡಾ। ಸಿಂಗ್‌ ಸಾವಿಗೆ ಶ್ರದ್ಧಾಂಜಲಿ ಸಲ್ಲಿಸದ ಪಾಕ್‌: ಜನರ ಆಕ್ರೋಶ

ಲಾಹೋರ್‌: ಭಾರತದ ಮಾಜಿ ಪ್ರಧಾನಿ ಡಾ। ಮನಮೋಹನ್‌ ಸಿಂಗ್‌ ಅವರ ನಿಧನಕ್ಕೆ ಇಡೀ ವಿಶ್ವವೇ ಶ್ರದ್ಧಾಂಜಲಿ ಸಲ್ಲಿಸಿದರೆ, ಇತ್ತ ಪಾಕಿಸ್ತಾನದ ಪ್ರಧಾನಿ ಶಹಬಾಜ್‌ ಷರೀಫ್‌ ಮತ್ತು ಅವರ ಸೋದರ, ಮಾಜಿ ಪ್ರಧಾನಿ ನವಾಜ್‌ ಷರೀಫ್‌ ಮಾತ್ರ ಸಂತಾಪ ಸೂಚಿಸಿಲ್ಲ. ಆದರೆ ಅಮೆರಿಕದ ಮಾಜಿ ಅಧ್ಯಕ್ಷ ಜಿಮ್ಮಿ ಕಾರ್ಟೆಲ್‌ ಅವರ ನಿಧನಕ್ಕೆ ಮಾತ್ರ ಸಂತಾಪ ಸೂಚಿಸಿದ್ದಾರೆ. ಇದು ಪಾಕಿಸ್ತಾನಿಗರ ಕೆಂಗಣ್ಣಿಗೆ ಗುರಿಯಾಗಿದೆ.ಈ ಬಗ್ಗೆ ಪಾಕಿಸ್ತಾನದ ಪತ್ರಕರ್ತರು ಪ್ರಧಾನಿ ಮತ್ತು ಮಾಜಿ ಪ್ರಧಾನಿಯನ್ನು ಝಾಡಿಸಿದ್ದು, ‘ಇವರಿಗೆ ಮೋದಿ ಅವರಿಗೆ ತೊಂದರೆ ಕೊಡುವುದು ಇಷ್ಟವಿಲ್ಲ. ಹಾಗಾಗಿ ಸಂತಾಪ ಸೂಚಿಸಿಲ್ಲ. ಅಥವಾ ‘ಸತ್ತರೆ ಸಾಯಲಿ’ ಎನ್ನುವ ಇವರ ಪಿಎಂಎಲ್‌ಎನ್‌ ಪಕ್ಷದ ಸಿದ್ಧಾಂತವೂ ಏನೋ’ ಎಂದು ವ್ಯಂಗ್ಯವಾಡಿದ್ದಾರೆ.

ಸಿಂಗ್ ಕುಟುಂಬದ ಗೌಪ್ಯತೆ ಕಾರಣ ಅಸ್ಥಿ ವಿಸರ್ಜನೆಗೆ ಹೋಗಿಲ್ಲ: ಕಾಂಗ್ರೆಸ್‌

ನವದೆಹಲಿ: ಯಮುನಾ ನದಿಯಲ್ಲಿ ಡಾ. ಮನಮೋಹನ್ ಸಿಂಗ್ ಅವರ ಅಸ್ಥಿ ವಿಸರ್ಜನೆ ಕಾರ್ಯಕ್ರಮದ ವೇಳೆ ಕಾಂಗ್ರೆಸ್‌ ನಾಯಕರು ಪಾಲ್ಗೊಳದೇ ಇರುವುದಕ್ಕೆ ಬಿಜೆಪಿಗರು ಟೀಕೆ ಮಾಡಿದೆ. ಇದಕ್ಕೆ ಕಾಂಗ್ರೆಸ್‌ ತಿರುಗೇಟು ನೀಡಿದ್ದು, ‘ಸಿಂಗ್ ಕುಟುಂಬದ ಗೌಪ್ಯತೆ ಕಾರಣಕ್ಕೆ ಚಿತಾಭಸ್ಮ ವಿಸರ್ಜನೆಯಲ್ಲಿ ಭಾಗಿಯಾಗಿಲ್ಲ’ ಎಂದಿದೆ.

ಕಾಂಗ್ರೆಸ್‌ ನಾಯಕ ಪವನ್ ಖೇರಾ ಮಾತನಾಡಿ, ‘ಸಿಂಗ್ ಕುಟುಂಬದ ಗೌಪ್ಯತೆ ಮತ್ತು ಗೌರವದ ಕಾರಣಕ್ಕೆ ಪಕ್ಷದ ಹಿರಿಯ ನಾಯಕರು ಚಿತಾಭಸ್ಮ ಕಾರ್ಯಕ್ರಮದಲ್ಲಿ ಭಾಗಿಯಾಗಲಿಲ್ಲ. ಅಂತ್ಯಕ್ರಿಯೆ ವೇಳೆ ಸೋನಿಯಾ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಮನಮೋಹನ್ ಸಿಂಗ್ ಅವರ ಕುಟುಂಬವನ್ನು ಅವರ ನಿವಾಸದಲ್ಲಿ ಭೇಟಿಯಾಗಿದ್ದರು. ನಂತರ ಶವಸಂಸ್ಕಾರದಲ್ಲಿ ಗಣ್ಯರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದ ಕಾರಣ, ಹೆಚ್ಚು ಕುಟುಂಬಸ್ಥರು ಬರಲಾಗಲಿಲ್ಲ. ಹೀಗಾಗಿ ಅಸ್ಥಿ ವಿಸರ್ಜನೆಗೆ ಹತ್ತಿರದ ನೆಂಟರಿಗೆ ತೊಂದರೆ ನೀಡಬಾರದು ಎಂದು ಕಾಂಗ್ರೆಸ್ಸಿಗರು ಹೋಗಲಿಲ್ಲ. ಕುಟುಂಬದ ಹತ್ತಿರದವರಿಗೆ ಅಸ್ಥಿ ವಿಸರ್ಜನೆ ಮುಖ್ಯ ಕಾರ್ಯಕ್ರಮ’ ಎಂದರು.